News

ಅಮೇರಿಕಾದ ಅಲಾಸ್ಕಾ ರಾಜ್ಯ ದೈತ್ಯ ತರಕಾರಿಗಳ ತವರು

28 May, 2021 3:07 PM IST By: KJ Staff
108 ಕೆ.ಜಿ ದೈತ್ಯ ಕುಂಬಳಕಾಯಿ

ತರಕಾರಿಗಳ ಬಗ್ಗೆ ನಮಗೆಲ್ಲಾ ಗೊತ್ತು. ಎಲೆ ಕೋಸು, ಹೂ ಕೋಸು, ಕುಂಬಳಕಾಯಿ, ಸೌತೆ ಕಾಯಿ, ಹೀರೇಕಾಯಿ ರೀತಿಯ ತರಹೇವಾರಿ ತರಕಾರಿಗಳನ್ನೆಲ್ಲಾ ರೈತರು ತಮ್ಮ ಹೊಲಗಳಲ್ಲಿ ಬೆಳೆಯುತ್ತಾರೆ. ಹಾಗೇ ಪ್ರತಿ ನಿತ್ಯ ತರಕಾರಿ ಸೇವಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂಬುದು ಕೂಡ ಎಲ್ಲರಿಗೂ ತಿಳಿದಿದೆ. ಸಾಮಾನ್ಯವಾಗಿ ಎಲೆ ಕೋಸು, ಹೂ ಕೋಸುಗಳನ್ನು ಒಂದಕ್ಕೆ ಹತ್ತೋ, ಇಪ್ಪತ್ತೋ ರೂಪಾಯಿ ಕೊಟ್ಟು ಖರೀದಿಸುತ್ತೇವೆ. ತೂಕ ಹಾಕಿದಾಗ ಒಂದು ಕೋಸು ಹೆಚ್ಚೆಂದರೆ ಅರ್ಧ ಅಥವಾ ಮುಕ್ಕಾಲು ಕೆ.ಜಿ ತೂಗಬಹುದು. ಎರಡೂ ಕೈ ಜೋಡಿಸಿ ಒಂದು ಎಲೆ ಕೋಸನ್ನು ಸುಲಭವಾಗಿ ಹಿಡಿದಿಟ್ಟುಕೊಳ್ಳಬಹುದು

 ಆದರೆ,ಗಜಗಾತ್ರದ ಎಲೆ ಕೋಸನ್ನು ನೀವು ನೋಡಿದ್ದೀರಾ? ಅಥವಾ ತಬ್ಬಿಕೊಂಡರೂ ತೆಕ್ಕೆಗೆ ಸಿಗದಷ್ಟು ದೊಡ್ಡದಾಗಿರುವ ದೈತ್ಯ ಕುಂಬಳ ಕಾಯಿ ಹಾಗೂ ಇತರೆ ಅಸಹಜ ಗಾತ್ರದ ತರಕಾರಿಗಳನ್ನು ಬೆಳೆಯುವ ಕುರಿತು ಕೇಳಿದ್ದೀರಾ? ಇತಹ ಸುದ್ದಿಗಳನ್ನು ಜಾಲತಾಣ, ಪತ್ರಿಕೆಗಳಲ್ಲಿ ಓದಿರಬಹುದು ಅಥವಾ ಟೀವಿ ವಾಹಿನಿಗಳಲ್ಲಿ ನೋಡಿರಬಹುದು. ಹೆಚ್ಚೆಂದರೆ ಹತ್ತೋ, ಹದಿನೈದೋ ಕೆ.ಜಿ ತೂಕದ ಕುಂಬಳ ಕಾಯಿಯನ್ನು ನೀವು ನೋಡಿರಲು ಸಾಧ್ಯವಿದೆ. ಆದರೆ ನೂರಾರು ಕೆ.ಜಿ ತೂಕದ ಕುಂಬಳ ಕಾಯಿ ನೋಡಿದ್ದೀರಾ? ಬಹುಷಃ ನೋಡಿರಲಿಕ್ಕಿಲ್ಲ. ಏಕೆಂದರೆ ಗಾತ್ರದಲ್ಲಿ ಅಷ್ಟೊಂದು ದೈತ್ಯವಾಗಿರುವ ತರಕಾರಿ, ಹಣ್ಣು, ಕಾಯಿಗಳು ನಮ್ಮಲ್ಲಿ ಬೆಳೆಯುವುದಿಲ್ಲ. ಬೆಳೆದರೂ ಅದು ಕೇವಲ ಪ್ರಕೃತಿಯ ಲೀಲೆ ಎಂದೇ ಹೇಳಬೇಕು. ಆದರೆ ಯುನೈಟೆಡ್ ಸ್ಟೇಟ್ಸ್ನ ಪಶ್ಚಿಮಕ್ಕಿರುವ ಅಲಾಸ್ಕಾ ರಾಜ್ಯದಲ್ಲಿ ಹಾಗಿಲ್ಲ. ಅದೃಷ್ಟವಂತರು ಮುಟ್ಟಿದ್ದಲ್ಲವೂ ಚಿನ್ನ ಎನ್ನುವಂತೆ, ಅಲಾಸ್ಕಾದ ರೈತರು ಬೆಳೆಯುವುದೆಲ್ಲಾ ದೈತ್ಯ ತರಕಾರಿಗಳೇ!

