ಸಂಡೂರು ತಾಲ್ಲೂಕಿನ ದರೋಜಿ ಗ್ರಾಮದ ವಿಶೇಷಚೇತನ ಯುವಕ ಗೋಪಿಚಂದ್.ಎಲ್ ಅವರು ಚೀನಾದ ಹ್ಯಾಂಗ್‍ಝೌನಲ್ಲಿ ನಡೆಯುವ 4ನೇಯ ಏಷ್ಯನ್ ಪ್ಯಾರಾ ಗೇಮ್ಸ್‍ನ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಅ.22ರಿಂದ 29ರವರೆಗೆ ಚೀನಾದ ಹ್ಯಾಂಗ್‍ಝೌನಲ್ಲಿ 4ನೇಯ ಏಷ್ಯನ್ ಪ್ಯಾರಾ ಗೇಮ್ಸ್ ನಡೆಯಲಿವೆ. ಗೋಪಿಚಂದ್ ಅವರು 400 ಮೀ ಫ್ರೀ ಸ್ಟೈಲ್ ಹಾಗೂ 100 ಮೀ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಭಾರತವನ್ನು ಪ್ರತಿನಿಧಿಸುವ ತಂಡಕ್ಕಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ನವದೆಹಲಿಯ ಜೆಎಲ್‍ಎನ್ ಕ್ರೀಡಾ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 17 ರವರೆಗೆ ತರಬೇತಿ ಪಡೆದುಕೊಂಡಿದ್ದಾರೆ.
ಗೋಪಿಚಂದ್.ಎಲ್ ಅವರು ಚಿಕ್ಕಂದಿನಿಂದ ಈಜು ಪಟುವಾಗಿದ್ದು, ಹುಟ್ಟಿನಿಂದಲೂ ವಿಶೇಷಚೇತನರಾಗಿದ್ದಾರೆ. ಅವರ ತಂದೆ ಮತ್ತು ತಾಯಿ ಇಬ್ಬರೂ ತೋರಣಗಲ್ಲಿನ ಜಿಂದಾಲ್ ಕಂಪನಿಯಲ್ಲಿ ಗುತ್ತಿಗೆ ಆಧಾರದ ಕೆಲಸಗಾರರಾಗಿದ್ದು, ತಮ್ಮ ಬಡತನದ ನಡುವೆ ಸಹ ಮಗ ಗೋಪಿಚಂದ್ ಅವರ ಹೆಚ್ಚಿನ ಅಭ್ಯಾಸಕ್ಕಾಗಿ ಬೆಂಗಳೂರಿನ ವೈಟ್‍ಫೀಲ್ಡ್‍ನ ಮೌಂಟ್ ಲಿಟೇರಾ ಜೀ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.
ಗೋಪಿಚಂದ್ ಅವರು ಅರ್ಜುನ್ ಪ್ರಶಸ್ತಿ ವಿಜೇತರಾದ ಶರತ್ ಗಾಯಕ್‍ವಾಡ್ ಮತ್ತು ರಜನಿ ಲಕ್ಕ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ 25 ಚಿನ್ನದ ಪದಕ ಹಾಗೂ 08 ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ.
2021ರಲ್ಲಿ ಬಹ್ರೇನ್‍ನಲ್ಲಿ ನಡೆದ ಇಂಟರ್‍ನ್ಯಾಷನಲ್ ಏಷ್ಯನ್ ಯೂಥ್ ಪ್ಯಾರಾ ಗೇಮ್ಸ್, 2022ರಲ್ಲಿ ಈಜಿಪ್ಟ್‍ನ ಕೈರೋನಲ್ಲಿ ನಡೆದ ಪ್ಯಾರಾ ಸ್ವಿಮ್ಮಿಂಗ್ ಗೇಮ್ಸ್‍ನಲ್ಲಿಯೂ ಭಾಗವಹಿಸಿದ್ದಾರೆ. ಈ ಶುಭ ಸಂದರ್ಭದಲ್ಲಿ ಗೋಪಿಚಂದ್ ಅವರ ಈ ಸಾಧನೆಗೆ ಜಿಲ್ಲಾಡಳಿತವು ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.