News

ನವೆಂಬರ್ 6 ರಿಂದ ಆರಂಭವಾಗುವ ಕೃಷಿ ಮೇಳ ನ. 11 ಕ್ಕೆ ಮುಂದೂಡಿಕೆ

25 October, 2020 12:00 PM IST By:

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಯೋಜಿಸಿರುವ 'ಕೃಷಿ ಮೇಳ'ವನ್ನು ಮುಂದೂಡಲಾಗಿದ್ದು, ನವೆಂಬರ್ 11ರಿಂದ 13ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದರಿಂದ ಪ್ರವಾಹದಲ್ಲಿ ಸಿಲುಕಿರುವ ರೈತರು ಕೃಷಿ ಮೇಳದಲ್ಲಿ ಭಾಗವಹಿಸಲು ಸಾಧ್ಯತೆ ಕಡಿಮೆಯಿರುವುದರಿಂದ  ಕೃಷಿ ಮೇಳವನ್ನು ನವೆಂಬರ್ 11,12 ಮತ್ತು 13 ರಂದು ನಡೆಸಲು ತೀರ್ಮಾನಿಸಲಾಗಿದೆ.

ಕೊರೋನಾದಿಂದಾಗಿ ಆರಂಭದಲ್ಲಿ ಕೃಷಿ ಮೇಳ ನಡೆಸಬೇಕೋ ನಡೆಸಬಾರದೋ ಎಂಬ ಗೊಂದಲದ ನಡುವೆ ನವೆಂಬರ್ 6 ರಿಂದ ನಡೆಯಲು ನಿರ್ಧರಿಸಲಾಗಿತ್ತು.  ಸರ್ಕಾರದ ಸಮ್ಮತಿ ಮೇರೆಗೆ ನ.6ರಿಂದ 8ರವರೆಗೆ ಮೇಳ ನಡೆಸಲು ದಿನಾಂಕ ನಿಗದಿಯಾಗಿತ್ತು. ಆದರೆ, ಪ್ರವಾಹ ಸ್ಥಿತಿಯಲ್ಲಿ ಸಿಲುಕಿರುವ ರೈತರು ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಮೇಳ ವನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ.

ಆನ್‍ಲೈನ್ ಮೂಲಕವೂ ಮೇಳ ವೀಕ್ಷಣೆ:

ಮೇಳದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು. ಭಾಗವಹಿಸುವ ಎಲ್ಲರ ದೇಹದ ಉಷ್ಣಾಂಶ ತಪಾಸಣೆ ಮಾಡಲಾಗುತ್ತದೆ. ಮೇಳದಲ್ಲಿ ಹೆಚ್ಚು ಜನಸಂದಣಿಯಾಗದಂತೆ ತಡೆಯುವುದು ಹಾಗೂ ದೂರದ ಊರಿನ ರೈತರು ತಮ್ಮ ಸ್ಥಳದಿಂದಲೇ ಮೇಳ ವೀಕ್ಷಿಸಲು ಅನುಕೂಲವಾಗುವಂತೆ ವಿಶ್ವವಿದ್ಯಾಲಯದ ಫೇಸ್‍ಬುಕ್, ಯೂಟ್ಯೂಬ್, ಟ್ವಿಟರ್‌ನಂತಹ  ಆನ್‍ಲೈನ್ ಮೂಲಕ ಮೇಳದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿದೆ,

ಮೇಳಕ್ಕೆ ಬರುವವರಿಗೆ ಸವಲತ್ತುಗಳು:

ಕಳೆದ ಬಾರಿ 15 ಲಕ್ಷಕ್ಕೂ ಹೆಚ್ಚು ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಜನಸಂದಣಿಯಾಗದಂತೆ ಎಚ್ಚರವಹಿಸುವುದು ನಮ್ಮ ಕರ್ತವ್ಯ. ಕೊರೊನಾ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಮಕ್ಕಳು ಹಾಗೂ 60 ಮೇಲ್ಪಟ್ಟವರಿಗೆ ಮೇಳಕ್ಕೆ ಪ್ರವೇಶ ನಿರಾಕರಿಸಲಾಗಿದ್ದು, ವಯಸ್ಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಖ ಕವಚ (ಮಾಸ್ಕ್) ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.ರಿಯಾಯಿತಿ ದರದಲ್ಲಿ  ಪಂಕ್ತಿ ಊಟದ ಬದಲು ತಟ್ಟೆ ಊಟ (ಬಫೆಟ್) ಮಾದರಿಯಲ್ಲಿ ಲಘು ಉಪಹಾರದ ವ್ಯವಸ್ಥೆ ಇರಲಿದೆ.ಜಿ.ಕೆ.ವಿ.ಕೆ ಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಇರಲಿದೆ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು.  ಉಚಿತ ಪ್ರವೇಶ ಇರಲಿದೆ.

ಮೂರು ಹೊಸ ತಳಿಗಳ ಬಿಡುಗಡೆ:

'ಈ ವರ್ಷ ಮೂರು ನೂತನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ನೆಲಗಡಲೆಯಲ್ಲಿ ಜಿಕೆವಿಕೆ 27, ಅಲಸಂದೆಯಲ್ಲಿ ಕೆ.ಸಿ.-8, ಮತ್ತು ಮೇವಿನ ಬೆಳೆಯಲ್ಲಿ ಅಲಸಂದೆ ಎಂ.ಎಫ್.ಸಿ.- 09-3 (ಎಂ.ಎಫ್.ಸಿ-3). ಮೂರು ಹೊಸ ತಳಿಗಳನ್ನು ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿದೆ.