ಇಲ್ಲಿ ಹೇಳುತ್ತಿರುವುದು ಸುಪ್ರೀಂ ಕೋರ್ಟ್ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎಂ. ನಟರಾಜ್ ಅವರ ಕುರಿತು. ಹೌದು ಈಗ ಸುಪ್ರೀಂ ಕೋರ್ಟ್ಗೆ ರಜೆ ಅವಧಿ. ಬೇಸಿಗೆ ರಜೆ ಇರುವ ಕಾರಣ ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ಬಿಡುವಿದೆ. ಹೀಗಾಗಿ ನಟರಾಜ್ ಅವರು ತಮ್ಮ ಕುಟುಂಬ ಸಮೇತ ಹುಟ್ಟೂರಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಈಶ್ವರಮಂಗಲ ಗ್ರಾಮಕ್ಕೆ ತೆರಳಿ, ಹಲವು ದಿನಗಳಿಂದ ಅಲ್ಲೇ ತಂಗಿದ್ದಾರೆ. ವಿಶೇಷ ಏನೆಂದರೆ ಕೆ.ಎಂ.ನಟರಾಜ್ ಅವರು, ಟಿಲ್ಲರ್ ಹಿಡಿದು ಗದ್ದೆಯನ್ನು ನಾಟಿ ಕಾರ್ಯಕ್ಕಾಗಿ ಹಸನು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಕೆ.ಎಂ.ನಟರಾಜ್ ಅವರ ಪೂರ್ಣ ಹೆಸರು, ಕೊನೆತೋಟ ಮಹಾಬಲೇಶ್ವರ ನಟರಾಜ್. ಇವರದ್ದು ಮೂಲತಃ ಕೃಷಿ ಕುಟುಂಬ. ಈಶ್ವರಮಂಗಲದಲ್ಲಿ ಹುಟ್ಟಿ ