77ನೇ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕಾಗಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ
ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧ್ವಜಾರೋಹಣ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ
ತೆರೆದ ಜೀಪಿನಲ್ಲಿ ಗೌರವ ರಕ್ಷೆ ಸ್ವೀಕರಿಸಿ, ನಂತರ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದರು.
ಪಥ ಸಂಚಲನದಲ್ಲಿ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್, ಬಿಎಸ್‌ಎಫ್, ಸಂಚಾರಿ ಪೊಲೀಸರು, ಮಹಿಳಾ ಪೊಲೀಸರು,
ಹೋಂ ಗಾರ್ಡ್‌ಗಳು, ಅಗ್ನಿಶಾಮಕ ಸಿಬ್ಬಂದಿ, ಸ್ಕ್ವಾಡ್ ಮತ್ತು ಬ್ಯಾಂಡ್‌ನ ಒಟ್ಟು 38 ತುಕಡಿಗಳ
ಸುಮಾರು 1 ಸಾವಿರದ 350 ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಬೆಂಗಳೂರು ದಕ್ಷಿಣ ವಲಯದ ಜೆ.ಪಿ.ನಗರದ ಕರ್ನಾಟಕ ಪಬ್ಲಿಕ್ ಶಾಲೆಯ 750 ಮಕ್ಕಳ ವೀರ ನಮನ ನೃತ್ಯ ಪ್ರದರ್ಶಿಸಲಿದ್ದಾರೆ.
ಬೆಂಗಳೂರು ಉತ್ತರ ವಲಯದ 700 ಕಾಲೇಜು ವಿದ್ಯಾರ್ಥಿಗಳಿಂದ ವೀರ ಭೂಮಿ ವಿದುರಾಶ್ವತ್ಥ
ಧ್ವಜ ಸತ್ಯಾಗ್ರಹ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ
ಶಾಲೆಯ 50 ಮಕ್ಕಳಿಂದ ರೋಪ್ ಸ್ಕಿಪ್ಪಿಂಗ್ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಮಾತನಾಡಿ, ಸಮಾರಂಭಕ್ಕಾಗಿ 8
ಸಾವಿರ ಪಾಸ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದಲ್ಲಿ
ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಅಲ್ಲದೇ 1 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮೈದಾನದ ಬಂದೋಬಸ್ತ್ ಕರ್ತವ್ಯಕ್ಕಾಗಿ 10 ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳು,
ಎರಡು ಅಗ್ನಿಶಾಮಕ ವಾಹನಗಳು, ಎರಡು ಆಂಬ್ಯುಲೆನ್ಸ್‌ಗಳನ್ನು ಈಗಾಗಲೇ ಕಾಯ್ದಿಸಲಾಗಿದೆ.
ಮೈದಾನದ ಸುತ್ತ ಭದ್ರತೆ ಮತ್ತು ಸುರಕ್ಷತೆಗಾಗಿ 100 ಸಿಸಿ ಟಿ.ವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ನನ್ನ ದೇಶ ನನ್ನ ಮಣ್ಣು ಅಭಿಯಾನದ ಅಂಗವಾಗಿ ದಾವಣಗೆರೆ ವಿಶ್ವವಿದ್ಯಾಲಯದ ಪ್ರತಿಯೋರ್ವ ವಿದ್ಯಾರ್ಥಿಯಿಂದ
ಮಣ್ಣು ಸಂಗ್ರಹಿಸಿ ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪಂಚಾಯತ್
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಹೇಳಿದ್ದಾರೆ.
ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತರ್ ವಿಭಾಗಗಳ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ
ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹರ್ ಘರ್ ತಿರಂಗಾ, ಅಮೃತಾ ವಾಟಿಕಾ ಮತ್ತು ಅಮೃತ ಸರೋವರ ದಂಡೆಯ ಮೇಲೆ ಧ್ವಜಾರೋಹಣ,
ಹುತಾತ್ಮ ಸೈನಿಕ ಕುಟುಂಬದ ಸದಸ್ಯರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ ಕೇಂದ್ರ ಸರ್ಕಾರದ ವತಿಯಿಂದ
ಹಮ್ಮಿಕೊಂಡಿರುವ ನನ್ನ ಮಣ್ಣು ನನ್ನ ದೇಶ’ ಅಭಿಯಾನದ ಕಾರ್ಯಕ್ರಮವನ್ನು ಬೆಂಗಳೂರು
ಗ್ರಾಮಾಂತರ ಜಿಲ್ಲೆಯಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಆಗಸ್ಟ್ 15ರಂದು ಪ್ರತಿ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸುವುದು ಸೇರಿದಂತೆ ವೀರಯೋಧರ ಸ್ಮರಣಾರ್ಥ
ವಿಶೇಷ ಶಿಲಾಫಲಕಗಳನ್ನು ಸ್ಥಾಪಿಸುವುದು. ಅಮೃತ ಮಹೋತ್ಸವದ ನೆನಪಿಗಾಗಿ 75 ಸಸಿ ನೆಡುವ ಕಾರ್ಯಕ್ರಮ,
ವೀರಯೋಧರ ಸ್ಮರಣೆ, ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ,
ತಾಲ್ಲೂಕು ಮಟ್ಟದಲ್ಲಿ ಜಿಲ್ಲಾದ್ಯಂತ ಹಮ್ಮಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಉದ್ದೇಶಿಸಲಾಗಿದೆ.