ಧಾರವಾಡ : ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆಯಿಂದ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಆಸಕ್ತಿಯುಳ್ಳ ರೈತರು, ರೈತ ಮಹಿಳೆಯರು ನಿಗದಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ, ಪ್ರವೇಶ ಶುಲ್ಕ ಭರಣಾ ಮಾಡುವುದು.
ಬೆಳೆ ಕಟಾವು ಮಾಡುವ ವಿಧಾನ, ಸ್ಪರ್ಧಾತ್ಮಕ ಇಳುವರಿಯ ಮಾಹಿತಿ ಇತ್ಯಾದಿಗಳ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ, ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಮಾನ್ಯ ವರ್ಗದ ರೈತರಿಗೆ ರೂ.100/- ಶುಲ್ಕ ಇದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ರೂ.25/-ಶುಲ್ಕವಿದೆ.
ರಾಜ್ಯ ಮಟ್ಟದ ಬೆಳೆ ಸ್ಪರ್ಧೆಗೆ ಮುಂಗಾರು ಹಂಗಾಮಿಗೆ ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ), ಶೇಂಗಾ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಸೋಯಾ ಅವರೆ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ) ಬೆಳೆ ನಿಗದಿಪಡಿಸಲಾಗಿದೆ.
ಜಿಲ್ಲಾ ಮಟ್ಟದ ಬೆಳೆ ಸ್ಪರ್ಧೆಗೆ ಮುಂಗಾರು ಹಂಗಾಮಿಗೆ ಸೋಯಾ ಅವರೆ (ಮಳೆ ಆಶ್ರಿತ) ನಿಗದಿಪಡಿಸಲಾಗಿದೆ. ತಾಲ್ಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಸಂಬಂದಿಸಿದಂತೆ, ಧಾರವಾಡ ತಾಲ್ಲೂಕಿಗೆ ಸೋಯಾ ಅವರೆ (ಮಳೆಆಶ್ರಿತ), ಹುಬ್ಬಳ್ಳಿ ನಗರ ತಾಲ್ಲೂಕಿಗೆ ಸೋಯಾ ಅವರೆ (ಮಳೆಆಶ್ರಿತ), ಹುಬ್ಬಳ್ಳಿ ತಾಲ್ಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ),
ಕಲಘಟಗಿ ತಾಲ್ಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ), ಅಳ್ನಾವರ ತಾಲ್ಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ), ನವಲಗುಂದ ತಾಲ್ಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ), ಅಣ್ಣಿಗೇರಿ ತಾಲ್ಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ) ಹಾಗೂ ಕುಂದಗೋಳ ತಾಲ್ಲೂಕಿಗೆ ಶೇಂಗಾ (ಮಳೆಆಶ್ರಿತ) ಬೆಳೆಗಳನ್ನು ನಿಗದಿಪಡಿಸಲಾಗಿದೆ.
2023-24 ನೇ ಸಾಲಿನಲ್ಲಿಯೂ ಸಹ ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಹಾಗೂ ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ ಕೃಷಿ ಪ್ರಶಸ್ತಿಯನ್ನು ನೀಡಲು ಸರ್ಕಾರವು ಅನುಮೋದನೆ ನೀಡಿದ ಪ್ರಯುಕ್ತ ಅರ್ಜಿಗಳನ್ನು ಸಲ್ಲಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.