News

ರಾಜ್ಯಕ್ಕೆ ಮತ್ತೊಂದು ಚಂಡಮಾರುತ: ತೀವ್ರತೆ ಕಡಿಮೆ ಸಾಧ್ಯತೆ

14 December, 2022 6:34 PM IST By: Hitesh
Another storm for state: Intensity less likely

1. ರಾಜ್ಯಕ್ಕೆ ಮತ್ತೊಂದು ಚಂಡಮಾರುತ: ತೀವ್ರತೆ ಕಡಿಮೆ ಸಾಧ್ಯತೆ
2. ಡಿಸೇಲ್‌ ತೆರಿಗೆ ವಿನಾಯಿತಿ ನೀಡಲು ಮೀನುಗಾರರ ಕ್ರಿಯಾ ಸಮಿತಿ ಆಗ್ರಹ
3. ಕೇಂದ್ರ ಸರ್ಕಾರದ ನದಿ ಜೋಡಣೆ ಪ್ರಸ್ತಾವನೆ: ರಾಜ್ಯ ಸರ್ಕಾರದ ಆಕ್ಷೇಪ
4. ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ!
5. ಮಳೆ: ಆರೋಗ್ಯ ಕಾಳಜಿ ವಹಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ
6. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 5,8ನೇ ತರಗತಿ ವಾರ್ಷಿಕ ಪರೀಕ್ಷೆ!
7. ಅಕಾಲಿಕ ಮಳೆ: ಸಂಕಷ್ಟದಲ್ಲಿ ಕಾಫಿ ಬೆಳೆಗಾರರು
8. 754 ಕೋಟಿ ಮೊತ್ತದ ಕೆರೆ ತುಂಬಿಸುವ ಪ್ರಸ್ತಾವನೆಗೆ ಶೀಘ್ರ ಅನುಮೋದನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
9. ಆಮ್‌ ಆದ್ಮಿ ಪಾರ್ಟಿಯಿಂದ 450 ಉಚಿತ ವೈದ್ಯಕೀಯ ಸೇವೆ
10. 300 ಚೀಲ ಗಡ್ಡೆಕೋಸು ಕೇವಲ 600ಕ್ಕೆ ಮಾರಾಟ: ಕಣ್ಣೀರಾದ ರೈತ!
11. ಕಿಸಾನ್ ವಸ್ತು ಪ್ರದರ್ಶನ ಪುಣೆ 2022; ಇಂದಿನಿಂದ ಪ್ರಾರಂಭ
12. ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ ಪಾಟೀಲ
 

1. ಉತ್ತರ ಕೇರಳ ಹಾಗೂ ಕರ್ನಾಟಕ ಕರಾವಳಿಗೆ ಸೇರಿರುವ ಈಶಾನ್ಯ ಮತ್ತು ಪೂರ್ವಮಧ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಸೃಷ್ಟಿ ಆಗಿದೆ. ಇದು  ಮುಂದಿನ ದಿನಗಳಲ್ಲಿ ಪಶ್ಚಿಮ ವಾಯುವ್ಯದಿಕ್ಕಿನಲ್ಲಿ ಚಲಿಸಲಿದೆ. ಡಿಸೆಂಬರ್‌ 15ಕ್ಕೆ ಪೂರ್ವಮಧ್ಯ ಅರೆಬ್ಬಿಕ್‌ ಸಮುದ್ರದಲ್ಲಿ ವಾಯುಭಾರ ಕುಸಿತ ತೀವ್ರವಾಗಲಿದೆ. ಆದರೆ, ಇದು ಪಶ್ಚಿಮ ವಾಯುವ್ಯದಲ್ಲಿ ಚಲಿಸುವ ಸಾಧ್ಯತೆ ಇರುವುದರಿಂದ ಇದರ ಪರಿಣಾಮ ರಾಜ್ಯದ ಮೇಲೆ ಬೀಳುವ ಸಾಧ್ಯತೆ ಕಡಿಮೆ ಇದ್ದು, ಸಾಧಾರಣ ಮಳೆ ಆಗಬಹುದು  ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
-------- 

