News

ಉತ್ಪಾದನಾ ವೆಚ್ಚದಲ್ಲಿ ಸಿರಿಧಾನ್ಯಗಳಿಗೆ ಪ್ರತಿ ಕ್ವಿಂಟಲಿಗೆ 4500 ರಿಂದ 5000 ರೂಪಾಯಿ ನೀಡಲು ಶಿಫಾರಸು

24 February, 2021 10:01 AM IST By:
Millets

ಸಿರಿ ಧಾನ್ಯಗಳಿಗೂ ಬೆಂಬಲ ಬೆಲೆ ಘೋಷಿಸಬೇಕು. ಉತ್ಪಾದನಾ ವೆಚ್ಚದ ಆಧಾರದಲ್ಲಿ ಪ್ರತಿ ಕ್ವಿಂಟಲ್‌ಗೆ  4,500ದಿಂದ  5,000 ದರದಲ್ಲಿ ಸಿರಿ ಧಾನ್ಯಗಳನ್ನು ಸರ್ಕಾರ ಖರೀದಿ ಮಾಡಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗ ಶಿಫಾರಸು ಮಾಡಿದೆ.

ಸಿರಿಧಾನ್ಯಗಳ ವಿಸ್ತ್ರೀರ್ಣ, ಉತ್ಪಾದನೆ, ಉತ್ಪಾದಕೆ ಹಾಗೂ ಆರ್ಥಿಕದಾಯತೆ ವಿಶ್ಲೇಷಣಾ ವರದಿಯನ್ನು ಆಯೋಗ ಸಲ್ಲಿಸಿದೆ. ಒಟ್ಟಾರೆ 61000 ಹೆಕ್ಟೇರ್ ಪ್ರದೇಶದಲ್ಲಿ ಜೋಳ, ರಾಗಿ, ಸಜ್ಜೆ ಜೊತೆಗೆ ನವಣೆ, ಸಾಮೆ, ಬರಗು, ಊದಲು, ಹಾರಕ ಮುಂತಾದ ಸಿರಿಧಾನ್ಯಗಳನ್ನು ಉತ್ಪಾದಿಸಲಾಗುತ್ತಿದೆ. ಪೌಷ್ಠಿಕಾಂಶಯುಕ್ತ ಒರಟು ಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಸಲ್ಲಿಸಿದ ಶಿಫಾರಸ್ಸು ವರದಿಯಲ್ಲಿ ಪ್ರಸ್ತಾಪಿಸಿದೆ.

ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ರಾಜ್ಯಕ್ಕೆ ಪ್ರತ್ಯೇಕವಾದ ಸಮಗ್ರ ಖರೀದಿ ನೀತಿ ರೂಪಿಸುವುದು ಮತ್ತು ಸಿರಿ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸುವ ಶಿಫಾರಸುಗಳುಳ್ಳ ಎರಡು ಪ್ರತ್ಯೇಕ ವರದಿಗಳನ್ನು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.

. ರಾಜ್ಯ ಸರ್ಕಾರ ಈ ಧಾನ್ಯಗಳನ್ನು ಬೆಂಬಲ ಬೆಲೆಯಡಿ ಖರೀದಿಸಿ ಶಾಲಾ ಮಕ್ಕಳ ಬಿಸಿಯೂಟ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿತರಿಸಬೇಕು. ಆ ಮೂಲಕ ಸಿರಿ ಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಖರೀದಿ ನೀತಿಗೆ ಶಿಫಾರಸು: ರಾಜ್ಯದ ಪಡಿತರ ಚೀಟಿದಾರರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸಲು ಅಗತ್ಯವಿರುವ ಆಹಾರ ಧಾನ್ಯಗಳನ್ನು ರಾಜ್ಯದ ರೈತರಿಂದಲೇ ಖರೀದಿಸಲು ಅವಕಾಶ ಕಲ್ಪಿಸುವ ಸಮಗ್ರ ಖರೀದಿ ನೀತಿ ರೂಪಿಸಬೇಕು ಎಂಬ ಶಿಫಾರಸನ್ನೂ ಆಯೋಗ ಮಾಡಿದೆ.

ಕೊಯಿಲಿನ ಅವಧಿಯಲ್ಲಿ 5 ಕಿ.ಮೀ. ಅಂತರದಲ್ಲೇ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಕೃಷಿ ಉತ್ಪನ್ನ ಮಾರುಕಟ್ಟೆಗಳು, ತಾಲ್ಲೂಕು ಸಹಕಾರ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, ರೈತ ಉತ್ಪಾದಕರ ಸಂಸ್ಥೆಗಳು ಮತ್ತು ಸ್ವಸಹಾಯ ಗುಂಪುಗಳ ಮೂಲಕ ಖರೀದಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ರೈತರಿಂದ ಖರೀದಿಸುವ ಕೃಷಿ ಉತ್ಪನ್ನದ ಮಿತಿ ಸಡಿಲಿಸಬೇಕು ಮತ್ತು ಆವರ್ತ ನಿಧಿ ಮೊತ್ತವನ್ನೂ ಹೆಚ್ಚಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.