ಕೇಂದ್ರ ಸರ್ಕಾರವು ಕಾರ್ಮಿಕರ ರಾಜ್ಯ ವಿಮಾ ನಿಗಮದ ಮೂಲಕ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ವಿಮಾದಾರರಾಗಿ ನೋಂದಾಯಿತ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ಡಿ.ಜಿ. ನಾಗೇಶ ತಿಳಿಸಿದ್ದಾರೆ.
ಈ ಯೋಜನೆಯು 2021ರ ಜೂನ್ ಅಂತ್ಯದವರೆಗೆ ಚಾಲ್ತಿಯಲ್ಲಿರುತ್ತದೆ. ವಿಮಾದಾರರಾಗಿ ನೋಂದಾಯಿತ ಕಾರ್ಮಿಕರು ಹಲವಾರು ಕಾರಣಗಳಿಂದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದಾಗ ಅವರಿಗೆ ನಿರುದ್ಯೋಗ ಅವಧಿಗೆ ನಗದು ಪರಿಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ನೋಂದಣಿಯಾದ ಕನಿಷ್ಠ 2 ವರ್ಷಗಳ ಅವಧಿಯಲ್ಲಿ ವಂತಿಕೆಯನ್ನು ಪಾವತಿಸಿ ನಿರುದ್ಯೋಗಿಯಾದ ವಿಮಾದಾರನಿಗೆ, 2020ರ ಮಾರ್ಚ್ 23ರ ಪೂರ್ವದಲ್ಲಿ ದಿನಗಳಿಕೆಯ ಶೇ.25 ರಂತೆ ಗರಿಷ್ಠ 90 ದಿನಗಳ ನಿರುದ್ಯೋಗ ಪರಿಹಾರ ನೀಡಲಾಗುತ್ತದೆ. 2020ರ ಮಾರ್ಚ್ 24ರಿಂದ ಡಿಸೆಂಬರ್ 31ರ ಅವಧಿಯಲ್ಲಿ ನಿರುದ್ಯೋಗಿಯಾಗಿದ್ದಲ್ಲಿ ಶೇ.50 ರಂತೆ ಗರಿಷ್ಠ 90 ದಿನಗಳ ನಿರುದ್ಯೋಗ ಪರಿಹಾರ ನೀಡಲಾಗುವುದು.
ನಿರುದ್ಯೋಗಿಯಾದ ದಿನಾಂಕದ ಪೂರ್ವ ಮೂರು ವಂತಿಕೆ ಅವಧಿಯಲ್ಲಿ ಕನಿಷ್ಠ 78 ದಿನಗಳ ಹಾಗೂ ನಿರುದ್ಯೋಗಿಯಾದ ದಿನಾಂಕದ ಪೂರ್ವ ಎರಡು ವರ್ಷಗಳಲ್ಲಿ ಕನಿಷ್ಠ 78 ದಿನಗಳ ವಂತಿಕೆ ಪಾವತಿಸಿರಬೇಕು.
ಅರ್ಹ ವಿಮಾದಾರರು www.esic.nic.in ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ವಿಮಾದಾರರು ಸಲ್ಲಿಸಿದ ಅರ್ಜಿಯನ್ನು ಸ್ಥಳೀಯ ಇ.ಎಸ್.ಐ. ಕಚೇರಿಯವರು ಸ್ವೀಕರಿಸಿ, ವಿಮಾದಾರರು ನಿರುದ್ಯೋಗಿ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಪರಿಹಾರ ವಿಮಾದಾರನ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.