ಪ್ರಸಕ್ತ 2020-21ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಹಾಗೂ ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಾಗೂ ದಮನಿತ ಮಹಿಳೆಯರ (ಚೇತನಾ) ಪುನರ್ವಸತಿ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಉದ್ಯೋಗಿನಿ ಯೋಜನೆಯಡಿ ವಿವಿಧ ಆದಾಯೋತ್ಪನ್ನ ಸೇವಾ ಹಾಗೂ ವ್ಯಾಪಾರ ಚಟುವಟಿಕೆಗಳನ್ನು ನಡೆಸಲು ಆಸಕ್ತ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಡಿ ಎಲ್ಲ ವರ್ಗದ ಮಹಿಳೆಯರಿಗೆ ಬ್ಯಾಂಕಿನಿಂದ ಕನಿಷ್ಠ 1 ಲಕ್ಷ ರೂ. ದಿಂದ ಗರಿಷ್ಠ 3 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ.
ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಾಗೂ ದಮನಿತ ಮಹಿಳೆಯರ (ಚೇತನಾ) ಪುನರ್ವಸತಿ ಯೋಜನೆಯಡಿ ಈ ವಿಶೇಷ ವರ್ಗದವರಿಗೆ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಲು ಸಮಾನವಾಗಿ 25,000 ರೂ.ಗಳ ಸಾಲ ಹಾಗೂ 25,000 ರೂ.ಗಳ ಸಹಾಯಧನ ಸೇರಿದಂತೆ ಒಟ್ಟು 50,000 ರೂ.ಗಳನ್ನು ಬಡ್ಡಿ ರಹಿತ ನೇರಸಾಲ ಮತ್ತು ಸಹಾಯಧನ ನೀಡಲಾಗುತ್ತದೆ.
ಅರ್ಹ ಮಹಿಳೆಯರು ಕಲಬುರಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಅಥವಾ ಸಮುದಾಯಪರ ಸಂಸ್ಥೆಗಳಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದೃಢೀಕೃತ ದಾಖಲಾತಿಗಳೊಂದಿಗೆ ಅಕ್ಟೋಬರ್ 17 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮುದಾಯಪರ ಸಂಸ್ಥೆಗಳು ಹಾಗೂ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.