ಹೌದು, ಗಾತ್ರ ಹಾಗೂ ತೂಕದಲ್ಲಿ ಅತಿ ದೊಡ್ಡವು ಎನ್ನಬಹುದಾದ ತರಕಾರಿ ಮತ್ತು ಹಣ್ಣುಗಳನ್ನು ಅಲಾಸ್ಕಾದ ರೈತರು ಬೆಳೆಯುತ್ತಾರೆ. ಇದು ಹೊಸ ವಿಷಯವೇನಲ್ಲ. ಸುಮಾರು ವರ್ಷಗಳಿಂದಲೂ ದೈತ್ಯ ತರಕಾರಿಗಳ ತಳಿಗಳು ಅಲಾಸ್ಕಾದ ಜನ ಜೀವನದ ಅವಿಭಾಜ್ಯ ಅಂಗಗಳೇ ಆಗಿ ಹೋಗಿವೆ. ಅಂತಹ ದೊಡ್ಡ, ದೈತ್ಯ, ಅಸಹಜ ಗಾತ್ರ ಮತ್ತು ತೂಕದ ತರಕಾರಿಗಳ ಸಣ್ಣ ಪರಿಚಯ ಇಲ್ಲಿದೆ.

ಎಲೆ ಕೋಸು ಪರೀಕ್ಷಿಸುತ್ತಿರುವ ರೈತ

62 ಕೆ.ಜಿ ಎಲೆ ಕೋಸು

ಅಲಾಸ್ಕಾದಲ್ಲಿ ಪ್ರತಿ ವರ್ಷ ಹಣ್ಣು ಮತ್ತು ತರಕಾರಿಗಳ ಮೇಳ ನಡೆಯುತ್ತದೆ. ಆ ಮೇಳದ ವಿಶೇಷ ಮತ್ತು ಜನಾಕರ್ಷಣೆಯ ಕೇಂದ್ರಬಿAದುಗಳೇ ಈ ದೈತ್ಯ ತರಕಾರಿಗಳು. 62 ಕೆ.ಜಿ 6೦೦ ಗ್ರಾಂ. ತೂಕದ ಎಲೆ ಕೋಸು ಎಷ್ಟು ದೊಡ್ಡದಿರಬಹುದು ಎಂದು ಊಹಿಸಿಕೊಳ್ಳುವುದೇ ನಮಗೆ ಕಷ್ಟ, ಆದರೆ 2014ರಲ್ಲಿ ಇಷ್ಟು ಭಾರೀ ತೂಕದ ಎಲೆ ಕೋಸನ್ನು ರೈತರೊಬ್ಬರು ಬೆಳೆದಿದ್ದರು. ಈ ದಾಖಲೆಯನ್ನು ಇದುವರೆಗೂ ಯಾರೂ ಮುರಿದಿಲ್ಲ. ಇದೊಂದು ಗಿನ್ನೆಸ್ ವಿಶ್ವ ದಾಖಲೆ ಎಂಬುದೂ ವಿಶೇಷ. ಇದರೊಂದಿಗೆ ಕ್ರಮವಾಗಿ 41.8 ಕೆ.ಜಿ, 41.3 ಕೆ.ಜಿ ಮತ್ತು 35.1 ಕಿಲೋ ತೂಕದ ಎಲೆ ಕೋಸುಗಳು ಸಹ ಅಲಾಸ್ಕಾ ಮೇಳದಲ್ಲಿ ನೋಡುಗರ ಕಣ್ಣರಳಿಸಿವೆ.

