News

ರೈತರೊಂದಿಗೆ ಒಂದು ದಿನ ಕಳೆದ ಕೃಷಿ ಸಚಿವ ಬಿ.ಸಿ. ಪಾಟೀಲ್

15 November, 2020 9:37 AM IST By:

ರಾಜ್ಯದಲ್ಲಿ ಮೊದಲ ಬಾರಿಗೆ ರೈತರೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್  ತಮ್ಮ ಜನ್ಮ ದಿನದಂದೇ ಕೆ.ಆರ್. ಪೇಟೆ ತಾಲೂಕಿನಲ್ಲಿ ವಿಶೇಷವಾಗಿ ಆಚರಿಸಿದರು.

ಕೃಷಿ ಸಚಿವ ಬಿ. ಸಿ ಪಾಟೀಲರ ಹುಟ್ಟುಹಬ್ಬದೊಂದಿಗೆ ರೈತರೊಂದಿಗೆ ಒಂದು ದಿನ ದಿನ ಕಾರ್ಯಕ್ರಮವಿದ್ದರಿಂದ ಮಂಡ್ಯ ಜಿಲ್ಲೆಯ ಕೆ ಆರ್. ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರ ಗೊಂಡಿತ್ತು. ಅದು ದೀಪಾವಳಿ ಹಬ್ಬದ ಆಚರಣೆ ಆಗಿರಲಿಲ್ಲ; ಬದಲಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ರಾಜ್ಯದಲ್ಲೇ ಮೊದಲ ಬಾರಿ ಹಮ್ಮಿಕೊಂಡಿದ್ದ ‘ರೈತರೊಂದಿಗೆ ಒಂದು ದಿನ’ ವಿಶೇಷ ಕಾರ್ಯಕ್ರಮ ವಾಗಿತ್ತು.

ಹೌದು, ಕೃಷಿ ಸಚಿವ ಬಿ.ಸಿ ಪಾಟೀಲ್ ಕಳೆದೆರಡು ದಿನಗಳ ಹಿಂದೆ ನಾಡಿನ ಬೆನ್ನೆಲುಬೆನಿಸಿದ ರೈತರ ಬದುಕನ್ನು ಇನ್ನಷ್ಟು ಹಸನು ಮಾಡಲು, ಅವರ ಸಂಕಷ್ಟ ಸಮಸ್ಯೆಗಳನ್ನು ಖುದ್ದಾಗಿ ಕೇಳಿ ಪರಿಹರಿಸುವ ಮೂಲಕ ಅನ್ನದಾತನದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ರೈತರೊಂದಿಗೆ ಒಂದು ದಿನ ಎಂಬ ವಿನೂತನ ಯೋಜನೆಯನ್ನು ಘೋಷಣೆ ಮಾಡಿದ್ದರು.

ತನ್ನ ಹುಟ್ಟುಹಬ್ಬದಿಂದ ಪ್ರತಿ ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ ಎರಡು ಗ್ರಾಮಗಳಲ್ಲಿ ರೈತರೊಂದಿಗೆ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದರು. ತನ್ನ ಹುಟ್ಟುಹಬ್ಬದಿಂದಲೇ ಈ ವಿಶೇಷ ಕಾರ್ಯಕ್ರಮ ಹೊಸತನಕ್ಕೆ ನಾಂದಿಯಾಡಿತು.

ಕೃಷಿ ಸಚಿವರು ಗ್ರಾಮಕ್ಕೆ ಬರುತ್ತಾರೆಂಬ ಸುದ್ದಿ ತಿಳಿದು ಗ್ರಾಮಸ್ಥರು ಸೇರಿದಂತೆ ಕೃಷಿ ಇಲಾಖೆಯು  ಇಡೀ ಊರನ್ನು ಸ್ವಚ್ಛ
ಗೊಳಿಸಿ, ಸಿಂಗರಿಸಿದ್ದರು. ಇಡೀ ಊರು ಚಲನಚಿತ್ರದ ಚಿತ್ರೀಕರಣಕ್ಕೆ ಸಜ್ಜಾದಂತೆ ಕಂಡುಬಂದಿತು. ಪಾಟೀಲರು ಊರಿಗೆ ಬಂದೊಡನೆ ಅವರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿ ಊರವರು ಖುಷಿಪಟ್ಟರೆ, ಮಹಿಳೆಯರು ಆರತಿ ಎತ್ತಿ ಆಶೀರ್ವದಿಸಿದರು. ನೂರಾರು ಮಹಿಳೆಯರು ಪೂರ್ಣಕಂಭ ಹೊತ್ತು ಸ್ವಾಗತ ಕೋರಿದರು. ಜಾನಪದ ಕಲಾತಂಡಗಳ ಪ್ರದರ್ಶನ ಮೆರಗು ನೀಡಿತು.