--------
2. ತೆರಿಗೆ ರಿಯಾಯಿತಿ ದರದಲ್ಲಿ 500 ಲೀಟರ್‌ ಡೀಸೆಲ್‌ ನೀಡಬೇಕು ಹಾಗೂ   ಬಜೆಟ್‌ನಲ್ಲಿ ಮೀನುಗಾರರ ಅಭಿವೃದ್ಧಿಗೆ 5 ಸಾವಿರ ಕೋಟಿ ಮೀಸಲಿಡಬೇಕು ಎಂದು ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಆಗ್ರಹಿಸಿದೆ. ಮತ್ಸ್ಯಕ್ಷಾಮ, ಚಂಡಮಾರುತ ಪ್ರಕೃತಿ ವಿಕೋಪ, ಡೀಸೆಲ್‌ ಮತ್ತು ಮೀನುಗಾರಿಕೆ ಸಲಕರಣೆಗಳ ಬೆಲೆ ಏರಿಕೆಯಿಂದಾಗಿ ಮೀನುಗಾರರು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೇ ಎಲ್ಲ ಬಂದರುಗಳಲ್ಲಿ ಪ್ರತ್ಯೇಕ ಧಕ್ಕೆಯನ್ನು ನಿರ್ಮಿಸಿಕೊಡಬೇಕು ಎಂದು ಸಮಿತಿ ಅಧ್ಯಕ್ಷ ಜಯ.ಸಿ. ಕೋಟ್ಯಾನ್‌ ಒತ್ತಾಯಿಸಿದ್ದಾರೆ.  ಹಲವು ವರ್ಷಗಳಿಂದ ಬಂದರುಗಳಲ್ಲಿ ಹೂಳು ತುಂಬಿಕೊಂಡಿದ್ದು, ಬಂದರುಗಳು ನಿಷ್ಪ್ರಯೋಜಕ ಸ್ಥಿತಿಗೆ ತಲುಪಿವೆ. ಬೋಟ್‌ಗಳನ್ನು ತೆಗೆಯುವುದು ಸವಾಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-------- 

