News

50,000 ರೂ. ಕೂಡ ಉತ್ತಮ ಬೆಲೆಯೇ; ಕಾಯುತ್ತಾ ಕುಳಿತು ನಿರಾಶರಾಗಬೇಡಿ

19 September, 2021 9:26 AM IST By:
areca nut

ಕಳೆದ ಹತ್ತು ದಿನಗಳಿಂದ ಅಡಿಕೆ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 30,000 ರಿಂದ 38,000 ರೂ. ಇದ್ದ ಕೆಂಪು ಅಡಕೆ ಬೆಲೆ ಇದ್ದಕ್ಕಿದ್ದಂತೆ 60,000 ರೂ. ಗಡಿ ತಲುಪಿದೆ. ಬಹುತೇಕ ಎಲ್ಲಾ ದಿನವೂ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಕನಿಷ್ಠ 52,000 ರೂ. ಗಳಿಂದ 56,000 ರೂ. ಇದ್ದೇ ಇದೆ. ಆದರೆ ಕೆಲವೊಂದು ದಿನ 50,000 ಸಾವಿರ ರೂಪಾಯಿಗಳ ಆಸುಪಾಸಿನಲ್ಲೇ ಸುಳಿದಾಡುತ್ತಿರುತ್ತದೆ.

ಹೀಗಾಗಿ ಕಳೆದ ಬೆಳೆಯ ಅಡಿಕೆಯನ್ನು ಸ್ಟಾಕ್ ಇಟ್ಟಿರುವ ರೈತರು ಈಗ ಅವುಗಳನ್ನು ಮಾರಬೇಕೋ ಬೇಡವೋ ಎಂಬ ಆಲೋಚನೆಯಲ್ಲಿ ತೊಡಗಿದ್ದಾರೆ. ಕೆಲವರು ಇನ್ನೊಂದು ಅಥವಾ ಎರಡು ತಿಂಗಳಲ್ಲಿ ಬೆಲೆ ಇನ್ನೂ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದರೆ, ಮತ್ತೆ ಕಲೆವರು ಇಷ್ಟೇ ಬೆಲೆ, ಇದಕ್ಕಿಂತ ಹೆಚ್ಚಾಗದು ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಿದ್ದಾರೆ. ಹೀಗೆ ಅವರಿವರು ಆಡುವ ಮಾತುಗಳನ್ನು ಕೇಳಿ ಅಡಿಕೆ ಬೆಳೆಗಾರರು ಅಕ್ಷರಶಃ ಗೊಂದಲಕ್ಕೆ ಸಿಲುಕಿದ್ದಾರೆ.

ಬೆಲೆ ಹೆಚ್ಚಾಗುವ ಸಾಧ್ಯತೆ ಇದೆಯಾ?

ಈಗಾಗಲೇ 60,000 ರೂ. ತಲುಪಿ ಮತ್ತೆ ಒಂದೆರಡು ಸಾವಿರ ಇಳಿಕೆ ಕಂಡಿರುವ ಅಡಿಕೆ ಬೆಲೆ ಇನ್ನು ಕೆಲವೇ ದಿನಗಳಲ್ಲಿ ದಾಖಲೆಯ ಏರಿಕೆ ಕಾಣಲಿದೆ ಎಂದು ಮಾರುಕಟ್ಟೆ ವಿಶ್ಲೇಷಣೆಗಳು ಹೇಳುತ್ತಿವೆ. ವಿದೇಶಗಳಿಂದ ಅಡಿಕೆ ಆಮದು ನಿಲ್ಲಿಸಿರುವುದು ಈ ಬಾರಿ ದೇಶದಲ್ಲಿ, ಅದರಲ್ಲೂ ಕರ್ನಾಟಕ ಸೇರಿ ಅಡಿಕೆ ಬಳೆಯುವ ಪ್ರಮುಖ ರಾಜ್ಯಗಳಲ್ಲಿ ಬೆಲೆ ಹೆಚ್ಚಳವಾಗಿದೆ. ಇದರಿಂದಾಗಿ ಸ್ವಾಭಾವಿಕವಾಗೇ ಅಡಿಕೆ ಬೆಳೆಯುವ ರೈತರು ಖುಷಿಯಾಗಿದ್ದಾರೆ. ಈಗಿರುವ ಬೆಲೆಯೇ ಹೆಚ್ಚು ಎನ್ನುತ್ತಿರುವಾಗಲೇ, ಮುಂದಿನ ದಿನಗಳಲ್ಲಿ ಕ್ವಿಂಟಾಲ್ ಅಡಿಕೆ ದರ 70,000 ರೂಪಾಯಿಗಿಂತಲೂ ಹೆಚ್ಚಾಗಬಹುದು ಎಂಬ ವದಂತಿಗಳು ರೈತರ ನಿದ್ದೆ ಕೆಡಿಸಿವೆ. ಈಗಾಗಲೇ 50,000 ರಿಂದ 58,000 ರೂ. ನಡುವಿನ ದರಕ್ಕೆ ಅಡಿಕೆ ಮಾರಾಟ ಮಾಡಿರುವ ರೈತರು, ಈ ದರ ಮತ್ತಷ್ಟು ಹೆಚ್ಚಾಗಲಿದೆ ಎಂಬ ಸುದ್ದಿ ಕೇಳಿ ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ.

