ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಸಂಘಟಿತ ಕಾರ್ಮಿಕರಿಗೆ ಕೊವಿಡ್-19 ಪ್ರಯುಕ್ತ ಸರಕಾರ ಘೋಷಿಸಿರುವ ರೂ.2,000/-ಗಳ ಪರಿಹಾರ ಧನ ಪಡೆಯಲು ಜುಲೈ 31 ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರಾದ ಕ್ಷೌರಿಕರು, ಅಗಸರು, ಟೈಲರಗಳು, ಹಮಾಲರು, ಚಿಂದಿ ಆಯುವರು, ಕುಂಬಾರರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್‌ರು, ಕಮ್ಮಾರರು ಮತ್ತು ಗೃಹಕಾರ್ಮಿಕರು ಈ ವರ್ಗದ ಅರ್ಹ ಫಲಾನುಭವಿಗಳು ಪರಿಹಾರ ಧನ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಸಿಟಿಜನ್ ಲಾಗಿನ್ ಮುಖಾಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ನಗರ ಪ್ರದೇಶದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸರ್ಕಾರ ನಿಗದಿ ಪಡಿಸಿರುವ ಸೇವಾ ಶುಲ್ಕ 25 ರೂ.ಗಳ ಪಾವತಿಸಿ ಅರ್ಜಿ ಸಲ್ಲಿಸಬಹುದು. ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರ ನಿಗದಿ ಪಡಿಸಿರುವ ಶುಲ್ಕ ಹೊರತು ಪಡಿಸಿ ಹೆಚ್ಚುವರಿಯಾಗಿ ಶುಲ್ಕ ಪಡೆಯಬಾರದು ಎಂದು ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಿದೆ. ಒಂದುವೇಳೆ ಅಂತಹ ಪ್ರಕರಣ ಕಂಡು ಬಂದಲ್ಲಿ ಸೇವಾ ಕೇಂದ್ರಗಳ ಸಿಎಸ್‌ಸಿ ಐಡಿ ಹಾಗೂ ಸೇವಾಸಿಂಧು ಕಿಯೋಸ್ಕ್ ಐಡಿ (ಞiosಞ Iಜ) ಯನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರಗಳಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಚಿತ್ತಾಪೂರ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 03 ಅಂಗನವಾಡಿ ಕಾರ್ಯಕರ್ತೆ ಮತ್ತು 21 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಚಿತ್ತಾಪೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
18 ರಿಂದ 35 ವರ್ಷದೊಳಗಿನ ಅರ್ಹ ಸ್ಥಳೀಯ (ಅದೇ ಗ್ರಾಮದ) ಮಹಿಳಾ ಅಭ್ಯರ್ಥಿಗಳು ಮಾತ್ರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ಹಾಗೂ ಗರಿಷ್ಠ 9ನೇ ತರಗತಿ ಪೂರ್ಣಗೊಂಡಿರಬೇಕು.
ಅರ್ಜಿ ಸಲ್ಲಿಸಲು ಇದೇ ಜುಲೈ 31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ WWW.anganwadirecruit.kar.nic.in ಭೇಟಿ ನೀಡಬಹುದು ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಚಿತ್ತಾಪೂರ ದೂರವಾಣಿ ಸಂ:08474-236393 ಇವರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.