--------
3. ಕೇಂದ್ರ ಸರ್ಕಾರದ ಗೋದಾವರಿ–ಕೃಷ್ಣಾ– ಕಾವೇರಿ ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ನದಿ ಜೋಡಣೆ ಸಮಿತಿಯ ಸಭೆಗೆ ಹಾಜರಾದ ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ರಾಜ್ಯದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕೃಷ್ಣಾ ಮತ್ತು ಕಾವೇರಿ ಕಣಿವೆಯಲ್ಲಿ ಮಹಾನದಿ ಮತ್ತು ಗೋದಾವರಿ ಕಣಿವೆ ನದಿ ಜೋಡಣೆಯ ಮೂಲಕ ನೀರು ತಿರುವುಗೊಳಿಸುವ ಯೋಜನೆಯಲ್ಲಿ ಕರ್ನಾಟಕದ ನೀರು ಪಾಲನ್ನು ಕುಗ್ಗಿಸಿರುವುದನ್ನು ಅವರು ಸಭೆಯಲ್ಲಿ ವಿವರಿಸಿದ್ದಾರೆ.
--------
4. ರಾಜ್ಯದಲ್ಲಿ ಮಾಂಡೌಸ್‌ ಚಂಡಮಾರುತದ ಪ್ರಭಾವ ಮುಂದುವರಿದಿದ್ದು, ಬುಧವಾರ ಹಾಗೂ ಗುರುವಾರವೂ ವಿವಿಧೆಡೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಹಾಗೂ ಗುರುವಾರ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಒಳನಾಡಿನ ಒಂದೆರಡು ಕಡೆ ಮಳೆ ಆಗುವ ಸಾಧ್ಯತೆ ಇದೆ. ಇನ್ನು ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 40ರಿಂದ 45 ಕಿ.ಮೀ ವರೆಗೂ ಇರಲಿದ್ದು, ಮೀನುಗಾರರು ಈ ಸಮಯದಲ್ಲಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ, ಗುಡುಗಿನಿಂದ ಕೂಡಿದ ಮಳೆ ಆಗುವ ಸಾಧ್ಯತೆ ಬಹಳಷ್ಟಿದೆ. ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.  
--------  
5. ರಾಜ್ಯದಲ್ಲಿ ಅಕಾಲಿಕ ಮಳೆ ಆಗುತ್ತಿರುವುದರಿಂದ ಆರೋಗ್ಯ ಕಾಳಜಿ ವಹಿಸುವಂತೆ ರಾಜ್ಯದ ಜನರಿಗೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಮಾಂಡೌಸ್‌ ಚಂಡಮಾರುತ
ದಿಂದ ಮಳೆ, ಶೀತ ಗಾಳಿ ಹಾಗೂ ಅತಿ ಕಡಿಮೆ ತಾಪಮಾನವು ವರದಿಯಾಗಿದ್ದು, ಈ ಪರಿಸ್ಥಿತಿಯು ಇನ್ನೂ ಅನೇಕ ದಿನಗಳು ಮುಂದುವರೆಯುವ ಸಾಧ್ಯತೆ ಇದೆ. ಮುಂದಿನ ವಾರದಲ್ಲಿ ಇನ್ನೊಂದು ಚಂಡಮಾರುತವು ಬಂಗಾಳಕೊಲ್ಲಿಗೆ ಅಪ್ಪಳಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ. ಹೀಗಾಗಿ, ಯಾವಾಗಲೂ ಬೆಚ್ಚಗಿನ ನೀರು ಕುಡಿಯುವುದು, ಸುಲಭವಾಗಿ ಜೀರ್ಣವಾಗುವ  ಮತ್ತು ಬಿಸಿಯಾದ ಊಟ ಸೇವಿಸುವುದು. ಮನೆಯ ಒಳಗಿರುವಾಗಲೂ ಬೆಚ್ಚಗಿರುವಂತೆ ಕಾಳಜಿ ವಹಿಸಬೇಕು ಎಂದಿದೆ. ಅಲ್ಲದೇ ಅನಗತ್ಯವಾಗಿ ಹೊರ ಸಂಚಾರವನ್ನು ತಪ್ಪಿಸಿ, ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳಿರುವವರಿಂದ ಅಂತರ ಕಾಪಾಡಿಕೊಳ್ಳುವಂತೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ್‌ ಅವರು ಸುತ್ತೋಲೆ ಹೊರಡಿಸಿದ್ದಾರೆ.   
--------
6.ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ, ಮೌಲ್ಯಂಕನ ಮಾಡುವಂತೆ  ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಮಕ್ಕಳ ಕಲಿಕಾ ಕೊರತೆ ತಪ್ಪಿಸುವುದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸರ್ಕಾರ ಈ ನಿರ್ಣಯ ಕೈಗೊಂಡಿದೆ. ಮಕ್ಕಳ ಕಲಿಕೆಯ ಮಟ್ಟ, ಕೊರತೆ ಹಾಗೂ ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ ಎನ್ನುವುದು ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲು ಉದ್ದೇಶಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
--------  
7.ಮಾಂಡೌಸ್ ಚಂಡಮಾರುತದಿಂದ ರಾಜ್ಯದಲ್ಲಿ ಅಕಾಲಿಕ ಮಳೆ ಆಗುತ್ತಿದ್ದು, ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. 2022ರಲ್ಲಿ ಆಗ್ಗಾಗೇ ಸುರಿದ ಅಕಾಲಿಕ ಮಳೆಯಿಂದಾಗಿ ಕೊಯ್ಲಿಗೆ ಬಂದ ಕಾಫಿ ಬೆಳೆ ಇದೀಗ ಗೊಬ್ಬರವಾಗುತ್ತಿದೆ. ಮಳೆಯಿಂದಾಗಿ ಗಿಡದಲ್ಲಿ ಹಣ್ಣಾಗಿರುವ ಕಾಫಿ ಉದುರಿ ಹೋಗುತ್ತಿದೆ.  ನವೆಂಬರ್‌ಡಿಸೆಂಬರ್ ತಿಂಗಳಲ್ಲೇ ಕಾಫಿ ಕೊಯ್ಲಿಗೆ ಬರುತ್ತದೆ. ಆದರೆ, ಈ ಬಾರಿ ಅಕಾಲಿಕ ಮಳೆಯಿಂದಾಗಿ ಗಿಡದಲ್ಲಿರುವ ಹಣ್ಣು ಕೂಡ ನೆಲಕ್ಕುದುರುತ್ತಿದೆ. ಇದರಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.  
--------
8. ಚಾಮರಾಜನಗರ ಮತ್ತು ಗುಂಡ್ಲುಪೇಟೆಯ 754 (ಏಳುನೂರು ಐವತ್ನಾಲ್ಕು) ಕೋಟಿ ಮೊತ್ತದ ಯೋಜನೆಗೆ  ಶೀಘ್ರದಲ್ಲಿಯೇ ಅನುಮೋದನೆ ಸಿಗಲಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. 
ಜಿಲ್ಲೆಯ ಸಮಗ್ರ ಕೆರೆಗಳನ್ನು ತುಂಬಿಸಲು 1,100 (ಸಾವಿರದ ನೂರು) ಕೋಟಿ ಮೊತ್ತದ ಡಿಪಿಆರ್ ಸಿದ್ಧವಾಗಿದ್ದು, ಇದಕ್ಕೆ ಅನುಮೋದನೆಯಾದರೆ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆಯಾಗಲಿದೆ. ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಇಡೀ ಜಿಲ್ಲೆಯ ಕೆರೆ ತುಂಬಿಸುವ ಯೋಜನೆಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. 
--------
9.ಆಮ್‌ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಜನವರಿ 1 ರಿಂದ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ 450 (ನಾನೂರ ಐವತ್ತು) ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಸೇವೆಯಿಂದ ಬಡವರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ. ಪ್ರಸ್ತುತ ನಗರಾಡಳಿತದಿಂದ ಉಚಿತವಾಗಿ ನೀಡಲಾಗುವ ವೈದ್ಯಕೀಯ ಪರೀಕ್ಷೆಗಳ ಸಂಖ್ಯೆ 212 ಇದೆ.
--------
 10. ಶ್ರಮವಹಿಸಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಕಣ್ಣೀರು ಸುರಿಸುತ್ತಿದ್ದಾರೆ.  ಕೋಲಾರದ ಶ್ರೀನಿವಾಸಪುರದ ಆನಂದ್ ಎಂಬ ರೈತರಿಗೂ ಇದೇ ಪರಿಸ್ಥಿತಿ ಎದುರಾಗಿದೆ. 70 ಸಾವಿರ ನೀಡುವ ಬದಲಾಗಿ ಕೇವಲ 600 ರೂಪಾಯಿ ನೀಡಿ ವಂಚಿಸಿದ ಆರೋಪ ಕೇಳಿಬಂದಿದೆ. 50 ಕೆ.ಜಿ ತೂಗುವ ಒಟ್ಟು 316 ಚೀಲ ಗೆಡ್ಡೆಕೋಸು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗಿತ್ತು. ಒಟ್ಟು ಸೇರಿ 70 ಸಾವಿರ  ರೂಪಾಯಿ ಬೆಲೆ ನಿಗದಿಯಾಗಿತ್ತು. ಆದರೆ, ಕೇವಲ 600 ರೂಪಾಯಿ ನೀಡುವ  ಮೂಲಕ ವಂಚನೆ ಮಾಡಿದ್ದಾರೆ ಎಂದು ರೈತ ಆನಂದ ಅವರು ಆರೋಪ ಮಾಡಿದ್ದಾರೆ. ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಕಮಿಷನ್ ಏಜೆಂಟ್ ಅರುಣ್ ಎಂಬುವರ ಈ ಮೋಸ ಎಸಗಿದ್ದಾರೆ ಎನ್ನಲಾಗಿದೆ. ಅವರ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  
--------

