ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾದರಿಯಲ್ಲಿ ಈಗ ರೈತರ ಜೊತೆಗೆ ವಾಸ್ತವ್ಯ ಮಾಡಲು ಕೃಷಿ ಸಚಿವ ಬಿ.ಸಿ ಪಾಟೀಲ್ ಮುಂದಾಗಿದ್ದಾರೆ. ಕೋವಿಡ್ , ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತ ಸಮುದಾಯದ ಕಷ್ಟ ನಷ್ಟಗಳನ್ನು ಖುದ್ದಾಗಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ರೈತರ ಜೊತೆಗೆ ನವೆಂಬರ್ 14 ರಿಂದಲೇ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ. ನ. 14 ಅವರ ಹುಟ್ಟುಹಬ್ಬವೂ ಇರುವುದರಿಂದ ಈ ಜನ್ಮದಿನವನ್ನು ರೈತರ ಜೊತೆ ಕಳೆಯಲು ನಿರ್ಧರಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನವೆಂಬರ್ 14 ರಂದು ತಮ್ಮ ಹುಟ್ಟುಹಬ್ಬ. ಈ ಜನ್ಮದಿನವನ್ನು ರೈತರ ಜೊತೆ ಕಳೆಯಲು ನಿರ್ಧರಿಸಿದ್ದೇನೆ. ಕಳೆದ ಏಪ್ರಿಲ್ 1 ರಿಂದಲೇ ರೈತ ವಾಸ್ತವ್ಯ ಮಾಡಬೇಕೆಂದಿದ್ದೆ ಆದರೆ ಕೋವಿಡ್ ಅಡ್ಡ ಆಯಿತು.ಈಗ ರೈತರೊಂದಿಗೊಂದು ದಿನ ಎಂಬ ವಿನೂತನ ಕಾರ್ಯಕ್ರಮವನ್ನು ನ. 14ರಿಂದ ಮಂಡ್ಯದಿಂದ ಆರಂಭಿಸುತ್ತಿದ್ದೇನೆ ಎಂದರು.
ಕೊರೋನಾದಂತಹ ಈ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವುದು, ಸಮಗ್ರ ಕೃಷಿ, ಕೃಷಿ ರೈತೋದ್ಯಮ ಕುರಿತು ಉತ್ಪಾದನಾ ವೆಚ್ಚ ಕುರಿತು ಮಾಹಿತಿ ನೀಡಿ ಹುರಿದುಂಬಿಸುವುದು ಹಾಗೂ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂಬುದನ್ನು ಅರಿಯಲು ಕೋಲಾರ ಕೃಷಿ ಮಾದರಿಯಾಗುವಂತೆ ಮನೋಸ್ಥೈರ್ಯ ತುಂಬುವ ಉದ್ದೇಶ ಈ ಕಾರ್ಯಕ್ರಮದಾಗಿದೆ. ಮಾದರಿ ರೈತರಿಗೆ ಭೇಟಿ ನೀಡಿ ಅವರ ಅನುಭವ ಬೇರೆಯವರಿಗೆ ಮಾದರಿಯಾಗುವಂತೆ ಮಾಡುವುದು ಇದರ ಉದ್ದೇಶ ಎಂದರು.
ಪ್ರತಿ ತಿಂಗಳು 2 ಜಿಲ್ಲೆ ಕಾರ್ಯಕ್ರಮ ಮಾಡಿ ಬೆಳಿಗ್ಗೆ 7ರಿಂದ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಗುವುದು. ಇದೆಲ್ಲ ಆದ ಬಳಿಕ ಸಮಗ್ರ ವರದಿಯನ್ನು ಮುಖ್ಯಮಂತ್ರಿಗೆ ನೀಡಿ ಕೃಷಿ ಇಲಾಖೆಯಲ್ಲಿ ಹೊಸ ಬದಲಾವಣೆ ಮಾಡಲಾಗುವುದು ಎಂದರು.
ರೈತರ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ನೀಡವುದು ಅತೀ ಅಗತ್ಯವಾಗಿದೆ. ತಾತ್ಕಲಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕಿಂತ ಶಾಶ್ವತ ಪರಿಹಾರ ಮುಖ್ಯ. ಎಲ್ಲಾ ಜಿಲ್ಲೆಗಳನ್ನು ಈಗ ಮತ್ತೆ ಸುತ್ತಿ ರೈತರ ಸಮಸ್ಯೆಯನ್ನು ಅರಿಯಲು ಅಧ್ಯಯನ ಈಗ ಮತ್ತೊಂದು ಪ್ರಯತ್ನವಾಗಿದೆ ಎಂದರು.