News

ರೈತರಿಗೆ ಸಂತಸದ ಸುದ್ದಿ: ವಿವಿಧ ಯಂತ್ರೋಪಕರಣಗಳಿಗೆ ಶೇ. 50 ರಷ್ಟು ಸಹಾಯಧನ-ನವೆಂಬರ್ 5ರೊಳಗೆ ಅರ್ಜಿ ಸಲ್ಲಿಸಿ

30 October, 2020 1:51 PM IST By:

ಕೊರೋನಾದಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ತೋಟಗಾರಿಕೆ ಇಲಾಖೆ ಸಹಾಯಧನ ನೀಡಲು ಮುಂದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಣ್ಣ, ಅತಿ ಸಣ್ಣ ಹಾಗೂ ಮಹಿಳಾ ರೈತರಿಗೆ ಶೇ 50 ಮತ್ತು ಇತರೆ ವರ್ಗದವರಿಗೆ ಶೇ 40ರಷ್ಟು ಸಹಾಯಧನದ ಸೌಲಭ್ಯ ವಿವಿಧ ಯಂತ್ರೋಪಕರಣಗಳ ಖರೀದಿಗೆ ಸಹಾಯ ಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

 ಹೂವು, ಹಣ್ಣು, ಬೆಳೆಗಾರರನ್ನು ಮತ್ತೆ ತೋಟಗಾರಿಕೆಯತ್ತ ಸೆಳೆಯಲು ಇದೇ ಮೊದಲ ಬಾರಿಗೆ ಸ್ಟೀಲ್ ಟ್ಯಾಂಕ್ ನಿರ್ಮಿಸಿಕೊಳ್ಳಲು ಬಯಸುವ ರೈತರಿಗೆ ಸಹಾಯ ಧನ ನೀಡಲಾಗುತ್ತಿದೆ.

ಆಸಕ್ತ ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯ ತಾಲ್ಲೂಕು ಕಚೇರಿಗಳಿಂದ ನಿಗದಿತ ಅರ್ಜಿ ನಮೂನೆ ಪಡೆದು ಪಹಣಿ, ಹೋಲ್ಡಿಂಗ್, ನೀರು ಬಳಕೆ ಪ್ರಮಾಣ ಪತ್ರ, ಕಚ್ಚಾ ನಕಾಶೆ, ತೋಟಗಾರಿಕೆ ಬೆಳೆ ದೃಢೀಕರಣ, ಕೃಷಿ ಇಲಾಖೆಯ ನಿರೀಕ್ಷಣಾ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 5ರ ಒಳಗೆ ಸಲ್ಲಿಸಿ ಸಹಾಯ ಧನ ಪಡೆದುಕೊಳ್ಳಬಹುದು.

ತೋಟಗಾರಿಕೆ ಇಲಾಖೆಯಯಡಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಇಂತಿಷ್ಟು ರೈತರಿಗೆ ಸಹಾಯಧನ ನೀಡಬೇಕೆಂದು ಭೌತಿಕ ಗುರಿ ನೀಡಲಾಗಿರುತ್ತದೆ. ಆಯಾ ಜಿಲ್ಲೆಯ ರೈತರು ಇದರ ಕುರಿತು ಮಾಹಿತಿ ಪಡೆಯು ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು.

2020-21ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬರುವ ಈರುಳ್ಳಿ ಶೇಖರಣಾ ಘಟಕ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ಅನುಮೋದಿತ ಕಂಪನಿಗಳಿಂದ ಖರೀದಿಸಲಾದ ವಿವಿಧ ಯಂತ್ರೋಪಕರಣಗಳಾದ ಔಷಧಿ ಸಿಂಪರಣಾ ಯಂತ್ರ, ಕಲ್ಟಿವೇಟರ್, ಪವರ್ ಟಿಲ್ಲರ್, ಕಳೆ ತೆಗೆಯುವ ಯಂತ್ರ, ರೋಟೋವೆಟರ್, ಪವರ್ ವೀಡರ್ ಹಾಗೂ ರೈತರಿಗೆ ತಮ್ಮ ತೋಟಗಳಲ್ಲಿ ಅನುಕೂಲವಾಗುವ ಯಂತ್ರಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಣ್ಣ, ಅತಿ ಸಣ್ಣ ಹಾಗೂ ಮಹಿಳಾ ರೈತರಿಗೆ ಶೇ 50 ಮತ್ತು ಇತರೆ ವರ್ಗದವರಿಗೆ ಶೇ 40ರಷ್ಟು ಸಹಾಯಧನದ ಸೌಲಭ್ಯ ಇದೆ. ಕಳೆದ ಮೂರು ವರ್ಷಗಳ ಹಳೆಯ ಪಾಲಿಮನೆ ಘಟಕದ ದುರಸ್ತಿಗಾಗಿ ಪಾಲಿಥೀನ್ ಶೀಟ್ ಹಾಗೂ ಗಿಡಗಳ ಬದಲಾವಣೆಗೂ ಸಹಾಯಧನ ನೀಡಲಾಗುತ್ತಿದೆ.

ನೀರು ಸಂಗ್ರಹಣಾ ಘಟಕಗಳನ್ನು ನೆಲಮಟ್ಟಕ್ಕಿಂತ ಮೇಲೆ (ಗ್ರೌಂಡ್ ಲೆವೆಲ್-ಸ್ಟೀಲ್ ಟ್ಯಾಂಕ್) ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗೆ ಬೀದರ್ ಜಿಲ್ಲೆಗೆ 7 ಭೌತಿಕ ಗುರಿ ನೀಡಲಾಗಿದೆ. ನೆಲಮಟ್ಟಕ್ಕಿಂತ ಕೆಳಗೆ ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗೆ ಜಿಲ್ಲೆಗೆ 13 ಭೌತಿಕ ಗುರಿ ನೀಡಲಾಗಿದೆ. ಆರ್ಥಿಕವಾಗಿ 42 ಲಕ್ಷ ಗುರಿ ನೀಡಲಾಗಿದೆ ಎಂದು ಬೀದರ್ ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.