  1. ಭಾರತದ ಅತಿದೊಡ್ಡ ಕೃಷಿ ವಸ್ತುಪ್ರದರ್ಶನ ಡಿಸೆಂಬರ್ 14 ರಿಂದ 18 ರವರೆಗೆ ಪುಣೆ ನಲ್ಲಿ ನಡೆಯಲಿದೆ. ಮೋಶಿ ಬಳಿಯ ಭೋಸಾರಿಯಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ನಡೆಯಲಿದೆ. ಕೊರೊನಾ ಮಹಾಮಾರಿ ಬಳಿಕ ಇದೇ ಮೊದಲ ಬಾರಿಗೆ ಬೃಹತ್‌ ಪ್ರಮಾಣದಲ್ಲಿ ವಸ್ತು ಪ್ರದರ್ಶನ ಹಮ್ಮಿಕೊಂಡಿರುವುದರಿಂದ ರೈತರಲ್ಲಿ ಉತ್ಸಾಹ ಹೆಚ್ಚಾಗಿದೆ. 

ಕ್ರುಶಿ ಜಾಗರಂಚಿ ತಂಡವು ಭಾರತದ ಅತಿದೊಡ್ಡ ಕೃಷಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದೆ. 15 ಎಕರೆ ವ್ಯಾಪ್ತಿಯಲ್ಲಿ ಪ್ರದರ್ಶನ ನಡೆಯುತ್ತಿದ್ದು, 500ಕ್ಕೂ ಹೆಚ್ಚು ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಹೊಸ ಉದ್ಯಮಿಗಳು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಪ್ರದರ್ಶನದ 5 ದಿನ ನಡೆಯಲಿದ್ದು, ಎರಡು ಲಕ್ಷಕ್ಕೂ ಹೆಚ್ಚು ರೈತರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.   
-------
12. ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ, ಕಾಳಸಂತೆಕೋರರ ಮತ್ತು ನಕಲಿ ಅಭಾವ ಸೃಷ್ಟಿಸುವವರ ಮಾತಿಗೆ ಕಿವಿಗೊಡಬೇಡಿ. ಕೃಷಿ ಇಲಾಖೆ ಹಾಗೂ ಸರ್ಕಾರ ರೈತರ ಹಿತಾಸಕ್ತಿ ಕಾಯುತ್ತಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು ರಸಗೊಬ್ಬರ ವಿವರ ನೀಡಿದ್ದಾರೆ. 
-------