ಅಕ್ಟೋಬರ್ ಮೊದಲ ವಾರದಿಂದ ಅಡಿಕೆ ಮಾರುಕಟ್ಟೆಯಲ್ಲಿ ಪ್ರವೇಶಿಸುತ್ತಿದ್ದಂತೆ ಧಾರಣೆಯಲ್ಲಿ ಇತಿಹಾಸ ಸೃಷ್ಟಿಸಿದೆ. ಕಳೆದ 2-3 ದಿನಗಳಿಂದ ಅಡಕೆ ಮಾರುಕಟ್ಟೆಯಲ್ಲಿ ಚಾಲಿ (ಬಿಳಿ) ಅಡಕೆಯ ದರ ನಿರಂತರವಾಗಿ ಏರಿಕೆಯಾಗುತ್ತಿದೆ, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಶಿ ಅಡಕೆಗಿಂತಲೂ (ಕೆಂಪು ಅಡಕೆ) ಚಾಲಿ ಅಡಕೆ ಧಾರಣೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಆದರೆ ಅಚ್ಚರಿ ಹುಟ್ಟಿಸಿರುವುದು ಹೊಸ ಅಡಕೆ ದರ. ಬೆಳ್ತಂಗಡಿಯಲ್ಲಿ ಹೊಸ ಅಡಕೆ ದರ ಸೋಮವಾರ ಕೆಜಿಗೆ ಐತಿಹಾಸಿಕ 400 ರೂಪಾಯಿ ಗಡಿ ಮುಟ್ಟಿದೆ. ಇತ್ತ ಕಾರ್ಕಳದಲ್ಲಿಯೂ ಶುಕ್ರವಾರ 395 ರೂ.ಗೆ ಮಾರಾಟವಾಗಿದೆ. ಸುಳ್ಯದಲ್ಲಿ ಗುರುವಾರ 355 ರೂ. ಹಾಗೂ ಸೋಮವಾರ ಮಂಗಳೂರಿನಲ್ಲಿ 335 ರೂ. ಹಾಗೂ ಬಂಟ್ವಾಳದಲ್ಲಿ 330 ರೂ.ಗೆ ಮಾರಾಟವಾಗಿದೆ.
ಹೊಸ ಅಡಿಕೆ, ಹಳೆಯ ಅಡಿಕೆ, ಡಬಲ್ ಚೋಲ್ ಅಡಿಕೆ ಬೆಲೆಯಲ್ಲಿಯೂ ಸಹ ಹೆಚ್ಚಳ ಕಂಡುಬಂದಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಆರಂಭದಲ್ಲಿ ಹೊಸ ಅಡಿಕೆಗೆ ಕ್ವಿಂಟಾಲಿಗೆ 27,300-27500 ರೂಪಾಯಿಯವರೆಗೆ ಧಾರಣೆ ಇತ್ತು. ತಾಜಾ ಅಡಿಕೆ ಮಾರುಕಟ್ಟೆಗೆ ಪ್ರವೇಶಿಸಿದ ಎರಡನೇ ವಾರದಲ್ಲಿ ಗುಣಮಟ್ಟಕ್ಕೆ ತಕ್ಕಂತೆ ಏರಿಕೆಯಾಗಿದೆ. ಇದಕ್ಕಿಂತ ಒಂದು ಹೆದಜ್ಜೆ ಮುಂದಕ್ಕೆ ಹೋಗಿರುವ ಖಾಸಗಿ ವರ್ತಕರು ದರ ಹೆಚ್ಚಿಸಿದ್ದಾರೆ. ಮಳೆಗಾಲದ ನಂತರ ಅಡಿಕೆಗೆ ಈ ಪರಿ ಧಾರಣೆ ಏರಿಕೆ ಕಂಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಪ್ರಮುಖ ಅಡಕೆ ಮಾರುಕಟ್ಟೆಯಾದ ಯಲ್ಲಾಪುರದಲ್ಲಿ ಉತ್ತಮ ಚಾಲಿ ಅಡಿಕೆ ಬೆಲೆ ಸರಾಸರಿ 39 ಸಾವಿರ ರೂ. ಆಸುಪಾಸಿನಲ್ಲಿ ಇದೆ. ಇದೇ ರೀತಿಯ ದರ ಏರಿಕೆಯು ಶಿರಸಿ ಹಾಗೂ ಸಾಗರ, ಮಂಗಳೂರು ಮುಂತಾದ ಅಡಕೆ ಮಾರುಕಟ್ಟೆಗಳಲ್ಲೂ ಇದೆ.
ಚಾಲಿ ಅಡಕೆಯಲ್ಲಿ ಹಳೆಯ ಅಡಕೆ ದರ ಕೆಲ ದಿನಗಳ ಹಿಂದೆಯೇ ಕೆಜಿಗೆ 400 ರೂಪಾಯಿ ಆಸುಪಾಸಿಗೆ ತಲುಪಿತ್ತು. ಇದೀಗ ಸೋಮವಾರ ಬಂಟ್ವಾಳದಲ್ಲಿ ಹಳೆ ಅಡಕೆ ದರ 410 ರೂ.ವರೆಗೆ ಏರಿಕೆಯಾಗಿದ್ದರೆ, ಶುಕ್ರವಾರವೇ ಬೆಳ್ತಂಗಡಿಯಲ್ಲಿ ಹಳೆ ಅಡಕೆ ರೂ. 410ಕ್ಕೆ ಮಾರಾಟವಾಗಿತ್ತು. ಕಾರ್ಕಳದಲ್ಲಿಯೂ ಶನಿವಾರವೂ 395 ರೂ.ಗೆ ಮಾರಾಟವಾಗಿದೆ.