News

ಕೃಷಿ ಸಚಿವರಿಂದಲೇ ತಮ್ಮ ಹೊಲದಲ್ಲಿ ಬೆಳೆ ಸಮೀಕ್ಷೆ

25 August, 2020 9:21 AM IST By:

ಕೃಷಿ ಸಚಿವ ಬಿ.ಸಿ. ಪಾಟೀಲರವರು ಸೊರಬ ತಾಲ್ಲೂಕಿನ ಯಲವಾಳ ಗ್ರಾಮ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕು ಚಿಕ್ಕಕೊಣತಿ ಗ್ರಾಮದ ತಮ್ಮ ಜಮೀನುಗಳಲ್ಲಿವ ರೈತ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆ ನಡೆಸಿದರು.

ಜಮೀನಿನಲ್ಲಿ ನಿಂತು ಬೆಳೆ ವಿವರ, ಸರ್ವೇ ನಂಬರ್ ಸೇರಿದಂತೆ ಅಗತ್ಯ ಮಾಹಿತಿ ಹಾಗೂ ಭಾವಚಿತ್ರವನ್ನು ಆ್ಯಪ್‌ನಲ್ಲಿ ಅಪ್ಲೋಡ್‌ ಮಾಡಿದ ನಂತರ  ಮಾತನಾಡಿದ ಅವರು, ರೈತನ ಬೆಳೆ ರೈತನ ಹಕ್ಕು. ದೇಶದಲ್ಲಿ ಮೊದಲ ಬಾರಿಗೆ ರೈತನೇ ಸ್ವತಃ ತನ್ನ ಹೊಲದ ಸಮೀಕ್ಷೆ ನಡೆಸಿ, ತಾನೇ ಪ್ರಮಾಣ ಪತ್ರ‌ ನೀಡುವಂತಹ ಮಹತ್ವದ ವ್ಯವಸ್ಥೆ ಜಾರಿಗೆ ತರಲಾಗಿದೆ. ರೈತರು ಆ್ಯಪ್ ಸಮೀಕ್ಷೆ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದರು.

ಈ ಬಾರಿಯ ರೈತ ಬೆಳೆ ಸಮೀಕ್ಷೆ ಎನ್ನುವುದು ಬೆಳೆ ಉತ್ಸವದಂತಾಗಿದೆ. ಆಗಸ್ಟ್ 20 ರ ಸಂಜೆಯವರೆಗೆ 6,65,810 ರೈತರು ಸರ್ವೆ ನಂ.ಪ್ಲಾಟ್ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ಹಿಂದೆ ಮೊಬೈಲ್ ಆಪ್ ಬೆಳೆ ಸಮೀಕ್ಷೆಗೆ ಆಗಸ್ಟ್ 24 ಕೊನೆಯ ದಿನ ನಿಗದಿಪಡಿಸಲಾಗಿತ್ತು ಇದೀಗ ಮತ್ತಷ್ಟು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕಚೇರಿ ಕೂಡ ಆ್ಯಪ್ ಸಮೀಕ್ಷೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ರಾಜ್ಯದ ಈ ಆ್ಯಪ್ ಸಮೀಕ್ಷೆಯಿಂದ ಪ್ರೇರೇಪಿತವಾಗಿದ್ದು, ದೇಶದ ಎಲ್ಲಾ ಕಡೆಗಳಲ್ಲೂ ಸಹ ಬೆಳೆ ಸಮೀಕ್ಷೆ ಅಭಿಯಾನ ಜಾರಿಗೊಳಿಸಲು ಮುಂದಾಗಿದೆ ಎಂದು ತಿಳಿಸಿದರು.