News

“ಅತ್ಯುತ್ತಮ ರೈತ ಪ್ರಶಸ್ತಿ “ಹಾಗೂ “ರೈತ ಮಹಿಳೆ ಪ್ರಶಸ್ತಿ”ಗೆ ಅರ್ಜಿ ಆಹ್ವಾನ: ₹15,000 ನಗದು ಬಹುಮಾನ

19 June, 2023 10:57 AM IST By: Kalmesh T
Application Invited for “Best Farmer Award” and “Farmer Woman Award”: Cash Prize of ₹15,000

Best Farmer Award 2023ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯವು 2023ನೇ ಸಾಲಿನ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ "ಅತ್ಯುತ್ತಮ ರೈತ ಪ್ರಶಸ್ತಿ" ಹಾಗೂ "ರೈತ ಮಹಿಳೆ ಪ್ರಶಸ್ತಿ"ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ ಮತ್ತು ಸುತ್ತಮುತ್ತಲ ರೈತರನ್ನು ಪ್ರೇರೇಪಿಸಿದ ಸಣ್ಣ ರೈತರ ಬಗ್ಗೆ ವಿಶೇಷ ಒತ್ತು ನೀಡುವುದಕ್ಕಾಗಿ ಕೃಷಿ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತರು ಅರ್ಜಿಗಳನ್ನು ಆಯಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರ ಅಥವಾ ವಿಶ್ವವಿದ್ಯಾಲಯದ ಜಾಲತಾಣದಿಂದಲೂ ಪಡೆದುಕೊಳ್ಳಬಹುದು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ 10 ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಮತು ಹಾಸನ ಭಾಗದ ಪ್ರತಿ ತಾಲ್ಲೂಕಿನಲ್ಲಿ ಒಬ್ಬ ಪ್ರಗತಿಪರ ಯುವ ರೈತ ಮತ್ತು ಒಬ್ಬ ಪ್ರಗತಿಪರ ರೈತ ಮಹಿಳೆಯನ್ನು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು.

ಪ್ರಶಸ್ತಿಗೆ ಆಯ್ಕೆಯಾದ ಒಬ್ಬ ರೈತ ಹಾಗೂ ರೈತ ಮಹಿಳೆಯನ್ನು ಪ್ರಶಸ್ತಿ ಪತ್ರ ಮತ್ತು ರೂ.15,000/- ನಗದು ಬಹುಮಾನದೊಂದಿಗೆ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಕೃಷಿಮೇಳದಲ್ಲಿ ಸನ್ಮಾನಿಸಲಾಗುವುದು.

ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ ಎಂದು ಪ್ರಕಟಣೆ ತಿಳಿಸಿದೆ. ಅರ್ಜಿಯಲ್ಲಿ ಹೆಚ್ಚುವರಿ ಮಾಹಿತಿ ಒದಗಿಸಬೇಕಾದಲ್ಲಿ ಪ್ರತ್ಯೇಕ ಹಾಳೆಗಳನ್ನು ಉಪಯೋಗಿಸಬಹುದು.

ನಾಮನಿರ್ದೇಶನ ಮಾಡಿದ ಅರ್ಜಿಯನ್ನು ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು-560065 ಇವರಿಗೆ ದಿನಾಂಕ 31-07-2023 ರೊಳಗೆ ತಲುಪಿಸತಕ್ಕದು.

ಹೆಚ್ಚಿನ ವಿವರಗಳಿಗೆ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯವನ್ನು ಸಂಪರ್ಕಿಸಬಹುದು (ದೂರವಾಣಿ ಸಂಖ್ಯೆ: 080-23330153 Extn:401) ಅಥವಾ ವಿಶ್ವವಿದ್ಯಾನಿಲಯದ ಜಾಲತಾಣವಾದ www.uasbangalore.edu.in ಅನ್ನು ವೀಕ್ಷಿಸುವುದು.

ಪ್ರಶಸ್ತಿಗಳನ್ನು ನಿರ್ಧರಿಸುವ ತೀರ್ಮಾನ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿರ್ಣಯವೇ ಅಂತಿಮ.