News

ಕೋವಿಡ್ನಿಂದ ಅನಾಥರಾದ ಮಕ್ಕಳ ಹಿತ ಕಾಯಲು ಬಾಲಸೇವಾ ಯೋಜನೆ ಜಾರಿ: ಶಶಿಕಲಾ ಜೊಲ್ಲೆ

23 June, 2021 9:18 PM IST By:

ಕೋವಿಡ್ ಎರಡನೇ ಅಲೆ ವೇಳೆ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ನೆರವಿಗಾಗಿ ಮುಖ್ಯಮಂತ್ರಿಗಳ ಬಾಲ ಸೇವಾ ಯೋಜನೆ ಹಾಗೂ ದಾನಿಗಳ ಮೂಲಕ ಮಕ್ಕಳ ಭವಿಷ್ಯ ರೂಪಿಸಲು ಬಾಲ ಹಿತೈಶಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವರಾದ ಶಶಿಕಲಾ ಜೊಲ್ಲೆ ಅವರು ಹೇಳಿದರು.

ಸಂಭಾವ್ಯ ಕೋವಿಡ್ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ 2ನೇ ಅಲೆ ವೇಳೆ ರಾಜ್ಯದಲ್ಲಿ ಒಟ್ಟು 52 ಮಕ್ಕಳು ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಏಕ ಪೋಷಕರನ್ನು ಹೊಂದುವಂತಾಗಿದೆ. ಅಂತಹ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದ ಸಚಿವೆ, ‘ಈಗಾಗಲೆ ರಾಜ್ಯದ 20 ಜಿಲ್ಲೆಗಳಲ್ಲಿ ಖುದ್ದು ಪ್ರವಾಸ ಕೈಗೊಂಡು ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದೇನೆ. ಅನಾಥ ಮಕ್ಕಳ ಸಂಬಂಧಿಕರು ಹಾಗೂ ಮಕ್ಕಳೊಂದಿಗೆ ವಿಡಿಯೋ ಸಂವಾದ ನಡೆಸಿ, ಮಕ್ಕಳ ಅಭಿಪ್ರಾಯ ಆಲಿಸಿದ್ದು, ಈ ಅನಾಥ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ಮೂಲಕ ಅನಾಥ ಮಕ್ಕಳಿಗೆ ಪ್ರತಿ ತಿಂಗಳು 3500 ರೂ. ನೀಡುವ ಜೊತೆಗೆ, ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕಾಗಿ ಉಚಿತ ಲ್ಯಾಪ್‌ಟಾಪ್ ಅಥವಾ ಟ್ಯಾಬ್ ನೀಡುವುದು, 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ರೂ. ನೆರವು ನೀಡಲು ನಿರ್ಧರಿಸಲಾಗಿದೆ ಎಂದರು. 

ದಾನಿಗಳಿಗೆ ಕೊರತೆಯಿಲ್ಲ:

ರಾಜ್ಯದಲ್ಲಿ ದಾನಿಗಳಿಗೆ ಕೊರತೆಯಿಲ್ಲ ಹೀಗಾಗಿ ಕೋವಿಡ್‌ನಿಂದ ತಂದೆ-ತಾಯಿ ಕಳೆದುಕೊಂಡ ಅಥವಾ ಏಕ ಪೋಷಕ ಹೊಂದಿರುವ ಮಕ್ಕಳಿಗೆ ನೈತಿಕ, ಭಾವನಾತ್ಮಕ ಹಾಗೂ ಸಾಮಾಜಿಕ ನೆರವನ್ನು ಒದಗಿಸಿ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲ ನೀಡಲು ಮುಂದಾಗುವವರಿಗೆ, ಬಾಲಹಿತೈಶಿ ಯೋಜನೆಯಡಿ ಮಗು ಮತ್ತು ದಾನಿಗಳ ನಡುವೆ ಸಂಪರ್ಕ ಕೊಂಡಿಯಂತೆ ಸರ್ಕಾರ ಕಾರ್ಯ ನಿರ್ವಹಿಸಲಿದೆ. ಹಾಗೇ, ಮಕ್ಕಳಿರದ ದಂಪತಿ, ದತ್ತು ಸ್ವೀಕಾರ ಕಾರ್ಯಕ್ರಮದಡಿ ನಿಯಮಾನುಸಾರ ದತ್ತು ಪಡೆಯಲು ಅವಕಾಶ ಕಲ್ಪಿಸಲಿದೆ ಎಂದರು. 

ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಅಲ್ಲದೆ ಅನ್ಯ ಕಾರಣಗಳಿಂದ ತಂದೆ-ತಾಯಿ ಮರಣ ಹೊಂದಿ ಅನಾಥರಾದ ಒಂದೇ ಕುಟುಂಬದ 5 ಮಕ್ಕಳನ್ನು ಗುರುತಿಸಲಲಾಗಿದೆ. ಕೋವಿಡ್ ಕಾರಣದಿಂದ ಒಂದು ಮಗು ಅನಾಥವಾಗಿದ್ದು, ಏಕ ಪೋಷಕರನ್ನು ಹೊಂದಿರುವ 125 ಮಕ್ಕಳಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಸರ್ಕಾರದಿಂದ ನೆರವು ನೀಡುವ ನಿಟ್ಟಿನನಲ್ಲಿ ಅವವರ ವಿವರಗಳನ್ನು ಬಾಲ ಸ್ವರಾಜ್ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ನಂತರದ ತಪಾಸಣೆ ಸಂದರ್ಭದಲ್ಲಿ ಒಂದು ಮಗುವಿಗೆ ಮಿಸ್ಸಿ ಸೋಂಕಿನಂತಹ ರೋಗ ಲಕ್ಷಣ ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

3ನೇ ಅಲೆ ತಡೆಗಟ್ಟಲು ಸಿದ್ಧತೆ:

ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಬಂದರೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಉಂಟಾಗುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬAಧ ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿಯು ಈಗಾಗಲೆ ಮುಖ್ಯಮಂತ್ರಿಗಳಿಗೆ ವರದಿ ನೀಡಿದೆ. ರಾಜ್ಯದಲ್ಲಿ 3ನೇ ಅಲೆ ತಡೆಗಟ್ಟುವುದು ಹಾಗೂ ನಿರ್ವಹಿಸುವ ಕುರಿತು ಇಲಾಖೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಮೊದಲನೆ ಅಲೆಯಲ್ಲಿ 18 ವರ್ಷದೊಳಗಿನ ಒಟ್ಟು 1875 ಮಕ್ಕಳು ಸೋಂಕಿಗೆ ಒಳಗಾಗಿದ್ದರು, 3ನೇ ಅಲೆಯಲ್ಲಿ ಒಟ್ಟು 2283 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ತೀವ್ರ ಗಂಭೀರ ಸ್ವರೂಪದ ಪ್ರಕರಣ ವರದಿಯಾಗಿಲ್ಲ ಎಂದು ಸಚಿವೆ.

ಉನ್ನತ ಶಿಕ್ಷಣದ ಹೊಣೆ ಹೊತ್ತ ಸಂಸದ:

ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ತಂದೆ ಹಾಗೂ ತಾಯಿ ಕಳೆದುಕೊಂಡು, ಅಜ್ಜಿಯೊಂದಿಗೆ ವಾಸಿಸುತ್ತಿರುವ ಹೊನ್ನಾಳಿ ತಾಲೂಕಿನ 6ನೇ ತರಗತಿಯ ಹೆಣ್ಣು ಮಗುವನ್ನು ವೇದಿಕೆಗೆ ಕರೆದು ಸಾಂತ್ವನದ ಮಾತುಗಳನ್ನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ‘ಪಿಯುಸಿ ತನಕ ಸರ್ಕಾರದಿಂದ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ. ಪಿಯುಸಿ ಬಳಿಕದ ಉನ್ನತ ಶಿಕ್ಷಣವನ್ನು ನಾನೇ ಉಚಿತವಾಗಿ ಕೊಡಿಸುತ್ತೇನೆ. ಈಗಲೆ ನಮ್ಮ ಸಂಸ್ಥೆಯಲ್ಲಿ ನಿನ್ನ ಹೆಸರು ನೋಂದಣಿ ಮಾಡಿಸಿ, ನೀನು ಬಯಸುವ ಉನ್ನತ ಶಿಕ್ಷಣ ಸಂಪೂರ್ಣ ಉಚಿತವಾಗಿ ದೊರೆಯುವಂತೆ ಮಾಡಲಾಗುವುದು’ ಎಂದು ಸ್ಥಳದಲ್ಲಿಯೇ ಘೋಷಿಸಿದರು. ಅಲ್ಲದೆ ಜಿಲ್ಲೆಯಲ್ಲಿ ಸಂಭಾವ್ಯ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದ ಎಲ್ಲ ಅಧಿಕಾರಿ, ಸಿಬ್ಬಂದಿ ತೀವ್ರ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಗಳೂರು ಶಾಸಕ ರಾಮಚಂದ್ರಪ್ಪ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ.ರವೀಂದ್ರನಾಥ್, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಡಿಎಚ್‌ಒ ಡಾ. ನಾಗರಾಜ್, ಜಿ.ಪಂ ಸಿಇಒ ಡಾ.ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಇದ್ದರು.