ನಾಗರಿಕತೆಯ ಉಳಿವು ಅರಣ್ಯ ಪ್ರದೇಶದ ಮೇಲೆ ಅವಲಂಬನೆಯಾಗಿದೆ. ಆದರೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಜಾಗತೀಕರಣದ ಪರಿಣಾಮವಾಗಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಈ ವಿದ್ಯಮಾನವು ಭಾರತದಂತಹ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರದ ಮೇಲೆ ನೇರ ಮತ್ತು ಹೆಚ್ಚಿನ ಪರಿಣಾಮ ಉಂಟುಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಕವಾಗಿ ಬಳಸಿಕೊಳ್ಳುತ್ತಿರುವ ಮರಗಳಾದ ತೇಗ, ಮತ್ತಿ, ಸೀಸಂ ಮತ್ತು ನಂದಿ ಮುಂತಾದ ಬೆಲೆಬಾಳುವ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಆದ್ದರಿಂದ ಈ ಮರಗಳನ್ನು ಸಂರಕ್ಷಿಸಲು ಪರ್ಯಾಯ ಮರಗಳನ್ನು ಗುರುತಿಸುವುದು ಅತಿ ಅವಶ್ಯಕವೆನಿಸಿದ್ದು ಇಂತಹ ಮರಗಳಲ್ಲಿ ಬಿದಿರು ಪ್ರಮುಖವಾಗಿದೆ. ಬಿದಿರು ತನ್ನದೇ ಆದ ಹಲವಾರು ವಿಶಿಷ್ಟ ಗುಣಗಳನ್ನು ಹೊಂದಿದ್ದು ಸಾಂಪ್ರದಾಯಿಕ ಮರಗಳನ್ನು ಪರ್ಯಾಯವಾಗಿ ಬೆಳೆಸಿ ಅಭಿವೃದ್ಧಿ ಪಡಿಸುವ ಅವಶ್ಯಕತೆಯಿದೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸುಮಾರು ೨.೫ ದಶಲಕ್ಷ ಜನರು ಬಿದಿರಿನ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಿದಿರಿನಿಂದ ಆಗುವ ವಿವಿಧ ಉಪಯೋಗಗಳು. ಬಿದಿರು ಬೆಳೆಯು ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ (ಆಹಾರ, ಉರುವಲು, ವಸತಿ ಮತ್ತು ಬಟ್ಟೆ). ಆದ್ದರಿಂದ ಬಿದಿರನ್ನು ಸಾಮಾನ್ಯವಾಗಿ ‘ಬಡವರ ಮರ’ ಹಾಗೂ ‘ಹಸಿರು ಬಂಗಾರ’ ವೆಂದು ಕರೆಯಲಾಗುತ್ತದೆ. ಬಿದಿರು ಇಲ್ಲದೇ ರೈತನ ಕೆಲಸವಿಲ್ಲ. ರೈತನ ದಿನನಿತ್ಯದ ಬಳಕೆಗೆ ಬೇಕಾಗುವ ವ್ಯವಸಾಯದ ಉಪಕರಣಗಳಿಗೆ ಬಿದಿರು ಅತೀ ಅವಶ್ಯಕ ಸಂಪನ್ಮೂಲವಾಗಿದೆ.
‘ಬಿದಿರು ಆಧಾರಿತ ಕೃಷಿ ಅರಣ್ಯ ಪದ್ಧತಿಯ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಹೆಚ್ಚು ಆಹಾರ ಧಾನ್ಯಗಳನ್ನು ಬೆಳೆಯಬಹುದಾಗಿದೆ. ಅಷ್ಟೇ ಅಲ್ಲದೇ ಕೆಲವೊಂದು ಜಾತಿಯ ಬಿದಿರಿನ ಮರಗಳ ಕಾಂಡವನ್ನು ನೇರವಾಗಿ ತರಕಾರಿ ರೂಪದಲ್ಲಿ ಉಪಯೋಗಿಸಲಾಗುತ್ತಿದೆ. ಉದಾಹರಣೆಗೆ ಕಿರು ಬಿದಿರು ಎಂಬ ಜಾತಿಯ ಬಿದಿರುಗಳನ್ನು ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರಕ್ಕೆ ಬಳಸಲಾಗುತ್ತಿದೆ. ಸಸಿಗಳನ್ನು ನೆಡುವ ಪ್ರದೇಶದಲ್ಲಿ ಹೆಬ್ಬಿದಿರಿಗೆ ಸಾಮಾನ್ಯವಾಗಿ ಸುಮಾರು ೭x೭ ಮೀಟರ್ ಮತ್ತು ಕಿರು ಬಿದಿರಿಗೆ ೩x೩ ಮೀಟರ್ ಅಂತರ ನೀಡಲಾಗುತ್ತದೆ.
