ರಾಜ್ಯದಲ್ಲಿ ರೈತರಿಗೆ ರಸಗೊಬ್ಬರ ವಿತರಿಸದೆ ತಮ್ಮಲ್ಲೇ ಸಂಗ್ರಹಿಸಿಟ್ಟು ಕೃತಕ ರಸಗೊಬ್ಬರದ ಅಭಾವ ಸೃಷ್ಟಿಸುತ್ತಿರುವ ಅಂಗಡಿ ಮಾಲಿಕರ ಮೇಲೆ ಸರ್ಕಾರ ದಿಟ್ಟ ಕ್ರಮಕಗೊಂಡಿದೆ. ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿರುವ ಹಾಗೂ ರಸಗೊಬ್ಬರ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ವಿವಿಧೆಡೆ ಪ್ರತಿಭಟನೆ ಹಾಗೂ ಸರ್ಕಾರದ ಮೇಲೆ ರೈತರು ಆಕ್ರೋಶವ್ಯಕ್ತಪಡಿಸಿದ ಬೆನ್ನಲ್ಲೆ ಎಚ್ಚೆತ್ತ ಸರ್ಕಾರ ದಾಳಿ ಮಾಡಿ ರಾಜ್ಯದ 117 ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಿದೆ.
ಈ ಕುರಿತು ಮೈಸೂರಿನಲ್ಲಿ ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಕೃಷಿ ಸಚುವ ಬಿ.ಸಿ. ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ, ರಸಗೊಬ್ಬರ, ಯೂರಿಯಾ ಗೊಬ್ಬರದ ಕೃತಕ ರಸಗೊಬ್ಬರ ಅಭಾವ ಸೃಷ್ಟಿಸಿ ಸಮಸ್ಯೆ ಹುಟ್ಟಿಹಾಕಿದ್ದ ರಾಜ್ಯಗಳ 117 ಅಂಗಡಿಗಳ ಪರವಾನಿಗೆಯನ್ನು ರದ್ದುಮಾಡಲಾಗಿದೆ ಎಂದರು.
ಇದೇ ಮೊದಲ ಬಾರಿಗೆ ತಮ್ಮ ಅವಧಿಯಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಜಾಲವನ್ನು ಬೇಧಿಸಲಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 12 ಕೋಟಿ ರೂಪಾಯಿ ಮೊತ್ತದ ಕಳಪೆ ಬೀಜ ಪತ್ತೆ ಮಾಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಕೃತಕ ಗೊಬ್ಬರ ಅಭಾವ ಸೃಷ್ಟಿಸುವವರ ವಿರುದ್ಧ ಜಾಗೃತ ದಳ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ರಸಗೊಬ್ಬರ ಅಂಗಡಿ ಮಾರಾಟಗಾರರ ವಿರುದ್ಧ ದಾಳಿ ನಡೆಸಿದ್ದಾರೆ . ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.