News

44 ವರ್ಷಗಳಲ್ಲೇ ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ ಶೇ. 25 ರಷ್ಟು ಹೆಚ್ಚು ಮಳೆ

29 August, 2020 2:49 PM IST By:

ಪ್ರಸಕ್ತ ವರ್ಷ ದೇಶಾದ್ಯಂತ ಉತ್ತಮ ಮಳೆಯಾಗುತ್ತಿದೆ. ಈ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಶೇ 25ರಷ್ಟು ಹೆಚ್ಚು ಮಳೆಯಾಗಿದೆ. ಇದು 44 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಸಕ್ತ ವರ್ಷ ಜೂನ್ ತಿಂಗಳಿಂದಲೇ ದೇಶದ ಎಲ್ಲಾ ಕಡೆ ಭಾರಿ ಮಳೆ ಸುರಿಯಿತು. ದೇಶದ ಅನೇಕ ಕಡೆಗಳಲ್ಲಿ ಭಾರಿ ಮಳೆ, ಪ್ರವಾಹ ಪರಿಸ್ಥಿತಿ ಉಂಟಾಗಿರುವ ನಡುವೆಯೇ ಈ ರೀತಿ ವರದಿಯಾಗಿದೆ. ಕಳದೆ 44 ವರ್ಷಗಳಲ್ಲಿಯೇ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ದಾಖಲೆಯಾಗಿದೆ. ಇಷ್ಟೊಂದು ಪ್ರಮಾಣ ಮಳೆ ಕಳೆದ ನಾಲ್ವತ್ತ ನಾಲ್ಕು ವರ್ಷಗಳ ಹಿಂದೆ ಸುರಿದಿತ್ತು. ಈ ಹಿಂದೆ 1983ರ ಆಗಸ್ಟ್ ತಿಂಗನಲ್ಲಿ ಶೇ 23.8 ಹೆಚ್ಚುವರಿ ಮಳೆಯಾಗಿತ್ತು. 1976ರ ಆಗಸ್ಟ್‌ ತಿಂಗಳಲ್ಲಿ ದೇಶದಲ್ಲಿ ಶೇ 28.4ರಷ್ಟು ಹೆಚ್ಚುವರಿ ಮಳೆಯಾಗಿತ್ತು ಎಂದು ಇಲಾಖೆ ತಿಳಿಸಿದೆ.

ಈವರೆಗೆ ದೇಶದಲ್ಲಿ ಮಾಮೂಲಿಗಿಂತ ಶೇ 9ರಷ್ಟು ಹೆಚ್ಚುವರಿ ಮಳೆಯಾಗಿದೆ. ಬಿಹಾರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್, ಗೋವಾ ರಾಜ್ಯಗಳಲ್ಲಿ ಹೆಚ್ಚು ಮಳೆಯಾಗಿದೆ. ಸಿಕ್ಕಿಂನಲ್ಲಿ ದಾಖಲೆ ಪ್ರಮಾಣದ ಹೆಚ್ಚುವರಿ ಮಳೆಯಾಗಿದೆ. ಅನೇಕ ರಾಜ್ಯಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ.

ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಪ್ರಕಾರ, ಆಗಸ್ಟ್ 27ರವರೆಗೆ ದೇಶದ ಜಲಾಶಯಗಳ ಒಟ್ಟಾರೆ ನೀರು ಸಂಗ್ರಹದ ಸ್ಥಿತಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉತ್ತಮವಾಗಿದೆ. ಕಳೆದ 10 ವರ್ಷಗಳ ಸರಾಸರಿ ಸಂಗ್ರಹಕ್ಕಿಂತಲೂ ಈ ವರ್ಷ ಉತ್ತಮವಾಗಿದೆ. ಗಂಗಾ, ನರ್ಮದಾ, ಗೋದಾವರಿ, ಕೃಷ್ಣಾ, ಕಾವೇರಿ ಸೇರಿದಂತೆ ಪ್ರಮುಖ ನದಿಗಳ ಜಲಾಶಯಗಳ ನೀರು ಸಂಗ್ರಹದ ಸ್ಥಿತಿಯು ಉತ್ತಮವಾಗಿದೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ.

ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ, ಮಣನಪುರ, ಮಿಜೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿಯೂ ಸಹ ದಾಖಲೆಯ ಮಳೆಯಾಗಿದೆ. ಮುಂಗಾರುವಿನ ಅವಧಿ ಜೂನ್ 1 ರಿಂದ ಸೆಪ್ಟೆಂಬರ್ 30ರವರೆಗೆ ಇರುತ್ತದೆ. ಜೂನ್ ತಿಂಗಳಲ್ಲಿ ಶೇ. 17ಕ್ಕಿಂತ ಹೆಚ್ಚು ಮಳೆಯಾಗಿದೆ. ಜುಲೈ ತಿಂಗಳಲ್ಲಿ ಶೇ. 10 ರಷ್ಟು ವಾಡಿಕೆಗಿಂತ ಕಡಿಮೆಯಾಗಿದೆ. ಆದರೆ ಆಗಸ್ಟ್ ತಿಂಗಳಲ್ಲಿ ಮಾತ್ರ ಶೇ. 97 ರಷ್ಟು ಮಳೆಯಾಗಿದೆ.