ಇಂದಿನ ದಿನಗಳಲ್ಲಿ ಕೋಳಿ ಉದ್ಯಮವು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತಿದೆ. ಲಾಕ್ಡೌನದಿಂದ ಸಂಕಷ್ಟದಲ್ಲಿರುವ ಎಲ್ಲಾ ವರ್ಗದ ಬಡ ರೈತರ ಆದಾಯ ಹೆಚ್ಚಿಸಲು ಪಶುಪಾಲನಾ ಇಲಾಖೆಯು (Animal Husbandry Department) ಅರ್ಹ ಫಲಾನುಭವಿಗಳನ್ನು ಗುರುತಿಸಿ, ಉಚಿತವಾಗಿ ಗಿರಿರಾಜ ಕೋಳಿ (Giriraj poultry) ಮರಿಗಳ ವಿತರಣೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ಪಶುಪಾಲನೆ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನಲ್ಲಿ ಸರ್ಕಾರದ ಯೋಜನೆ ಇಲ್ಲವಾದರೂ, ಇಲಾಖೆಯಿಂದ ಉಚಿತವಾಗಿ ಗಿರಿರಾಜ ಕೋಳಿ ಮರಿ ವಿತರಿಸಲಿದೆ.
ಈ ಹಿಂದೆ ಎಸ್‌ಸಿ, ಎಸ್‌ಟಿ, ಬಡವರಿಗೆ ಗಿರಿರಾಜ ಕೋಳಿ ವಿತರಣೆ ಮಾಡಲಾಗುತ್ತಿತ್ತು ಹಾಗೂ ಕೋಳಿ ಸಾಕಾಣಿಕೆಗೆ ಸಬ್ಸಿಡಿ ಸಹ ನೀಡಲಾಗುತ್ತಿತ್ತು.. ಆದರೆ ಈ ಬಾರಿ ಎಲ್ಲ ವರ್ಗದ ಬಡ ರೈತರಿಗೂ (Poor farmers) ಉಚಿತವಾಗಿ ಗಿರಿರಾಜ ಕೋಳಿಮರಿ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಕೋಳಿ ಸಾಕಣೆಯಿಂದ ರೈತರು ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ವಿತರಣೆಗೆ ಇಲಾಖೆ ಮುಂದಾಗಿದೆ. ಒಬ್ಬ ಫಲಾನುಭವಿಗೆ 10ರಂತೆ ಕೋಳಿ ಮರಿಗಳನ್ನು ಉಚಿತವಾಗಿ ನೀಡಲಾಗುವುದು. ಸ್ಥಳೀಯವಾರು ಪಶು ಇಲಾಖೆಗೆ ಅರ್ಹ ಫಲಾನುಭವಿಗಳು ಸಂಪರ್ಕಿಸಿ, ಅರ್ಜಿ ಸಲ್ಲಿಸಬಹುದು.
ಗಿರಿರಾಜ ತಳಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಕೋಳಿಗಳನ್ನು ಬಹಳ ಹಿಂದೆಯೇ ಪರಿಚಯಿಸಲಾಗಿದ್ದು, ಗ್ರಾಮೀಣ ಮಹಿಳೆಯರ ಅಚ್ಚುಮೆಚ್ಚಿನ ಪ್ರಬೇಧವಾಗಿದೆ. ಗಿರಿರಾಜ ಕೋಳಿ ಎಷ್ಟು ದಿನಗಳಿಂದ ಮೊಟ್ಟೆ ಇಡುತ್ತವೆ. ಎಷ್ಟು ಮೊಟ್ಟೆ ಇಡುತ್ತವೆ. ಇದರ ಬೆಳವಣಿಗೆ ಹೇಗೆ ಇರುತ್ತದೆ ಎಂಬುದರ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ.
ಐದು ತಿಂಗಳ ನಂತರ ಮೊಟ್ಟೆ (After 5 month give egg):
ಗಿರಿರಾಜ ಕೋಳಿ ಮರಿ ಐದು ತಿಂಗಳ ನಂತರ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ವರ್ಷಕ್ಕೆ ಸರಿಸುಮಾರು 180 ಮೊಟ್ಟೆ ಇಡುತ್ತದೆ. ರೈತರು ಕೃಷಿಯ ಜೊತೆಗೆ ಉಪ ಕಸುಬಾಗಿ ಕೋಳಿ ಸಾಕಾಣಿಕೆ ಮಾಡಬಹುದು. ಈ ಕೋಳಿಗಳು, ಹುಳು ಉಪ್ಪಟೆ ತಿನ್ನುವುದರಿಂದ ಸುತ್ತಮುತ್ತಲಿನ ಪರಿಸರ ಕೂಡ ಶುಚಿಯಾಗಿರುತ್ತದೆ. ಹಕ್ಕಿಜ್ವರ ಸೇರಿ ಯಾವ ರೋಗಗಳಿಗೂ ಸುಲಭವಾಗಿ ತುತ್ತಾಗುವುದಿಲ್ಲ. ಹೊರಗೆ ಆಹಾರ ತಿನ್ನಲು ಬಿಟ್ಟರೆ ಇವುಗಳಿಗೆ ಕಾವಲು ಅಗತ್ಯ ಇಲ್ಲ. ನಾಟಿ ಕೋಳಿಗಳಿಗೆ ಹೋಲಿಸಿದರೆ ಇವುಗಳ ಗಾತ್ರ ಹೆಚ್ಚು. ಸುಮಾರು 100 ರಿಂದ 150 ಮೊಟ್ಟೆ ಇಡುವ ಗಿರಿರಾಜ ಕೋಳಿ 6ರಿಂದ 8 ಕೆ.ಜಿ. ತೂಕವಿರುತ್ತದೆ.. ಹೀಗಾಗಿ ಗಿರಿರಾಜ ಕೋಳಿ ಸಾಕುವುದರಿಂದ ಲಾಭ ಹೆಚ್ಚಿರುತ್ತದೆ.
