News

ವ್ಯಾಪಕವಾಗಿ ಹರಡುತ್ತಿದೆ ಅಡಿಕೆಗೆ ಹಳದಿ ರೋಗ-ರೋಗ ನಿಯಂತ್ರಣಕ್ಕೆ ಇಲ್ಲಿದೆ ಮಾಹಿತಿ...

09 October, 2020 9:11 AM IST By:

ಲಾಕ್ಡೌನ್ ನಂತರ ಇತ್ತೀಚೆಗೆ ಸುರಿದ ಅತೀ ಮಳೆಯಿಂದಾಗಿ ಬೆಳೆ ಕೊಚ್ಚಿಕೊಂಡು ಹೋದ ರೈತರಿಗೆ ಒಂದಲ್ಲ ಒಂದು ಆಘಾತ ಎದುರಾಗುತ್ತಲೇ ಇದೆ. ಅತೀವೃಷ್ಟಿಯಿಂದಾಗಿ ಸ್ವಲ್ಪ ಸುಧಾರಿಸಿಕೊಳ್ಳಬೇಕೆನ್ನುವಷ್ಟರಲ್ಲಿಯೇ ಈಗ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗುತ್ತಿವೆ. ಹಾಗಾಗಿ ರೈತರಿಗೆ ಗಾಯದ ಮೇಲೆ ಮತ್ತೆ ಮತ್ತೆ ಬರೆ ಎಳೆದಂತಾಗುತ್ತಿದೆ.

ಭೂ ತಾಯಿಯನ್ನು ನಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ರೋಗಗಳು ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಇತ್ತೀಚೆಗೆ ಅಡಕೆ, ಶೇಂಗಾ, ಭತ್ತ, ತೊಗರಿ, ಶುಂಠಿ, ಈರುಳ್ಳಿ, ಮೆಕ್ಕೆಜೋಳ, ಹತ್ತಿ ಸೇರಿದಂತೆ ಹಲವಾರು ಬೆಳೆಗಳು ವಿವಿಧ ರೋಗಗಳಿಗೆ ಹಾಳಾಗುತ್ತಿವೆ.

ಅಡಿಕೆ ಬೆಳೆಗೆ ಹಳದಿ ರೋಗ:

ಅಡಿಕೆ ಬೆಳೆಯು ಹಳದಿ ಎಲೆ ರೋಗ ಬಾಧೆಗೆ ತುತ್ತಾಗಿದೆ. ಕರಾವಳಿಯ ಸುಳ್ಯ ತಾಲ್ಲೂಕು ಹಾಗೂ ಮಲೆನಾಡಿನ ಕೊಪ್ಪ, ಶೃಂಗೇರಿ ತಾಲ್ಲೂಕುಗಳಲ್ಲಿಯೇ ಈ ರೋಗ ಅತೀ ಹೆಚ್ಚು  ಪಸರಿಸಿದೆ. ನೆರೆಯ ಕಾಸರಗೋಡು ಜಿಲ್ಲೆಯ ಹಲವೆಡೆಯೂ ಹಳದಿ ಎಲೆ ರೋಗದ ಬಾಧೆ ಕಂಡುಬಂದಿದೆ. ಚಿಕ್ಕಮಗಳೂರಿನಲ್ಲಿ 2,200 ಹೆಕ್ಟೇರ್‌, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,043.38 ಹೆಕ್ಟೇರ್ ಪ್ರದೇಶ ಬಾಧಿತವಾಗಿದೆ.

ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.

ಗಿಡದಿಂದ ಗಿಡಕ್ಕೆ ಪಸರಿಸುವ ರೋಗ:

ಅಡಿಕೆ ಮರದ ಗರಿಯ ಅಂಚು ಹಳದಿಯಾಗುವುದು, ಇಳುವರಿ ಕಡಿಮೆಯಾಗುವುದು, ಶಿರ ಭಾಗ ಸಣಕಲಾಗುವುದಕ್ಕೆ ಹಳದಿ ಎಲೆ ರೋಗ ಎನ್ನಲಾಗುತ್ತದೆ. ಗಿಡದಿಂದ ಗಿಡಕ್ಕೆ ಪಸರಿಸುತ್ತಲೇ ಹೋಗುತ್ತದೆ. ರೋಗ ಬಾಧಿತ ಅಡಿಕೆಯು ಕಂದು ಬಣ್ಣಕ್ಕೆ ತಿರುಗುವುದು.

ಕೆಲವು ಬೆಳೆಗಳಿಗೆ ರೋಗಗಳು ಕಾಣಿಸಿಕೊಂಡ ಬಳಿಕ ಅಧಿಕಾರಿಗಳು, ವಿಜ್ಞಾನಿಗಳು ಕ್ಷೇತ್ರ ಭೇಟಿ ಮಾಡಿ ರೋಗ ನಿಯಂತ್ರಣಕ್ಕೆ ರೈತರಿಗೆ ಸಲಹೆ ನೀಡಿದ್ದಾರೆ.  ಎಲ್ಲಾ ರೈತರು ಸ್ಥಳೀಯ ಕೃಷಿ, ತೋಟಗಾರಿಕೆ ಇಲಾಖೆ ನೀಡುವ ಮಾಹಿತಿ ಅನುಸಾರ ಔಷಧ ಸಿಂಪಡಣೆ ಮಾಡಿ ರೋಗ ನಿಯಂತ್ರಣಕ್ಕೆ ತರಬೇಕೆಂದು ಕೃಷಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ರೋಗ ನಿಯಂತ್ರಣ:

ರೋಗ ನಿಯಂತ್ರಣಕ್ಕೆ ಸದ್ಯ ಹಸಿರೆಲೆ ಮತ್ತು ತಿಪ್ಪೆಗೊಬ್ಬರ ಒದಗಿಸಬೇಕು. 1 ಕಿ.ಗ್ರಾಂ. ಫಾಸ್ಪೇಟ್ ಗೊಬ್ಬರ, 2 ಕಿ.ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಪ್ರತಿ ಗಿಡಕ್ಕೆ ಕೊಡಬೇಕು. ಬಸಿಗಾಲುವೆ ನಿರ್ಮಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.