ಮುಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿಗೆ ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದ್ದು, ರೈತರು ಸೆಪ್ಟೆಂಬರ್ 7 ರೊಳಗೆ ಅರ್ಜಿ ಸಲ್ಲಿಸಬೇಕು.
ಕೃಷಿ ಪ್ರಶಸ್ತಿಯನ್ನು ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನೀಡಲಾಗುತ್ತದೆ. ಪ್ರಶಸ್ತಿಗೆ ರೈತರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ 25 ಹಾಗೂ ಸಾಮಾನ್ಯ ವರ್ಗದ ರೈತರಿಗೆ 100 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.
ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆ ಪ್ರಶಸ್ತಿಗೆ ರೈತರು ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನ. ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸೆ.7 ಕೊನೆಯ ದಿನವಾಗಿದೆ. ಐದು ವರ್ಷದ ಹಿಂದೆ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ರೈತರು ಅರ್ಜಿ ಸಲ್ಲಿಸುವಂತಿಲ್ಲ. ಬೆಳೆಗಳ ವಿವರ, ಅರ್ಜಿ ನಮೂನೆ, ಸ್ಪರ್ಧೆ ಅರ್ಹತಾ ಮಟ್ಟ ಸೇರಿದಂತೆ ಇತರ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು.
ಸೆ.7 ರಿಂದ ಆರು ದಿನಗಳ ಕಾಲ ಕೃಷಿ ತರಬೇತಿ ಶಿಬಿರ:
ಉಡುಪಿ ಜಿಲ್ಲೆ ಗ್ರಾಮ ವಿಕಾಸ ಸಮಿತಿ, ಕೃಷಿ ಮತ್ತು ತೋಟಗಾರಿಕಾ ಇಲಾಖೆ ವತಿಯಿಂದ ಸೆಪ್ಟೆಂಬರ್ 7 ರಿಂದ 6 ದಿನಗಳ ಕಾಲ ಆಧುನಿಕ ಕೃಷಿ, ಸ್ವಉದ್ಯೋಗ ಉಚಿತ ತರಬೇತಿ ಶಿಬಿರವನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ.
ಆಧುನಿಕ ಕೃಷಿ, ಸಾಂಪ್ರದಾಯಿಕ ಕೃಷಿ ಮತ್ತು ಕೃಷಿ ಯಂತ್ರೋಪಕರಣಗಳ ಬಳಕೆ ಮತ್ತು ದುರಸ್ತಿ ಬಗ್ಗೆ ತರಬೇತಿ, ಅಡಿಕೆ, ತೆಂಗು, ಕಾಳುಮೆಣಸು, ಬಾಳೆ, ಜೇನುಕೃಷಿಯ ಬಗ್ಗೆ ಮಾಹಿತಿ ಹಾಗೂ ಸರ್ಕಾರ, ಬ್ಯಾಂಕ್‌ನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ತರಬೇತಿ ಪಡೆಯಲಿಚ್ಚಿಸುವ ಆಸಕ್ತರು ಬಿಲ್ಲಾಡಿ ಪ್ರಥ್ವೀರಾಜ್ ಶೆಟ್ಟಿ(9972902618) ಅವರನ್ನು ಸಂಪರ್ಕಿಸಬಹುದು.