News

ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

07 July, 2023 3:42 PM IST By: Maltesh

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2023-24ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಸಕ್ತ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳು 2023ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ನಂತರ ಸೆಪ್ಟೆಂಬರ್ 15ರ ವರೆಗೆ ದಂಡ ಶುಲ್ಕ ರೂ.50 ಅನ್ನು ಹೆಚ್ಚುವರಿಯಾಗಿ ನೀಡಿಯೂ ಅರ್ಜಿ ಸಲ್ಲಿಸಬಹುದು.

ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ರೂ. 25 ಶುಲ್ಕ ಪಾವತಿಸಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ ಪಡೆಯಬಹುದು ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿಗೆ 30 ರೂ. ಮನಿ ಆರ್ಡರ್ ಮಾಡಿದರೆ ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲಾಗುವುದು. ಪರೀಕ್ಷಾ ಅರ್ಜಿಗಳನ್ನು ಅಂತರ್ಜಾಲ ತಾಣ  www.kasapa.in ಮೂಲಕ ಸಹ ಪಡೆದುಕೊಳ್ಳಬಹುದು. ಆನ್‌ಲೈನ್ ಮೂಲಕ ಅರ್ಜಿ ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ 25 ರೂ.ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-560018 ದೂರವಾಣಿ ಸಂಖ್ಯೆ 080-26612991, 22423867 ಮತ್ತು 22423867, 26623584 ಇವರನ್ನು ಸಂಪರ್ಕಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮನಿ ನಾಗರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಮಟ್ಟದ ಪುಸ್ತಕ ಆಯ್ಕೆಗಾಗಿ ಪುಸ್ತಕ ಆಹ್ವಾನ

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ ಯೋಜನೆಯಡಿ 2023 ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಣೆಯಾದ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಆಹ್ವಾನಿಸಲಾಗಿದೆ.

2023ರ ಜನವರಿ ಯಿಂದ ಜೂನ್ ವರೆಗೆ ಪ್ರಥಮ ಮುದ್ರಣವಾಗಿ ಪ್ರಕಟವಾದ ಸಾಹಿತ್ಯ, ಕಲೆ, ವಿಜ್ಞಾನ, ಪಠ್ಯ, ವೃತ್ತಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆದಾಯ ಉತ್ಪಾದನಾ ಯೋಜನೆ, ಮಕ್ಕಳ ಸಾಹಿತ್ಯ, ಸ್ಪರ್ಧಾತ್ಮಕ, ಪಠ್ಯಪುಸ್ತಕ, ಸಾಂದರ್ಭಿಕ ಮತ್ತು ಇತ್ಯಾದಿ ವಿಷಯಗಳ ಕನ್ನಡ/ಆಂಗ್ಲ/ಭಾರತೀಯ ಇತರೆ ಭಾಷೆಯ ಗ್ರಂಥಗಳ ಆಯ್ಕೆಗಾಗಿ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ.ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ದಿ: 31/07/2023ರೊಳಗಾಗಿ ಸಲ್ಲಿಸುವುದು.

ನಿಗದಿತ ಅರ್ಜಿ ನಮೂನೆ ಮತ್ತು ನಿಬಂಧನೆಗಳ ಮಾಹಿತಿಗಾಗಿ ಇಲಾಖಾ ಅಂತರ್ಜಾಲ www.dpl.karnataka.gov.in ಹಾಗೂ ರಾಜ್ಯದ ಎಲ್ಲಾ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳ ಉಪನಿರ್ದೇಶಕರು/ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿಗಳಲ್ಲಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22864990/ 22867358 ಗಳನ್ನು ಸಂಪರ್ಕಿಸುವಂತೆ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ(ಪ್ರ) ತಿಳಿಸಿದ್ದಾರೆ.