50,000 ಕೂಡ ಒಳ್ಳೆಯ ಬೆಲೆ!

ಒಂದು ಕ್ವಿಂಟಾಲ್ ಅಡಿಕೆಗೆ 50,000 ರೂ. ಸಿಕ್ಕರೆ ಅದು ಉತ್ತಮ ಬೆಲೆಯೇ. ಏಕೆಂದರೆ ಈ ಹಿಂದೆ ಬೆಳೆಗಾರರು ಕ್ವಿಂಟಾಲ್ ಅಡಿಕೆಯನ್ನು ಕೇವಲ 12,000 ರೂ.ಗೆ ಮಾರಾಟ ಮಾಡಿದ್ದಾರೆ. ಆಗ ಇದನ್ನೇ ಉತ್ತಮ ಬೆಲೆ ಎಂದು ಹೇಳುತ್ತಿದ್ದರು. ಈಗ್ಗೆ ಎರಡು ತಿಂಗಳ ಹಿಂದಷ್ಟೇ ಬಹುತೇಕ ಬೆಳೆಗಾರರು 25,000 ರಿಂದ 30,000 ರೂ.ಗೆ ಕ್ವಿಂಟಾಲ್ ಅಡಿಕೆ ಕೊಟ್ಟಿದ್ದಾರೆ. ಹೀಗಾಗಿ ಈಗಿರುವುದು ಅತ್ಯುತ್ತಮ ಬೆಲೆ. ಆದ ಕಾರಣ ರೈತರು ಎರಡನೇ ಬಾರಿ ಯೋಚನೆ ಮಾಡದೆ ಈಗಿರುವ ಬೆಲೆಗೇ ಅಡಿಕೆ ಮಾರಾಟ ಮಾಡುವುದು ಒಳಿತು. ಒಂದೊಮ್ಮೆ ಬೆಲೆ ಕುಸಿದರೆ ಆಗ ಪಶ್ಚಾತ್ತಾಪ ಪಡುವುದಕ್ಕಿಂತ ಈಗ ಮಾರಾಟ ಮಾಡಿ ಒಂದಷ್ಟು ಲಾಭ ಮಾಡಿಕೊಳ್ಳುವುದು ಸೂಕ್ತ.

ಹಿಂದೆ ಕೂಡ ಹೀಗೇ ಆಗಿತ್ತು...

ಆರೇಳು ವರ್ಷಗಳ ಹಿಂದೆ ಕೂಡ ಅಡಿಕೆ ಬೆಲೆ ಈಗಿನಂತೆಯೇ ಗರಿಷ್ಠ ಏರಿಕೆ ಕಂಡಿತ್ತು. ಆಗ 50,000 ರೂಪಾಯಿಗೆ ಅಡಿಕೆ ಮಾರಿದ ರೈತರು ಹಬ್ಬ ಮಾಡಿದ್ದರು. ಆದರೆ ಈ ಬೆಲೆ ಹೆಚ್ಚು ದಿನ ನಿಲ್ಲಲಿಲ್ಲ. ನಾಲ್ಕೇ ದಿನದಲ್ಲಿ ಬೆಲೆ 40,000 ರೂ. ಆಸು ಪಾಸು ಬಂದಿತು. ಇನ್ನು ಬೆಲೆ ಹೆಚ್ಚಾಗುವ ಲಕ್ಷಣಗಳಿಲ್ಲ ಎಂಬ ಸೂಚನೆ ಅರಿತ ಕೆಲವು ಬೆಳೆಗಾರರು ತಮ್ಮಲ್ಲಿದ್ದ ಅಡಿಕೆಯನ್ನೆಲ್ಲಾ ಮಾರಾಟ ಮಾಡಿದರು. ಆದರೆ ಬೆಲೆ ಹೆಚ್ಚಾಗಲಿದೆ ಎಂಬ ಆಸೆಯೊಂದಿಗೆ ಬಹಳಷ್ಟು ರೈತರು ಕಾಯುವ ತಂತ್ರ ಅನುಸರಿಸಿದರು. ಆದರೆ, ಮುಂದಿನ ಒಂದು ವಾರದಲ್ಲಿ ಅಡಿಕೆ ಬಲೆ 28,000 ರೂಪಾಯಿ ತಲುಪಿದಾಗ, ಬೆಲೆ ಹೆಚ್ಚಲಿದೆ ಎಂದು ಕಾಯುತ್ತಾ ಕುಳಿತಿದ್ದ ಬೆಳೆಗಾರರು ತೀವ್ರ ನಿರಾಸೆ ಅನುಭವಿಸಿದ್ದರು.