 ಕುಂಬಳದ ತೂಕ 807 ಕಿಲೋ!

ಕುಂಬಳಕಾಯಿ ಎಂದರೆ ನೆನಪಾಗುವುದು ದಸರಾ ಅಥವಾ ವಿಜಯದಶಮಿ ಹಬ್ಬದಂದು ಮಾಡುವ ಆಯುಧ ಪೂಜೆ. ಮತ್ತೊಂದು, ‘ಕುಂಬಳ ಕಾಯಲ್ಲಿ ಬಾಂಬುಂಟು ಮಾರಾಯ್ರೆ’ ಎಂಬ ಫೇಮಸ್ ಸಿನಿಮಾ ಡೈಲಾಗ್. ಆದರೆ ಇವೆರೆಡನ್ನೂ ಮೀರಿಸುವಂಥದ್ದು ಅಲಾಸ್ಕಾದ ದೈತ್ಯ ಕುಂಬಳಕಾಯಿ. ಡೇಲ್ ಮಾರ್ಷಲ್ ಎಂಬವರು ತಮ್ಮ ಗ್ರೀನ್ ಹೌಸ್ನಲ್ಲಿ ಬೆಳೆಸಿದ್ದ ಬಳ್ಳಿಯಲ್ಲಿ ಬರೋಬ್ಬರಿ 807 ಕೆ.ಜಿ ತೂಕದ ಕುಂಬಳ ಕಾಯಿ ಬೆಳೆದಿತ್ತು. ಈ ಕುಂಬಳ ಕಾಯಿಯನ್ನು ಡೇಲ್ ಅವರು ಎರಡೂ ಕೈಗಳಿಂದ ಬಾಚಿ ತಬ್ಬಿಕೊಂಡ ಚಿತ್ರ ಕೂಡ ವೈರಲ್ ಆಗಿತ್ತು.

ಅಸಾಮಾನ್ಯ ಗಾತ್ರದ ಸೌತೆ ಕಾಯಿ

ಮೂರೂವರೆ ಅಡಿ ಸೌತೆ ಕಾಯಿ

ಒಂದೇ ಕೈಲಿ ಸುಲಭವಾಗಿ ಹಿಡಿದುಕೊಂಡು, ಸಣ್ಣಗೆ ಹೋಳು ಮಾಡಿ, ಸ್ವಲ್ಪ ಉಪ್ಪ-ಖಾರ ಸವರಿ ಸೌತೆ ಕಾಯಿ ಸವಿಯುವುದು ನಮಗೆಲ್ಲಾ ಅಚ್ಚುಮೆಚ್ಚು. ಅದರಲ್ಲೂ ಬೇಸಿಗೆ ಬಂತೆAದರೆ ಇದು ಬಹುಜನರ ಫೇವರಿಟ್ ತಿನಿಸು ಕೂಡ. ಆದರೆ ಅಲಾಸ್ಕಾದ ರೈತ ಮಹಿಳೆ ಬ್ರಿಟ್ನಿ ಕೌಫ್ಮನ್ ತನ್ನ ತೋಟದಲ್ಲಿ ಬರೋಬ್ಬರಿ ಮೂರೂವರೆ ಅಡಿ ಉದ್ದದ ಸೌತೆ ಕಾಯಿ (ಚೀನೀ ಸೌತೆ) ಬೆಳೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಅಲಾಸ್ಕಾ ಸ್ಟೇಟ್ ಫೇರ್ನಲ್ಲಿ ಪ್ರದರ್ಶನಕ್ಕೆ ಇರಿಸಿದ್ದ ಈ ಸೌತೆ ಕಾಯಿಗಳನ್ನು ನೋಡಿದ ಜನ ಕೆಲ ನಿಮಿಷಗಳ ಕಾಲ ನೋಡುತ್ತಲೇ ನಿಂತಿದ್ದರು. ಬ್ರಿಟ್ನಿ ಅವರ ತೋಟದಲ್ಲಿ ಬೆಳೆದಿದ್ದ ಬಹುತೇಕ ಸೌತೆ ಕಾಯಿಗಳು ಇದೇ ಗಾತ್ರದ್ದಾಗಿದ್ದವು ಎಂಬುದು ಮತ್ತೊಂದು ವಿಶೇಷ. ಇದರೊಂದಿಗೆ 16 ಕೆ.ಜಿಯ ಬ್ರೋಕೋಲಿ, 33 ಕೆ.ಜಿ ತೂಕದ ಖರ್ಬೂಜ, ಬೊಗಸೆಯಲ್ಲಿ ಹಿಡಿಯದಷ್ಟು ದೊಡ್ಡದಾದ ಟೊಮೇಟೊ... ಹೀಗೆ ಹೇಳುತ್ತಾ ಹೋದರೆ ಅಲಾಸ್ಕಾದ ದೈತ್ಯ ತರಕಾರಿಗಳ ಪಟ್ಟಿ ಮುಗಿಯುವುದೇ ಇಲ್ಲ.