ಜೂನ್ ತಿಂಗಳು ಪ್ರಶಸ್ತ ಸಮಯ
ಅದೇ ರೀತಿ ಮಾರಿಹಾಳ ಬಿದಿರಿಗೆ ೪x೪ ಮೀಟರ್ ಅಂತರದಲ್ಲಿ ನೆಡಲಾಗುತ್ತದೆ. ಅಲ್ಲದೆ, ಬೇಸಿಗೆ ಕಾಲದಲ್ಲಿ ೬೦x೬೦x೬೦ ಘನ ಸೆಂಟಿ ಮೀಟರ್ ಗುಂಡಿಗಳನ್ನು ತೋಡಲಾಗುತ್ತದೆ. ತೋಡಿದ ಗುಂಡಿಗಳನ್ನು ಸ್ವಲ್ಪ ಸಮಯ ಬಿಟ್ಟು ಮಣ್ಣಿನಿಂದ ಅರ್ಧದಷ್ಟು ಮುಚ್ಚಬೇಕು. ಈ ವೇಳೆ ೩ರಿಂದ ೫ ಕೆ.ಜಿ ತಿಪ್ಪೆ ಗೊಬ್ಬರವನ್ನು ೩-೫ ಕಿ.ಗ್ರಾಂ ಯಷ್ಟು ಗುಂಡಿಯೊAದಕ್ಕೆ ನೀಡಬೇಕು. ನಂತರ ಪಾಲಿಥೀನ್ ಚೀಲಗಳಲ್ಲಿ ಬೆಳೆದ ಸಸಿಗಳನ್ನು ಜೂನ್ ತಿಂಗಳಿನಲ್ಲಿ ನೆಡಬೇಕು. ಮುಂಗಾರು ಪ್ರಾರಂಭದಲ್ಲಿ ಪ್ರತಿ ಹೆಕ್ಟೇರಿಗೆ ೧೦೦:೫೦:೫೦ ಕಿ.ಗ್ರಾಂ ಸಾರಜನಕ, ರಂಜಕ, ಪೋಟ್ಯಾಷ್ ರಸಗೊಬ್ಬರಗಳನ್ನು ಒದಗಿಸಬೇಕು. ಕಟಾವಿಗೆ ಫಲವತ್ತಾದ ಭೂಮಿಯಲ್ಲಿ ಬಿದಿರನ್ನು ನೆಟ್ಟ ೫-೬ ವರ್ಷಗಳ ನಂತರ ಕಟಾವಿಗೆ ಸಿದ್ಧವಾಗುತ್ತದೆ. ಕಟಾವಿಗೆ ಬಂದ ನಂತರ ವರ್ಷಕ್ಕೊಂದು ಬಾರಿ ಬಿದಿರು ಕಟಾವು ಮಾಡಿ ಉಪಯೋಗಿಸಿಕೊಳ್ಳಬಹುದು.
ಕಟಾವು ಹೇಗೆ?
ಕಟಾವು ಮಾಡುವ ಸಂದರ್ಭದಲ್ಲಿ ಕನಿಷ್ಠ ೩ ವರ್ಷಗಳು ತುಂಬಿದ ಗಳಗಳನ್ನು ಆರಿಸಿ ತೆಗೆಯಬೇಕು. ಎಳೆಯ ಬಿದಿರನ್ನು ಕಡಿದಾಗ ಬಿದಿರು ಮೆಳೆಗಳಿಗೆ ಹಾನಿ ಉಂಟಾಗಲಿದ್ದು, ಅವುಗಳು ಸಾಯುತ್ತವೆ. ಬಲಿತ ಬಿದಿರು ಗಳಗಳು ಮೆಳೆಗಳ ಮಧ್ಯದಲ್ಲಿ ಇರುವುದರಿಂದ ಅವುಗಳನ್ನು ನಿಧಾನವಾಗಿ ಬಿಡಿಸಿಕೊಂಡು ಹೊರತೆಗೆಯಬೇಕು. ಕಡಿಯುವಾಗ ನೆಲದಿಂದ ಸಾಧಾರಣ ೦.೫ ಮೀ. ಎತ್ತರದಲ್ಲಿ ಕಡಿದು ಮೆಳೆಯಲ್ಲಿ ಕನಿಷ್ಠ ಒಂದು ಗೆಣ್ಣು ಉಳಿಯುವಂತೆ ನೋಡಿಕೊಳ್ಳಬೇಕು. ಬಿದಿರು ಸಾಮಾನ್ಯವಾಗಿ ೫-೬ ವರ್ಷಗಳಲ್ಲಿ ಕಟಾವಿಗೆ ಬರುತ್ತದೆ. ಬೇಸಿಗೆಯಲ್ಲಿ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಿದರೆ ಇನ್ನೂ ಬೇಗ ಇಳುವರಿಯನ್ನು ಪಡೆಯಬಹುದು. ಹಾಗೇ ಬಿದಿರಿನಿಂದ ಉದುರುವ ಎಲೆಗಳಿಂದ ಉತ್ತಮ ಗೊಬ್ಬರವನ್ನು ಪಡೆಯಬಹುದು. ಹಾಗೂ ಸಜೀವ ಬೇಲಿಯಾಗಿಯೂ ಕೂಡ ಬಿದಿರನ್ನು ಉಪಯೋಗಿಸಬಹುದು’ ಎನ್ನುತ್ತಾರೆ ಶಿವಮೊಗ್ಗದ ಪೊನ್ನಂಪೇಟೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಅರಣ್ಯ ಕೃಷಿ ಮತ್ತು ಕೃಷಿ ಅರಣ್ಯ ವಿಭಾಗದ ಮುಖ್ಯಸ್ಥರಾಗಿರುವ ಡಾ. ರಾಮಕೃಷ್ಣ ಹೆಗಡೆ ಅವರು.