ಸ್ವದೇಶಿ ಚಳವಳಿ ಹರಿಕಾರ, ಸ್ವದೇಶಿ ಆಂದೋಲನದ ನೇತಾರ ದಿ.ರಾಜೀವ ದೀಕ್ಷಿತ ಸ್ಮರಣಾರ್ಥ ಸ್ವದೇಶಿ ದಿನಾಚರಣೆ ಅಂಗವಾಗಿ ಗೃಹ ಕೈಗಾರಿಕೆ ಉತ್ತೇಜಿಸಲು ಆಜಾದಿ ಬಚಾವೊ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ವಿದ್ಯಾವಂತ ನಿರುದ್ಯೋಗ ಯುವಕ–ಯುವತಿಯರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗ ಕಲ್ಪಿಸಲು ನಿರ್ಣಯಿಸಲಾಗಿದೆ ಎಂದು ಆಂದೋಲನದ ಸಂಚಾಲಕ ಎಂ.ಡಿ. ಪಾಟೀಲ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವದೇಶಿ ಚಿಂತನೆಗಳನ್ನು ಉಳಿಸಿ ಬೆಳೆಸುವ ಹಾಗೂ ದೀಕ್ಷಿತರ ವಿಚಾರಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆದಿದೆ. ಸ್ವಾವಲಂಬನೆ ಜೀವನಕ್ಕಾಗಿ ಯುವಕರಿಗೆ ಸಣ್ಣ ಮತ್ತು ಗೃಹ ಕೈಗಾರಿಕಾ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಧಾರವಾಡದಲ್ಲಿ ಸ್ವದೇಶಿ ಕೈಗಾರಿಕಾ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇದಕ್ಕಾಗಿ ಬೇಕಾಗುವ ತಂತ್ರಜ್ಞಾನ, ಆರ್ಥಿಕ ಸಹಯೋಗ, ಮಾರುಕಟ್ಟೆ ಒದಗಿಸಿಕೊಡುವ ಪ್ರಯೋಗ ಕೇಂದ್ರ ಇದಾಗಲಿದೆ. ಮೊದಲ ಹಂತದಲ್ಲಿ 20 ಜನರನ್ನು ಆಯ್ಕೆ ಮಾಡಿಕೊಂಡು, ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.
ಅಗತ್ಯ ಯಂತ್ರೋಪಕರಣಗಳನ್ನು ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪಡೆಯಬಹುದಾಗಿದ್ದು, ಇದರ ಬಗ್ಗೆಯೂ ಮಾಹಿತಿ ನೀಡಲಾಗುವುದು.ಒಂದೇ ಯಂತ್ರದಲ್ಲಿ ಶೇಂಗಾ, ಕುಸುಬೆ, ಎಳ್ಳು ವಿವಿಧ ಕಾಳುಗಳ ಎಣ್ಣೆ ಉತ್ಪಾದಿಸಬಹುದು. ಕಲಬೆರಕೆ ಹಾಗೂ ರಾಸಾಯನಿಕರಹಿತ ಶುದ್ಧ ಅಡುಗೆ ಎಣ್ಣೆ ತಯಾರಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ನಂತರ ಹಂತ ಹಂತವಾಗಿ ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆ ಬಗ್ಗೆ ಜನ ಜಾಗೃತಿ ಮೂಡಿಸಲಾಗುವುದು.
ಯಾವುದೇ ಸ್ಥಳೀಯ ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯ ಅವಶ್ಯಕತೆಯಿದ್ದಲ್ಲಿ ಈ ಮಳಿಗೆ ಸಹಕರಿಸಲಿದೆ. ಇಂಥ ಮಳಿಗೆಗಳನ್ನು ರಾಜ್ಯದಾದ್ಯಂತ ವಿಸ್ತರಿಸುವ ಯೋಜನೆ ಇದೆ. ಜತೆಗೆ ಆಯಾ ಜಿಲ್ಲೆಗಳಲ್ಲಿ ಆಸಕ್ತರಿಗೆ ತರಬೇತಿ ನೀಡಲು ಕೂಡ ತೀರ್ಮಾನಿಸಲಾಗಿದೆ. ದೇಸಿ ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರ, ಮಾರುಕಟ್ಟೆ ಒದಗಿಸುವ ಪ್ರಯೋಗ ಮಾಡಲಾಗುತ್ತಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 94483 60021 ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.