ಗಿರಿರಾಜ ಕೋಳಿ ಬೇಗ ಮಾಂಸ ಕಟ್ಟುತ್ತದೆ:
ನಾಟಿ ಕೋಳಿ ಮತ್ತು ಗಿರಿರಾಜ ತಳಿ ನಡುವಿನ ವ್ಯತ್ಯಾಸವೆಂದರೆ, ಗಿರಿರಾಜ ಬೇಗ ಮಾಂಸ ಕಟ್ಟುತ್ತದೆ. ಆದ್ದರಿಂದ ಇದರ ಸಾಕಾಣಿಕೆಗೆ ಹೆಚ್ಚು ಒಲವು ವ್ಯಕ್ತವಾಗುತ್ತದೆ. 40 ವಾರಗಳಲ್ಲಿ ಹೆಣ್ಣುಕೋಳಿ 3 ರಿಂದ 3.5ಕೆ.ಜಿ ಹಾಗೂ ಗಂಡು ಕೋಳಿ (ಹುಂಜ) 4 ರಿಂದ 5 ಕೆ.ಜಿ. ತೂಕವಿರುತ್ತದೆ. ಈ ಕೋಳಿ ಮೊಟ್ಟೆ ಸರಾಸರಿ 55 ಗ್ರಾಂ ತೂಕವಿರುತ್ತದೆ. ಮೊಟ್ಟೆ ಮಾಂಸ ಎರಡಕ್ಕೂ ಗಿರಿರಾಜ ಕೋಳಿಗೆ ಹೆಚ್ಚು ಬೇಡಿಕೆ ಇದೆ. ಈ ಕೋಳಿಗಳು ನಾಟಿಕೋಳಿಗಳ ಹಾಗೆ ಬೆಳೆಯುತ್ತದೆ. ಮನೆಯೊಳಗೆ ಆಹಾರ ತಿನ್ನಲು ಬಿಡಬಹುದಾಗಿದೆ.
ಸಾಕುವ ಸರಳ ವಿಧಾನ (Easy method):
ಕಾಗೆ, ಹದ್ದು, ಬೆಕ್ಕು ಮತ್ತು ನಾಯಿಗಳಿಂದ ಕೋಳಿ ಮರಿಗಳನ್ನು ರಕ್ಷಿಸಲು, ಸುಮಾರು ಅರ್ಧ ಕೆ.ಜಿ.ಯಷ್ಟು ದೇಹದ ತೂಕ ಹೊಂದುವವರೆಗೂ ಮನೆಯಲ್ಲಿ ಪೋಷಿಸಿ ನಂತರ ನಾಟಿ ಕೋಳಿಗಳಂತೆ ಹೊರಗಡೆ ಮೇಯಲು ಬಿಡಬಹುದು. ಪ್ರತಿ 6 ರಿಂದ 8 ಕೋಳಿಗಳಿಗೊಂದರಂತೆ ಒಂದು ಹುಂಜ ಇರುವಂತೆ ನೋಡಿಕೊಳ್ಳಬೇಕು. ಹಿತ್ತಲಲ್ಲಿ ಸಾಕುವಾಗ ಸ್ಥಳೀಯವಾಗಿ ದೊರಕುವ ಜೋಳ, ಮೆಕ್ಕೆ ಜೋಳ, ಸಜ್ಜೆ, ನವಣೆ, ಗೋಧಿ, ಅಕ್ಕಿ ನುಚ್ಚು ಹಾಗೂ ಇತರೆ ಆಹಾರ ಧಾನ್ಯಗಳನ್ನು ಪ್ರತಿ ಕೋಳಿಗೆ 30 ರಿಂದ 50 ಗ್ರಾಂ.ನಂತೆ ಪ್ರತಿ ನಿತ್ಯ ಒದಗಿಸುವುದರಿಂದ ಅವುಗಳ ಮಾಂಸ ಮತ್ತು ಮೊಟ್ಟೆ ಉತ್ಪಾದನೆಯನ್ನು ಅಧಿಕಗೊಳಿಸಬಹುದು.