ಕೆ.ಆರ್. ಪೇಟೆ ತಾಲೂಕಿನ ಮಡವಿನಕೋಡಿ ಗ್ರಾಮಕ್ಕೆ ದೀಪಾವಳಿ ಸಂಭ್ರಮ ಎದ್ದುಕಾಣುತ್ತಿತ್ತು.  ಕೃಷಿ ಸಚಿವರು ರೈತರೊಂದಿಗೆ ಸೇರಿ ಭತ್ತ, ರಾಗಿ ನಾಟಿ ಮಾಡಿದರು. ಆಡು, ಕುರಿ, ಕೋಳಿ ನೋಡಿ ಸಂಭ್ರಮಿಸಿದರು. ರೈತರ ಜೊತೆ ರೈತರಾಗಿ ದುಡಿದು, ಜನ್ಮದಿನ ಆಚರಿಸಿದ್ದರಿಂದ ರೈತಬಾಂಧವರು ಖುಷಿ ಪಟ್ಟರು. ರೈತ ಮಹಿಳೆಯರ ಜೊತೆಗೂಡಿ ರಾಗಿ ನಾಟಿ ಮಾಡಿದರು; ಸೋಬಾನೆ ಪದಕ್ಕೆ ಹಾಡಿದ ಮಹಿಳೆಯರಿಗೆ ಹಿಮ್ಮೇಳವಾದರು. ಇವರ ಜೊತೆಗೆ  ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡರೂ ಭತ್ತನಾಟಿ ಯಂತ್ರದಲ್ಲಿ ಕುಳಿತು ಗದ್ದೆಗೆ ಪೈರು ಹಾಕಿದರು. ತಲೆಗೆ ಹಸಿರು ಟವೆಲ್‌ ಕಟ್ಟಿದ್ದ ಅವರು ರೈತರೇ ಆಗಿ ಕಂಡುಬಂದರು. ಇದರಿಂದಾಗಿ ರೈತ ಮಹಿಳೆಯರು ಪುಳಕಿತಗೊಂಡು ಸಚಿವರೊಂದಿಗೆ ಸಂಭ್ರಮಿಸಿದರು.

ಹೊಸಕೋಟೆ ತಾಲೂಕಿನ ಪ್ರಗತಿಪರ ರೈತ ಜಯರಾಮ ಅವರ ಭತ್ತದ ಗದ್ದೆಗೆ ಸಚಿವರು ಭೇಟಿ ನೀಡಿ, ಸಾವಯವ ಪದ್ಧತಿಯಲ್ಲಿ ಬೆಳೆದಿದ್ದ ಭತ್ತದ ತಾಕನ್ನು ವೀಕ್ಷಿಸಿದದರು. ಬಳಿಕ ಆದಿತ್ಯ ಎಂಬುವರ ಹಿಪ್ಪುನೆರಳೆ ತೋಟ ವೀಕ್ಷಿಸಿದರು. . ಮಡವಿನಕೋಡಿ ಗ್ರಾಮದಲ್ಲಿ ಸುಗುಣ ಅವರ ಕೃಷಿ ತಾಕಿಗೆ ಭೇಟಿ ನೀಡಿ ಹಸಿರು ಗೊಬ್ಬರವನ್ನು ಮಣ್ಗೆ ಸೇರಿಸಿದರು.

ಪ್ರಗತಿಪರ ಕೃಷಿಕ ಮಹಿಳೆ ಲಕ್ಷ್ಮಿದೇವಮ್ಮ ಅವರ ಸಮಗ್ರ ಕೃಷಿ ತಾಕು ಹಾಗೂ ದೊಡ್ಡಯಾಚೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಮೋಹನ್ ಅವರ ಸಾವಯವ ಕೃಷಿ ತಾಕಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಕೆಲ ರೈತರೊಂದಿಗೆ ಚರ್ಚಿಸಿದರು. ರೈತ ಮುಖಂಡರೊಂದಿಗೆ ಗೂಗಲ್‌ ಮೀಟ್‌ ಮೂಲಕ ಸಭೆಯೂ ನಡೆಯಿತು. ಚಿಕ್ಕಂದಿನಲ್ಲಿ ನಾನೂ ಹೊಲದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಬಾಲ್ಯ ನೆನಪಾಗುತ್ತಿದೆ’ ಎಂದು ಸಂತಸ ಹಂಚಿಕೊಂಡರು. ನಗರಗಳಿಗೆ ರೈತರ ಮಕ್ಕಳ ವಲಸೆ ತಡೆಯಲು ಕೃಷಿ ಇಲಾಖೆಯಲ್ಲಿ ರೈತಮಿತ್ರ ಹುದ್ದೆ ಸೃಷ್ಟಿಸಿ ಶೀಘ್ರ 2,236 ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ಹೇಳಿದರು.