News

“ತಾಂಡಾ ರೋಜ್ ಗಾರ್ ಮಿತ್ರ”ರಾಗಿ ಕಾರ್ಯನಿರ್ವಹಿಸಲು ಅರ್ಜಿ ಅಹ್ವಾನ

05 March, 2021 7:01 PM IST By:

ಕಲಬುರಗಿ ತಾಲೂಕಿನ ಈ ಕೆಳಕಂಡ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ತಾಂಡಾಗಳಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ “ತಾಂಡಾ ರೋಜ್‍ಗಾರ್ ಮಿತ್ರ”ರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಕಲಬುರಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ ತಾಲೂಕಿನ ಸರಡಗಿ(ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿಕೇರಿ ತಾಂಡಾ, ಮರಗುತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಮಂಚಿ ತಾಂಡಾ, ಕುಸನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸನೂರ ತಾಂಡಾ, ಖಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಣದಾಳ ತಾಂಡಾ, ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋಕ ತಾಂಡಾ ಮತ್ತು ತುಕಾರಾಮ ತಾಂಡಾ, ಸಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಳಾಹಾಳ ತಾಂಡಾಗಳಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ “ತಾಂಡಾ ರೋಜ್‍ಗಾರ್ ಮಿತ್ರ”ರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚಿನ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮಹಿಳಾ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಪುರುಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಿದವರಿಗೆ  ಆದ್ಯತೆ ನೀಡಲಾಗುತ್ತದೆ. ವಯೋಮಿತಿ 45 ವರ್ಷದೊಳಗಿರಬೇಕು. ಕಡ್ಡಾಯವಾಗಿ ತಾಂಡಾ ನಿವಾಸಿಯಾಗಿರಬೇಕು. ಕನ್ನಡ ಮತ್ತು ಲಂಬಾಣಿ ಭಾಷೆ ತಿಳಿದಿರಬೇಕು.       ಪ್ರತಿ ತಾಂಡಾಗಳಲ್ಲಿ ಪ್ರತಿ 250 ರಿಂದ 300 ಮನೆಗಳಿಗೆ ಒಬ್ಬರಂತೆ ತಾಂಡಾ ರೋಜಗಾರ್ ಮಿತ್ರರನ್ನು ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು. ಅಭ್ಯರ್ಥಿಗಳಿಗೆ ಮಾಸಿಕವಾಗಿ ತಾಂಡಾ ಅಭಿವೃದ್ಧಿ ನಿಗಮದಿಂದ 3000 ರೂ. ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 3000 ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

  ತಾಂಡಾ ರೋಜ್‍ಗಾರ್ ಮಿತ್ರರನ್ನು ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಐ.ಇ.ಸಿ. ಚಟುವಟಿಕೆಯ ಭಾಗವಾಗಿ 6 ತಿಂಗಳ ಅವಧಿಗೆ ಮಾತ್ರ ನೇಮಕ ಮಾಡಿಕೊಳ್ಳಲಾಗುವುದು. ತಾಂಡಾ ರೋಜ್‍ಗಾರ್ ಮಿತ್ರರು ಸ್ವಯಂ ಪ್ರೇರಿತ ಕಾರ್ಯಕರ್ತರು ಆಗಿರುತ್ತಾರೆ.  ಗ್ರಾಮ ಪಂಚಾಯಿತಿಯ ಖಾಯಂ ಅಥವಾ ತಾತ್ಕಾಲಿಕ ನೌಕರರಾಗಿರುವುದಿಲ್ಲ.

ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ಆಯಾ ಗ್ರಾಮ ಪಂಚಾಯಿತಿಯಲ್ಲಿ  2021ರ ಮಾರ್ಚ್ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಸಂಪರ್ಕಿಸಲು ಕೋರಲಾಗಿದೆ.