News

ಕರ್ನಾಟಕ ರಾಜ್ಯಕ್ಕೆ ಬಸವರಾಜ ಬೊಮ್ಮಾಯಿ 23ನೇ ಮುಖ್ಯಮಂತ್ರಿ

28 July, 2021 9:54 AM IST By:
ಬಸವರಾಜ ಬೊಮ್ಮಾಯಿಯವರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಸಿಎಂಯನ್ನಾಗಿ ಆಯ್ಕೆ ಮಾಡಲಾಯಿತು

ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿಯವರಿಗೆ ರಾಜ್ಯದ ಚುಕ್ಕಾಣಿ ಹಿಡಿಯುವ ಅವಕಾಶ ಸಿಕ್ಕಿದೆ. ಈ ಮೂಲಕ ಅಪ್ಪ ಮಕ್ಕಳು ಮುಖ್ಯಮಂತ್ರಿಗಳು ಎರಡು ಬಾರಿ ಕರ್ನಾಟಕ ರಾಜ್ಯ ಸಾಕ್ಷಿಯಾಗಿದೆ.

ಎಸ್.ಆರ್. ಬೊಮ್ಮಾಯಿ ನಂತರ ಇದೀಗ ಅವರ ಪುತ್ರ ಬಸಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗುವ ಯೋಗ ಪಡೆದಿದ್ದಾರೆ. ಇದಕ್ಕಿಂತ ಮುಂಚಿತವಾಗಿ ಹೆಚ್.ಡಿ ದೇವೇಗೌಡ ಹಾಗೂ ಅವರ ಪುತ್ರ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.

ರಾಜ್ಯದಲ್ಲಿ ಎರಡು ಬಾರಿ ಅಪ್ಪ ಮಕ್ಕಳು ಮುಖ್ಯಮಂತ್ರಿ ಆಗುವ ಯೋಗ ಒದಗಿ ಬಂದಿದೆ. ದೇವೇಗೌಡ ಮತ್ತು ಅವರ ಪುತ್ರ ಜನತಾದಳ ಮತ್ತು ಜೆಡಿಎಸ್ ನಿಂದ ಎಸ್ ಆರ್ ಬೊಮ್ಮಾಯಿ ಜನತಾ ದಳದಿಂದ ಅವರ ಪುತ್ರ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಮುಖ್ಯಮಂತ್ರಿ ಯಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ವರಿಷ್ಠರ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಆಯ್ಕೆಗೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ ಹಾಗೂ ಕಿಷನ್ ರೆಡ್ಡಿ ಕೇಂದ್ರ ವೀಕ್ಷಕರಾಗಿ ಪಾಲ್ಗೊಂಡು ನೂತನ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆಯನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.

ಬಸವರಾಜ್ ಬೊಮ್ಮಾಯಿ 1960ರ ಜನವರಿ 18ರಂದು ಧಾರಾವಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಜನಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಪುತ್ರರಾದ ಇವರು ರಾಜಕೀಯ ಹಿನ್ನೆಲೆ ಹೊಂದಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಪತ್ನಿ ಹೆಸರು ಚೆನ್ನಮ್ಮ ಹಾಗೂ ಇಬ್ಬರು ಮಕ್ಕಳಿದ್ದಾರೆ. ಜನತಾದಳದೊಂದಿಗೆ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದ ಬಸವರಾಜ್ ಬೊಮ್ಮಾಯಿ ಕರ್ನಾಟಕ ವಿಧಾನಸೌಧಕ್ಕೆ ಎರಡು ಬಾರಿ ಧಾರವಾಡ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

ರಾಜಕೀಯ ಜೀವನ: 2008ರಲ್ಲಿ ಅವರು ಪಕ್ಷವನ್ನು ಬದಲಾಯಿಸಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸಿದ ಅವರನ್ನು ಜಲಸಂಪನ್ಮೂಲ ಸಚಿವರಾಗಿ ನೇಮಕಗೊಳಿಸಲಾಯಿತು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದಲೂ ಅವರು ಸಹಕಾರ ಸಚಿವ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮತ್ತು ಗೃಹ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ನೂತನ ಸಿಎಂ ಆಗಿ ಆಯ್ಕೆ ಮಾಡಿದ್ದಕ್ಕಾಗಿ ಬಸವರಾಜ ಬೊಮ್ಮಾಯಿ  ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಧನ್ಯವಾದ ತಿಳಿಸಿದ್ದಾರೆ. ನನ್ನ ಹೆಸರನ್ನು ಸೂಚಿಸಿ ಬಿ.ಎಸ್‌ ಯಡಿಯೂರಪ್ಪ ಆಶೀರ್ವಾದ ಮಾಡಿದ್ದಾರೆ. ನನ್ನನ್ನು ಮುಖ್ಯಮಂತ್ರಿಯಾಗಿ ಆರಿಸಿದ  ಪಕ್ಷದ ಎಲ್ಲಾ ಶಾಸಕರಿಗೆ ಹೃದಯಪೂರ್ವಕ ಧನ್ಯವಾದಗಳು. ಪಕ್ಷದ ನಾಯಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ರಾಜ್ಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇನೆ. ಕೊವಿಡ್ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತೇನೆ ಎಂದು ಹೇಳಿದರು.