ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳು ರೈತ ಮತ್ತು ಕಾರ್ಮಿಕ ವಿರೋಧಿಯಾಗಿವೆ ಎಂದು ಖಂಡಿಸಿ ರೈತ, ಕಾರ್ಮಿಕ ಸಂಘಟನೆಗಳು ರಾಜ್ಯದಾದ್ಯಂತ ಶುಕ್ರವಾರ ರಸ್ತೆ ತಡೆ ನಡೆಸಿದವು.
ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತ ಸಂಘಟನೆಗಳು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದವು. ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ವಾಹನ ಸಂಚಾರ ತಡೆದು ಧರಣಿ ನಡೆಸಿದ ರೈತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಹೆದ್ದಾರಿ ಬಂದ್ ಮಾಡಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಹಳೆ ಮೈಸೂರು ಭಾಗಗಳಲ್ಲಿ ರೈತರು ಬೀದಿಗಿಳಿದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಯ್ದೆ ತಿದ್ದುಪಡಿ ಬಿಡಿ, ಪ್ರವಾಹದ ಪರಿಹಾರ ಕೊಡಿ, ರೈತ–ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಿರಿ ಎಂಬ ಘೋಷಣೆಗಳನ್ನು ಕೂಗಿದರು.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ರಾಜ್ಯದೆಲ್ಲೆಡೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದು ಸಂಜೆಯ ವೇಳೆಗೆ ಬಿಡುಗಡೆ ಮಾಡಿದರು.
ಬಿ.ಎಸ್. ಯಡಿಯೂರಪ್ಪನವರು ನಡೆಸಿದ ಸಂಧಾನ ಸಭೆ ವಿಫಲ:
ರೈತರ ನಿಯೋಗವನ್ನು ಮಾತುಕತೆಗೆ ಆಹ್ವಾನಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಯ್ದೆಗಳಲ್ಲಿ ಕೆಲ ಬದಲಾವಣೆ ತರುವ ಚಿಂತನೆ ಇದೆ. ಪ್ರತಿಭಟನೆ ಕೈಬಿಡಿ ಎಂದರು.
ಭೂ ಸುಧಾರಣೆ ತಿದ್ದುಪಡಿ ಮತ್ತು ಎಪಿಎಂಸಿ ವಿದೇಯಕಗಳ ತಿದ್ದುಪಡಿ ಮಸೂದೆಗಳನ್ನು ವಾಪಸ್ಸು ಪಡೆಯಬೇಕೆಂದು ರೈತ ಮತ್ತು ಕಾರ್ಮಿಕ ಮುಖಂಡರು ಒತ್ತಾಯಿಸಿದರು. ಸರ್ಕಾರ ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಸಿಎಂ ಸಭೆ ವಿಫಲವಾಗಿದೆ.
ರೈತ ವಿರೋಧಿ ಮಸೂದೆ ವಾಪಸ್‌ಗೆ ಹರಿಯಾಣದಲ್ಲೂ ಜಾಥಾ:
ಹೊಸ ಕೃಷಿ ಮಸೂದೆಗಳನ್ನು ಖಂಡಿಸಿ ಪಂಜಾಬ್ ಹಾಗೂ ಹರಿಯಾಣದಲ್ಲಿ ರೈತರು ಶುಕ್ರವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ ರೈತರು, ಮಸೂದೆಗಳನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಮಸೂದೆ ವಿರೋಧಿಸಿ ಕರೆ ನೀಡಲಾಗಿದ್ದ ‘ಪಂಬಾಜ್ ಬಂದ್‌ಗೆ ಸರ್ಕಾರಿ ನೌಕರರ ಸಂಘಟನೆ ಗಳು, ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರು ಬೆಂಬಲ ಸೂಚಿಸಿದ್ದರು. ಅಂಗಡಿಗಳು, ವಾಣಿಜ್ಯ ಮಳಿಗೆಗಳು, ತರಕಾರಿ ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು.