News

ಕೊರೋನಿಲ್ ಕೋವಿಡ್‌ ನಿರ್ಮೂಲನಾ ಔಷಧಿ ಎಂದು ಹೇಳಿಕೊಳ್ಳುವಂತಿಲ್ಲ- ಆಯುಷ್ ಸಚಿವಾಲಯ

02 July, 2020 10:46 AM IST By:

ತಾವು ಸಂಶೋಧಿಸಿದಿರುವ  ನೂತನ ಆಯುರ್ವೇದೀಯ ಔಷಧಿಗಳು ಕೊರೋನಾ ವೈರಸ್ ಸೊಂಕನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿಕೆ ನೀಡಿದ ಯೋಗಗುರು ಬಾಬಾ ರಾಮದೇವರವರ ಪತಂಜಲಿ ಆಯುರ್ವೇದ ಸಂಸ್ಥೆ ಈಗ ಯುಟರ್ನ್ ಹೊಡೆದಿದೆ.

ಕೊರೊನಿಲ್‌ ಕಿಟ್ ಕೊರೋನಾಗೆ ಔಷಧ ಎಂದು ಕೆಲವು ದಿನಗಳ ಹಿಂದೆ ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿತ್ತು.  ಕೊರೊನಿಲ್‌ ಕೋವಿಡ್‌ನಿಂದ ಗುಣಮುಖ ಮಾಡಲು ಬಿಡುಗಡೆಯಾದ ಔಷಧವೆಂದೇ ರಾಮ್‌ದೇವ್‌ ಹೇಳಿಕೊಂಡಿದ್ದರು. ಆದರೆ, ಈಗ ಕೋವಿಡ್‌ ‌ರೋಗವನ್ನು ಸಮರ್ಪಕವಾಗಿ ನಿರ್ವಹಿಸುವ ಒಂದು ಉತ್ಪನ್ನ ಎಂದು ಹೇಳಿದ್ದಾರೆ. 

ತಮ್ಮ ಸಂಸ್ಥೆಯ ನೂತನ ಔಷಧಿಗಳು ಕೊರೋನಾ ವೈರಸ್ ಗುಣಪಡಿಸಬಹುದೆಂದು ಘೋಷಿಸಿಕೊಳ್ಳುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆಂದು ಆರೋಪಿಸಿ ಪೊಲೀಸರು ಶುಕ್ರವಾರ ರಾಮದೇವ, ಬಾಲಕೃಷ್ಣ ಹಾಗೂ ಇತರ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಕೊರೋನಿಲ್ ನ್ನು ಒಂದು ಉತ್ಪನ್ನವಾಗಿ  ಮಾರಾಟ ಮಾಡಬಹುದು. ಆದರೆ ಕೋವಿಡ್‌ ನಿರ್ಮೂಲನಾ ಔಷಧಿ ಎಂದು ಹೇಳಿಕೊಳ್ಳುವಂತಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧ ಎಂಬುದಾಗಿ ಮಾರಾಟ ಮಾಡಬಹುದು ಎಂದು ಸಚಿವಾಲಯವು ತಿಳಿಸಿದೆ ಎಂದು ಯೋಗಗುರು ಬಾಬಾ ರಾಮದೇವ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪತಂಜಲಿ ಆಯುರ್ವೇದದಿಂದ ಬಿಡುಗಡೆಯಾದ ಕೊರೊನಿಲ್‌ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಆಯುಷ್‌ ಸಚಿವಾಲಯವು ಬುಧವಾರ ಸ್ಪಷ್ಟಪಡಿಸಿದೆ ಎಂದರು.

ತಮ್ಮ ಸಂಸ್ಥೆ ಹಾಗೂ ಆಯುಷ್ ಸಚಿವಾಲಯದ ನಡುವೆ ಯಾವುದೇ ಕೊರೋನಿಲ್ ಗೆ ಸಂಬಂಧಿಸಿದಂತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.. ಇದಕ್ಕೂ ಮುನ್ನ ಆಯುಷ್ ಸಚಿವಾಲಯ ಕೊರೋನಿಲ್ ನ್ನು ಕೋವಿಡ್-19 ಗುಣಪಡಿಸುವುದಕ್ಕಾಗಿ ಇರುವ ಆಯುವರ್ವೇದ ಔಷಧ ಎಂದು ತಾನು ಪ್ರಮಾಣೀಕರಿಸುವವರೆಗೂ ಅದನ್ನು ಮಾರಾಟ ಮಾಡಬಾರದೆಂದು ಹೇಳಿತ್ತು. ಕೊರೋನಿಲ್ ಬಿಡುಗಡೆಗೆ ಸಂಬಂಧಿಸಿದಂತೆ ಎದುರಾಗಿದ್ದ ಟೀಕೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಾಬಾ ರಾಮ್ ದೇವ್, ಕೆಲವು ಜನರಿಗೆ ಭಾರತೀಯ ಸಂಸ್ಕೃತಿಯ ಪುನರುತ್ಥಾನದಿಂದ ನೋವಾಗಿದೆ ಎಂದು ಹೇಳಿದ್ದರು. ಕೊರೋನಿಲ್ ನ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ. ಇಂದಿನಿಂದ ದೇಶಾದ್ಯಂತ ಈ ಕಿಟ್ ಲಭ್ಯವಿರಲಿದೆ ಎಂದು ಹೇಳಿದರು.