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮತ್ತಿಹಳ್ಳಿ ಗ್ರಾಮದವರಾಗಿರುವ ಪ್ರಗತಿಪರ ರೈತ ಜನಾರ್ಧನ ಹೆಗಡೆ ಅವರು ಬಿದಿರು ಬೆಳೆಯುತ್ತಾರೆ. ಅವರ ಅನುಭವದ ಪ್ರಕಾರ, ‘ಮಾರುಕಟ್ಟೆಯಲ್ಲಿ ಈಗ ದೊಡ್ಡ ಬಿದಿರು ಬೆಲೆ ಒಂದು ಗಳಕ್ಕೆ (೫-೬ ಮೀಟರ್ ಉದ್ದ) ೪೦-೫೦ ರೂ. ಇದೆ. ಒಂದು ಸಣ್ಣ ಬಿದಿರು ಗಳಕ್ಕೆ (೩-೪ ಮೀಟರ್ ಉದ್ದ) ೧೨-೧೫ ರೂ. ಇದೆ. ಸಾಮೆ ಅಥವಾ ಮಾರಿಹಾಳ ಬಿದಿರು ಗಳಕ್ಕೆ (೬-೭ ಮೀಟರ್ ಉದ್ದ) ೨೫- ೩೦ ರೂ. ಬೆಲೆ ಸಿಗುತ್ತದೆ. ಒಂದು ಅಂದಾಜಿನ ಪ್ರಕಾರ, ಅತ್ಯುತ್ತಮವಾಗಿ ಬೆಳೆದಿರುವ ಒಂದು ಹೆಕ್ಟೇರ್ ಬಿದಿರು ಮೆಳೆಯಿಂದ ಒಂದು ವರ್ಷಕ್ಕೆ ಸುಮಾರು ೨೦೦೦-೨೫೦೦ ಬಿದಿರಿನ ಗಳಗಳನ್ನು ಕೊಯ್ಲು ಮಾಡಬಹುದು. ಬಿದಿರಿನ ಗಳ ಮಾತ್ರವಲ್ಲದೆ ಬಿದಿರು ಬೇಸಾಯದಿಂದ ಮಣ್ಣಿನ ಸವಕಳಿಯನ್ನು ಸಹ ತಡೆಗಟ್ಟಬಹುದು’ ಎನ್ನುತ್ತಾರೆ.
‘ಕೇಂದ್ರ ಸರ್ಕಾರದ ಯೋಜನಾ ಆಯೋಗವು ಕೃಷಿ ಮತ್ತು ಸಹಕಾರ ಮಂತ್ರಾಲಯದ ರಾಷ್ಟಿçÃಯ ಬಿದಿರು ಯೋಜನೆ ಅಡಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಿದಿರು ಬೆಳೆಯುವುದು ಹಾಗೂ ಬಿದಿರು ಬೆಳೆಯುವ ಪ್ರದೇಶವನ್ನು ವಿಸ್ತರಿಸಲು ಪ್ರೋತ್ಸಾಹ ನೀಡಲಾಗುತ್ತದೆ. ನೈಸರ್ಗಿಕವಾಗಿ ಬೆಳೆದ ಬಿದಿರು ಪ್ರದೇಶವನ್ನು ಸಂರಕ್ಷಿಸುವುದು ಮತ್ತು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಬಿದಿರು ಆಧಾರಿತ ಕೈಗಾರಿಕೋದ್ಯಮವನ್ನು ಆಧುನೀಕರಿಸುವುದು. ಅರಣ್ಯ ಪ್ರದೇಶಗಳಲ್ಲಿ ಹಾಗೂ ರೈತರ ಪಾಳು ಭೂಮಿಯಲ್ಲಿ ಬಿದಿರು ನೆಡುತೋಪನ್ನು ಬೆಳೆಸುವುದು ಸಹ ಇದೇ ಯೋಜನೆ ವ್ಯಪ್ತಿಗೆ ಬರುತ್ತದೆ. ರೈತರು ತಮ್ಮ ಹತ್ತಿರದ ಸಾಮಾಜಿಕ ಅರಣ್ಯ ವಿಭಾಗಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು’ ಎಂದು ಹಾವೇರಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಾಬು ಎಸ್. ಅವರು ಮಾಹಿತಿ ನೀಡಿದ್ದಾರೆ.
ಮಾಹಿತಿ: ಡಾ. ಅಶೋಕ ಪಿ., ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು