News

ರೈತರಿಗೆ ತಾಡಪತ್ರಿ ವಿತರಿಸಲು ಅರ್ಜಿ ಆಹ್ವಾನ

14 March, 2021 7:55 PM IST By:

ರೈತರಿಗೆ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಟಾರ್ಪಲಿನ್ ನೀಡಲು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೃಷಿ ಇಲಾಖೆ ಆರ್.ಕೆ.ವಿ.ವೈ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತರು ತಾಡಪತ್ರಿ ಪಡೆಯಲು ಮಾರ್ಚ್‌ 15ರವರೆಗೆ ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಹೋಬಳಿ ಮತ್ತು ಗ್ರಾಮ ಪಂಚಾಯಿತಿವಾರು ನಿಗದಿಪಡಿಸಿದ ಗುರಿಗಿಂತ ಹೆಚ್ಚು ಅರ್ಜಿಗಳು ಬಂದರೆ ಲಾಟರಿ ಮುಖಾಂತರ ಫಲಾನುಭವಿ ಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಜಾತಿ ಪ್ರಮಾಣಪತ್ರ (ಪರಿಶಿಷ್ಟ ಜಾತಿ, ಪಂಗಡ) ಲಗತ್ತಿಸಬೇಕು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಕಕ್ಕೇರಾದಲ್ಲಿ ತಾಡಪತ್ರಿ ಹಾಗೂ ಪಿವಿಸಿ ಪೈಪ್ ವಿತರಿಸಲು ಅರ್ಜಿ ಆಹ್ವಾನ

ಯಾದಗಿರಿ ಜಿಲ್ಲೆಯ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ 37 ಗ್ರಾಮಗಳ ತರಿಗೆ ತಾಡಪತ್ರಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ರೈತರು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಜಾತಿಪ್ರಮಾಣಪತ್ರ, ಪಹಣಿ, ಬ್ಯಾಂಕ್ ಪಾಸ್ಬುಕ್ ಸೇರಿದಂತೆ ಇತರ ಅಗತ್ಯ ದಾಖಲಾತಿಗಳನ್ನು ಇದೇ ತಿಂಗಳ ಮಾರ್ಚ್ 15 ರೊಳಗೆ ಸಲ್ಲಿಸಲು ಕೋರಲಾಗಿದೆ.

2.5 ಇಂಚಿನ ಪಿವಿಸಿ ಪೈಪಗಳು ಸಹಾಯಧನದಡಿಯಲ್ಲಿ ಲಭ್ಯವಿದ್ದು, ಆಸಕ್ತ ರೈತರು ಆಧಾರ್ ಕಾರ್ಡ್ ಹಾಗೂ ಪಹಣಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರದ ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ಸ್ಥಳೀಯ ಕೇಂದ್ರದ ಅಧಿಕಾರಿ ಪರಶುನಾಥ ತಿಳಿಸಿದ್ದಾರೆ.

ಟಾರ್ಪಲಿನ್ ಅವಶ್ಯಕತೆ

ರೈತರಿಗೆ ಮಳೆ, ಗಾಳಿ, ಧೂಳಿನಿಂದ ರಾಶಿ ಮಾಡಿದ ಬೆಳೆ ಹಾಗೂ ದವಸಧಾನ್ಯಗಳನ್ನು ರಕ್ಷಿಸಿಕೊಳ್ಳಲು ಟಾರ್ಪಲಿನ್ ತುಂಬಾ ಅವಶ್ಯಕತೆಯಿರುತ್ತದೆ. ಅಕಾಲಿಕವಾಗಿ ಸುರಿದ  ಮಳೆ, ಸುಳಿಗಾಳಿಯಿಂದಾಗಿ ದವಸ ಧಾನ್ಯ ಹಾಳಾಗುತ್ತಿರುತ್ತದೆ. ರಾಶಿ ಮಾಡಲು ಸಹಿತ ತಾಡಪತ್ರಿ ಉಪಯೋಗಿಸಬಹುದು. ಹೆಸರು, ಉದ್ದು ಬೆಳೆಯನ್ನು ರಸ್ತೆಯ ಮೇಲೆಯೇ ರಾಶಿ ಮಾಡುತ್ತಿರುತ್ತಾರೆ. ಇದರಿಂದಾಗಿ ಅವಘಡ ಸಂಭವಿಸುವ ಸಾಧ್ಯತೆಯಿರುತ್ತದೆ.

ಬೆಳೆಗಳನ್ನು ಬಿಸಿಲಿಗೆ ಒಣಗಿಸಲು ಸಹ ತಾಡಪತ್ರಿಯ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯದಲ್ಲಿ ತಾಡಪತ್ರಿ ಪಡೆದುಕೊಂಡರೆ ನಿಮ್ಮ ದವಸಧಾನ್ಯಗಳ ರಕ್ಷಣೆಗೂ ಸಹಾಯವಾಗುತ್ತದೆ. ಕೊನೆಯ ದಿನದವರೆಗೆ ಕಾಯದೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ತಾಡಪತ್ರಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಆಲೂರು ತಾಲೂಕಿನ ಕೃಷಿ ಇಲಾಖೆ ಕಚೇರಿಗೆ ಸಂಪರ್ಕಿಸಬಹುದು.