ಏಳೆಂಟು ವರ್ಷಗಳ ಹಿಂದಿನ ಪರಿಸ್ಥಿತಿ ಈಗ ಮರುಕಳಿಸುವುದು ಬೇಡ. ಈಗ ಇರುವ ಬೆಲೆ ಉತ್ತಮವಾಗಿದೆ. ಕಾರಣ, ಬೆಳೆಗಾರರು ತಮ್ಮಲ್ಲಿ ಸಂಗ್ರಹವಿರುವ ಅಡಿಕೆಯನ್ನು ಮಾರುವುದು ಉತ್ತಮ. ಎಲ್ಲವನ್ನೂ ಮಾರದಿದ್ದರೂ ಶೇ.70 ಅಥವಾ ಶೇ.80ರಷ್ಟು ಮಾರಾಟ ಮಾಡಿ ಉಳಿದವನ್ನು ಇರಿಸಿಕೊಳ್ಳಬಹುದು. ಇಲ್ಲವೇ 50-50 ತಂತ್ರವನ್ನೂ ಅನುಸರಿಸಬಹುದು. ಆದರೆ ಬೆಲೆ ಹೆಚ್ಚಾಗಲಿದೆ ಎಂದು ನಂಬಿ ಎಲ್ಲವನ್ನೂ ಹಾಗೆ ಇರಿಸಿಕೊಳ್ಳುವುದು ಅಷ್ಟು ಸರಿಯಲ್ಲ ಎನ್ನುತ್ತಾರೆ ಶಿವಮೊಗ್ಗದ ಅಡಿಕೆ ವ್ಯಾಪಾರಿ ಚನ್ನಕೇಶವ ಸ್ವಾಮಿ.

ಸ್ಟಾಕ್ ಹೊರಗೆಳೆಯುವ ತಂತ್ರವೇ?

ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆಯು ಪ್ರಭಾವಿಗಳ ಹಿಡಿತದಲ್ಲಿದೆ ಎನ್ನಲಾಗಿದೆ. ಆ ಪ್ರಭಾವಿಗಳು ರೈತರ ಬಳಿ ಸಂಗ್ರಹವಿರುವ ಎಲ್ಲಾ ಅಡಿಕೆಯನ್ನು ಹೊರಗೆಳೆದು ತಾವು ಸ್ಟಾಕ್ ಮಾಡಿಟ್ಟುಕೊಳ್ಳಬೇಕು. ಆ ಬಳಿಕ ಬೇಡಿಕೆ ಹೆಚ್ಚಾದಾಗ ಅತ್ಯಧಿಕ ಬೆಲೆಗೆ ಮಾರಾಟ ಮಾಡಬೇಕು ಎಂಬ ಇರಾದೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಹಕಾರ ನೀಡುವ ದಲ್ಲಾಳಿಗಳು ಮಾರುಕಟ್ಟೆಯಲ್ಲಿ ವದಂತಿ ಹಬ್ಬಿಸುತ್ತಿದ್ದಾರೆ. ತಮ್ಮ ಬಳಿ ಸಾಕಷ್ಟು ಅಡಿಕೆ ದಾಸ್ತಾನು ಆದ ಬಳಿಕ ದರ ಮತ್ತಷ್ಟು ಹೆಚ್ಚುತ್ತದೆ ಎಂದು ಮಾರುಕಟ್ಟೆಯಲ್ಲಿ ವದಂತಿ ಹರಿಬಿಟ್ಟು, ರೈತರು ಮಾರಾಟ ಮಾಡದಂತೆ ತಡೆಯುವುದು, ಬಳಿಕ ದಿಢೀರನೆ ಬೆಲೆ ಕುಸಿಯುವಂತೆ ಮಾಡುವುದು ಇವರ ಯೋಜನೆ ಎನ್ನಲಾಗುತ್ತಿದೆ.