ಭಾರತೀಯ ವಿಮಾನಯಾನವು ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಿದೆ. ಹೌದು ಒಂದೇ ದಿನ ದಾಖಲೆಯ ಮಟ್ಟದ ಜನ ವಿಮಾನದಲ್ಲಿ ಪ್ರಯಾಣ ಬೆಳೆಸಿರುವುದು ದಾಖಲಾಗಿದೆ.
ಒಂದೇ ದಿನದಲ್ಲಿ ಬರೋಬ್ಬರಿ 456,082 ಜನ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವ ಮೂಲಕ ಹೊಸ ದಾಖಲೆ ಸೃಷ್ಟಿ ಆಗಿದೆ.
ಈ ಮೂಲಕ ಭಾರತದ ದೇಶೀಯ ವಿಮಾನ ಸಂಚಾರವು ದಾಖಲೆಯನ್ನೇ ಸೃಷ್ಟಿ ಮಾಡಿದೆ.
ಈ ಹೊಸ ದಾಖಲೆಯು ಏಪ್ರಿಲ್ 30ಕ್ಕೆ ಸೃಷ್ಟಿಯಾಗಿದೆ. ಆ ದಿನ ಬರೋಬ್ಬರಿ ದೇಶಾದ್ಯಂತ 2,978 ವಿಮಾನಗಳು ಟೇಕ್ ಆಫ್ ಆಗಿವೆ.
ಈ ಸಂಬಂಧ ಟ್ವೀಟ್ ಮಾಡಿರುವ ಭಾರತೀಯ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಸಾಂಕ್ರಾಮಿಕ ರೋಗದ ನಂತರ
ವಿಮಾನ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಳವಾಗಿರುವುದರ ದಾಖಲೆ ಇದು. ಭಾರತದ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದಿದ್ದಾರೆ.
ಇನ್ನು 2023ರ ಮೊದಲ ಮೂರು ತಿಂಗಳಲ್ಲಿ ದೇಶೀಯ ವಿಮಾನಗಳ ಮೂಲಕ ಬರೋಬ್ಬರಿ 37.5 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.
ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 51.7% ಬೆಳವಣಿಗೆ ಆಗಿದೆ ಎಂದು ದೇಶದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ವರದಿ ತಿಳಿಸಿದೆ.
ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ ವಿಮಾನ ಪ್ರಯಾಣವು ಸಾಮಾನ್ಯವಾಗಿ ದೇಶದ GDP (ಒಟ್ಟು ದೇಶೀಯ ಉತ್ಪನ್ನ)ದ ಎರಡು ಪಟ್ಟು ವೇಗದಲ್ಲಿ ಬೆಳೆಯುತ್ತಿದೆ ಎನ್ನಲಾಗಿದೆ.
ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗುವುದರ ಹೊರತಾಗಿಯೂ ಹೆಚ್ಚಿನ ವಾಯುಯಾನ ಟರ್ಬೈನ್ ಇಂಧನ ಬೆಲೆಗಳು,
ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ವಿಮಾನಯಾನ ಸಂಸ್ಥೆಗಳ ಆರ್ಥಿಕ ಸಂಕಷ್ಟ ಸೇರಿದಂತೆ
ಹಲವು ಸಮಸ್ಯೆಗಳಿಂದಾಗಿ ಈ ಉದ್ಯಮವು ನಿರೀಕ್ಷಿತ ಲಾಭವನ್ನು ಗಳಿಸುತ್ತಿಲ್ಲ ಎಂದು ವಿಶ್ಲೇಷಿಸಲಾಗಿದೆ.
ಇನ್ನು ಪ್ರ್ಯಾಟ್ ಮತ್ತು ವಿಟ್ನಿ ಎಂಜಿನ್-ಸಂಬಂಧಿತ ಸಮಸ್ಯೆಗಳಿಂದಾಗಿ ಇಂಡಿಗೋ ಮತ್ತು ಗೋ ಫಸ್ಟ್‌ನಂತಹ ಪ್ರಮುಖ
ಭಾರತೀಯ ಸಂಸ್ಥೆಗಳ 50ಕ್ಕೂ ಹೆಚ್ಚು ವಿಮಾನಗಳು ಹಲವು ತಿಂಗಳಿನಿಂದ ಸಂಕಷ್ಟದಲ್ಲಿವೆ.
ಸಾಂಕ್ರಾಮಿಕ ರೋಗದ ನಂತರ ಬದಲಾದ ಪರಿಸ್ಥಿತಿ
ದೇಶದಲ್ಲಿ ಸಾಂಕ್ರಾಮಿಕ ರೋಗದ ಪೂರ್ವದಲ್ಲಿಯೂ ವಿಮಾನಯಾನ ಪ್ರಮಾಣ ಉತ್ತಮವಾಗಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ.
ಆರ್ಥಿಕ ಸಂಕಷ್ಟದ ನಂತರ ವಿಮಾನಯಾನ ಸಂಸ್ಥೆಯು ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸಿದೆ.
ಆದರೆ, ಇದೀಗ ಹೊಸ ಬೆಳವಣಿಗೆ ಸೃಷ್ಟಿಯಾಗಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ.
ಇದು ರಜೆ ಸಮಯವಾಗಿರುವುದರಿಂದ ಹಾಗೂ ಕಳೆದ ಕೆಲವು ವರ್ಷಗಳಲ್ಲಿ ಪ್ರವಾಸೋದ್ಯಮ
ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆ ಕಾಣದೆ ಇರುವುದು ಎಲ್ಲವೂ ಈಗ ಚೇತರಿಕೆ ಆಗುತ್ತಿರುವ ಸಾಧ್ಯತೆ ಇದೆ.