News

ಉತ್ತರ ಭಾರತಕ್ಕೆ ಕಿಸಾನ್‌ ರೈಲಿನಲ್ಲಿ ಅಡಕೆ ಸಾಗಾಟ: ಸೆ. 25ರಿಂದ ಪ್ರಾಯೋಗಿಕ ಸಾಗಾಟ

30 August, 2020 7:03 PM IST By:

ಅಡಕೆ ಬೆಳೆಯುವ ರೈತರಿಗೆ ಸಂತಸದ ಸುದ್ದಿ. ಇನ್ನೂ ಮುಂದೆ ನಿಮ್ಮ ಅಡಕೆ ಬೆಳೆ ಸಾಗಿಸುವ ಕುರಿತು ಚಿಂತೆ ಮಾಡುವ ಅವಶ್ಯಕತೆಯಿಲ್ಲ. ನಿಮ್ಮ ಮನೆ ಬಾಗಿಲಿನಿಂದ ಉತ್ತರ ಭಾರತದ ರಾಜ್ಯಗಳಿಗೆ ನಿಮ್ಮ ಉತ್ಪನ್ನ ಸಾಗಾಟವಾಗಲಿದೆ.
ಉತ್ತರ ಭಾರತದ ಗುಜರಾತ್‌, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಮತ್ತಿತರ ರಾಜ್ಯಗಳಿಗೆ ಟ್ರಕ್‌ ಮೂಲಕ ಸಾಗುತ್ತಿದ್ದ ಕರಾವಳಿಯ ಅಡಕೆ ಇನ್ನು ಮುಂದೆ ರೈಲಿನ ಮೂಲಕ ಸಾಗಲಿದೆ. ಇದರಿಂದಾಗಿ ಇನ್ನುಮುಂದೆ ಅಡಕೆ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯಾಗಲಿದೆ.
ಕೃಷಿ ಉತ್ಪನ್ನಗಳನ್ನು ಸಾಗಿಸಲೆಂದೇ ಕೇಂದ್ರ ಸರ್ಕಾರ ಆರಂಭಿಸಿರುವ ಕಿಸಾನ್‌ ರೈಲು ಯೋಜನೆಯ ಪ್ರಯೋಜನ ಕರ್ನಾಟಕ ಅಡಕೆ ಬೆಳೆಗಾರರಿಗೂ ಸಿಗಲಿದೆ. ಈ ಕಿಸಾನ್ ರೈಲು ಸೆ.25ರಂದು ಪ್ರಾಯೋಗಿಕ ಸಾಗಾಟ ಆರಂಭಗೊಳ್ಳಲಿದೆ.ಅಡಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕಿಸಾನ್‌ ರೈಲಿನ ಮೂಲಕ ಸಾಗಿಸುವುದಾಗಿ ಕೊಂಕಣ್‌ ರೈಲ್ವೆಯು ಪುತ್ತೂರು ಎಪಿಎಂಸಿಗೆ ನೀಡಿರುವ ಪ್ರಸ್ತಾವನೆ ಅಂಗೀಕರಿಸಿದೆ.
ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ನಡೆದ ವರ್ತಕರ, ಗಾರ್ಬಲ್‌ದಾರರ, ಕ್ಯಾಂಪ್ಕೋ ಸಂಸ್ಥೆ, ಟ್ರಾನ್ಸ್‌ಪೊರ್ಟ್‌ ದಾರರ ಸಭೆಯಲ್ಲಿ ರೈಲ್ವೇ ಅಧಿಕಾರಿಗಳು ಈ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೇಂದ್ರ ಸರಕಾರ ಕಿಸಾನ್‌ ರೈಲು ಯೋಜನೆ ಆರಂಭಿಸಿದ್ದರಿಂದ ರಾಜ್ಯದಲ್ಲಿ ಕೃಷಿ ಕ್ಷೇತ್ರದ ಪ್ರಗತಿಗೆ ಪೂರಕವಾಗಲಿದೆ. ಸೂಕ್ತ ಸಾಗಾಣಿಕೆ ಸೌಲಭ್ಯವಿದ್ದರೆ ದರ ಕುಸಿತ ತಡೆಯಲು ಸಾಧ್ಯ. ಜಿಲ್ಲೆಯ ಚಾಲಿ ಅಡಿಕೆಗೆ ಗುಜರಾತ್‌, ರಾಜಸ್ಥಾನಗಳಲ್ಲಿ ಬಹು ಬೇಡಿಕೆಯಿದ್ದು, ಕೊಂಕಣ ರೈಲ್ವೆಯು ಸ್ಪರ್ಧಾತ್ಮಕ ದರದಲ್ಲಿ ಸಾಗಾಟಕ್ಕೆ ಮುಂದೆ ಬಂದಿದೆ. ಇದರಿಂದ ಸಾಗಾಟವೆಚ್ಚ ಇಳಿಮುಖ ಮತ್ತು ಸಮಯ ಉಳಿತಾಯವಾಗಲಿದೆ ಎಂದರು.
ಕರಾವಳಿಯ ಅಡಕೆಗೆ ಉತ್ತರ ಭಾರತವೇ ಪ್ರಧಾನ ಮಾರುಕಟ್ಟೆಯಾಗಿರುವ ಕಾರಣ ಕಿಸಾನ್‌ ರೈಲಿನಲ್ಲಿ ಸಾಗಿಸುವುದು ಉಪಯುಕ್ತ. ಅಡಿಕೆ ಮಾತ್ರವಲ್ಲದೆ ಕೊಕ್ಕೋ, ಗೇರು ಬೀಜ, ರಬ್ಬರ್‌, ಕರಿಮೆಣಸನ್ನು ಉತ್ಪಾದಕರ ಮನೆ ಬಾಗಿಲಿನಿಂದ ಗ್ರಾಹಕರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸ ಇನ್ನು ಮುಂದೆ ಸುಲಲಿತವಾಗಲಿದೆ ಎಂದರು.

ಕೊಂಕಣ ರೈಲ್ವೇಯ ರೀಜಿನಲ್‌ ಟ್ರಾಫಿಕ್‌ ಮ್ಯಾನೇಜರ್‌ ವಿನಯ ಕುಮಾರ್‌ ಮಾತನಾಡಿ, ಗೂಡ್ಸ್‌ ರೈಲಿನ ಒಂದು ವ್ಯಾಗನ್‌ನಲ್ಲಿ 63 ಟನ್‌ ಅಡಿಕೆ ಹಿಡಿಯುತ್ತದೆ.. ಇಲ್ಲಿಂದ ಅಡಿಕೆ ಲೋಡ್‌ ಮಾಡಿ ಮಂಗಳೂರು ತೋಕೂರಿನಲ್ಲಿರುವ ಗೂಡ್ಸ್‌ ಕೇಂದ್ರಕ್ಕೆ ಸಾಗಾಟ ಮತ್ತು ಗುಜರಾತ್‌ ಅಥವಾ ಉತ್ತರ ಪ್ರದೇಶದ ಭಾಗದಲ್ಲಿ ರೈಲ್ವೇ ಕೇಂದ್ರದ 50 ಕಿ.ಮೀ. ಸುತ್ತಮುತ್ತ ತಲುಪಿಸುವ ಜವಾಬ್ದಾರಿ ಕೂಡ ರೈಲ್ವೇ ಇಲಾಖೆ ವಹಿಸಲಿದೆ ಎಂದರು.