News

ಚಾಲಿ ಅಡಿಕೆಗೆ ಬಂಗಾರದ ಬೆಲೆ-ಅಡಿಕೆ ಬೆಳೆಗಾರರು ಖುಷ್

08 September, 2020 2:26 PM IST By:

ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಗೀಗ ಬಂಗಾರದ ಬೆಲೆ ಬಂದಿದೆ. ಕ್ಯಾಂಪ್ಕೊ ಇತಿಹಾಸದಲ್ಲಿಯೇ ಚಾಲಿ ಅಡಿಕೆಗೆ ಇದೇ ಮೊದಲ ಬಾರಿಗೆ ಕೆ.ಜಿ.ಗೆ ಗರಿಷ್ಠ .400 ಬೆಲೆ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಚಾಲಿ ಅಡಕೆ ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದ ಧಾರಣೆ ಏರಿಕೆ ಮುಂದುವರಿದಿದೆ.

ಅಡಿಕೆ ಧಾರಣೆಯನ್ನು ಇಳಿಸಿ ಲಾಭ ಗಳಿಸುವ ಖಾಸಗಿ ಮಾರುಕಟ್ಟೆ ತಂತ್ರಗಾರಿಕೆಯನ್ನು ಸಹಕಾರ ಸಂಸ್ಥೆ ಕ್ಯಾಂಪ್ಕೋ ವಿಫ‌ಲಗೊಳಿಸಿದೆ. ಧಾರಣೆ ಏರಿಸುವ ಮೂಲಕ ಖಾಸಗಿಯವರೂ ಧಾರಣೆಯನ್ನು ಇನ್ನಷ್ಟು ಏರುವ ಅನಿವಾರ್ಯತೆ ಸೃಷ್ಟಿಸಿದೆ.

ಸೋಮವಾರ ಜಿಲ್ಲೆಯಾದ್ಯಂತ ಕ್ಯಾಂಪ್ಕೊ ಶಾಖೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಹಳೆಯ ಅಡಿಕೆಗೆ 400 ರೂಪಾಯಿ ಧಾರಣೆ ನಿಗದಿಯಾಗಿತ್ತು. ಇದೇ ವೇಳೆ ಹೊಸ ಅಡಿಕೆಗೆ 360 ನೀಡಲಾಗುತ್ತಿದೆ. ತಿಂಗಳ ಹಿಂದೆ ಕ್ಯಾಂಪ್ಕೊಗಿಂತ 5–10 ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದ ಖಾಸಗಿ ವರ್ತಕರು ಇದೀಗ ಪೈಪೋಟಿಯಿಂದ ಹಿಂದೆ ಸರಿದಿದ್ದು, ಹಳೆಯ ಅಡಿಕೆಗೆ ಗರಿಷ್ಠ 390 ಹಾಗೂ ಹೊಸ ಅಡಿಕೆಗೆ 350 ನೀಡುತ್ತಿದ್ದಾರೆ. ಕ್ಯಾಂಪ್ಕೊ ಖರೀದಿ ಆರಂಭಿಸಿದ ನಂತರ ಅಡಿಕೆ ಮಾರುಕಟ್ಟೆಯಲ್ಲಿ ಗರಿಷ್ಠ ಪ್ರಮಾಣದ ಚೇತರಿಕೆ ದಾಖಲಾಯಿತು. ಆರಂಭದಲ್ಲಿ 280 ಇದ್ದ ಅಡಿಕೆ ಧಾರಣೆ, ಏರುಮುಖದತ್ತಲೇ ಸಾಗಿದೆ.

50 ರೂಪಾಯಿ ಹೆಚ್ಚಾಗುವ ನಿರೀಕ್ಷೆ ?

ಉತ್ತರ ಭಾರತದಲ್ಲಿ ಪ್ರವಾಹದ ಕಾರಣ ಪೂರ್ತಿ ಪ್ರಮಾಣದಲ್ಲಿ ಮಾರುಕಟ್ಟೆ ತೆರೆಯದಿರುವುದು ಕೂಡ ಈಗಿನ ಧಾರಣೆ ಏರಿಳಿಕೆಗೆ ಕಾರಣ. ಇದು ತಾತ್ಕಾಲಿಕ ಸಮಸ್ಯೆ. ಇದನ್ನೇ ನೆಪವಾಗಿಟ್ಟುಕೊಂಡು ಧಾರಣೆ ಇಳಿಸುವ ತಂತ್ರ ನಡೆಯುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಈ ಬಾರಿ ಫಸಲು ಕಡಿಮೆ ಆಗಿರುವುದು, ಅಂತರ್‌ ದೇಶೀಯ ಗಡಿಗಳು ತೆರವು ಸಾಧ್ಯತೆ ಕಡಿಮೆ ಇರುವುದು, ಈಗಾಗಲೇ ಶೇ. 75ರಷ್ಟು ಅಡಿಕೆ ಮಾರಾಟ ಆಗಿರುವುದು ಮೊದಲಾದ ಕಾರಣಗಳಿಂದ ಅಡಿಕೆ ಕೊರತೆ ಉಂಟಾಗಿ ಧಾರಣೆ 450 ರೂಪಾಯಿಗೆ ಏರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.

ರೈಲ್ವೆಯಲ್ಲಿ ಸಾಗಾಟ ಧಾರಣೆ ಏರಿಕೆಗೆ ಪೂರಕ:

ಕೊಂಕಣ ರೈಲ್ವೇ ಪುತ್ತೂರಿನಿಂದ ಸ್ಪರ್ಧಾತ್ಮಕ ದರದಲ್ಲಿ ಗುಜಾರಾತ್‌, ಅಹಮದಾಬಾದ್‌ ಮೊದಲಾದೆಡೆ ಅಡಿಕೆ ಸಾಗಾಟಕ್ಕೆ ಮುಂದೆ ಬಂದಿದೆ. ಇದರಿಂದ ಸಾಗಾಟದ ವೆಚ್ಚ ಇಳಿಮುಖ ಮತ್ತು ಸಮಯ ಉಳಿತಾಯವಾಗಲಿದ್ದು ಅಡಿಕೆ ಧಾರಣೆ ಏರಿಕೆಗೆ ಪರೋಕ್ಷ ಕಾರಣವಾಗಲಿದೆ. ಈ ಹಿಂದೆ ಲಾರಿ, ಟ್ರಕ್‌ಗಳಲ್ಲಿ ಅಡಿಕೆಯನ್ನು ಸಾಗಿಸಲಾಗುತ್ತಿತ್ತು.