ಸೂಯನ ಕಿರಣ ಕಾರಣ!

ತರಕಾರಿಗಳು ಇಷ್ಟೊಂದು ದೊಡ್ಡದಾಗಿ ಬೆಳೆಯುವುದಕ್ಕೆ ಅಲ್ಲಿನ ಮಣ್ಣಿನಲ್ಲಿ ಏನೋ ವಿಶೇಷ ಗುಣ ಇರಬೇಕು ಎಂದೇ ಹಲವರು ಭಾವಿಸುತ್ತಾರೆ. ಆದರೆ ತರಕಾರಿಗಳ ಈ ಅಸಹಜ ಬೆಳವಣಿಗೆಗೆ ಕಾರಣ ಜಗವ ಬೆಳಗುವ ಸೂರ್ಯ. ಅರೆ, ನಮ್ಮಲ್ಲೂ ಸೂರ್ಯನ ಬೆಳಕು ಬೀಳುತ್ತೆ, ಆದರೆ ಇಲ್ಲೇಕೆ ತರಕಾರಿಗಳ ಗಾತ್ರ ದೊಡ್ಡದಿಲ್ಲ ಎಂಬ ಪ್ರಶ್ನೆ ಮೂಡಬಹುದು. ಆದರೆ ನಮ್ಮಲ್ಲಿ 12 ತಾಸು ಬೆಳಗುವ ಸೂರ್ಯ ಅಲಾಸ್ಕಾದಲ್ಲಿ 19ರಿಂದ 20 ತಾಸು ಬೆಳಗುತ್ತಾನೆ. ಸೂರ್ಯನ ಈ ವಿಶೇಷ ಕೃಪೆಯಿಂದಾಗಿಯೇ ಅಲ್ಲಿನ ತರಕಾರಿಗಳು ದೊಡ್ಡದಾಗಿ ಬೆಳೆಯುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಸಾಮಾನ್ಯವಾಗಿ ಸೂರ್ಯನ ಕಿರಣಗಳನ್ನು ಹೆಚ್ಚು ಸಮಯ ಪಡೆಯುವ ಬೆಳೆಗಳು ಉತ್ತಮವಾಗಿ ಬೆಳೆಯುತ್ತವೆ. ‘ಸೂರ್ಯನ ಕಿರಣಗಳು ಹೆಚ್ಚು ಕಾಲ ಬೀಳುವುದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆ ಸಾಮಾನ್ಯಕ್ಕಿಂತಲೂ ಹೆಚ್ಚುವರಿ ಪ್ರಮಾಣದಲ್ಲಿ ನಡೆಯುವ ಕಾರಣ ಅಲಾಸ್ಕಾದಲ್ಲಿ ತರಕಾರಿಗಳು ದೊಡ್ಡದಾಗಿ ಬೆಳೆಯುತ್ತವೆ. ಜೊತೆಗೆ ಇದೇ ಕಾರಣದಿಂದ ತರಕಾರಿಗಳ ರುಚಿಯಲ್ಲಿ ಸಿಹಿ ಹೆಚ್ಚಾಗುತ್ತದೆ. ಇಲ್ಲಿ ಬೆಳೆಯುವ ಕ್ಯಾರಟ್ ತಿನ್ನುವ ಗ್ರಾಹಕರು, ಕ್ಯಾರಟ್ಗೆ ಸಕ್ಕೆರೆ ಬೆರೆಸಿದ್ದೀರಾ ಎಂದು ಕೇಳಿದ್ದೂ ಇದೆ’ ಎನ್ನುತ್ತಾರೆ ಯೂನಿವರ್ಸಿಟಿ ಆಫ್ ಅಲಾಸ್ಕಾದ ಸ್ಟೀವ್ ಬ್ರೌನ್.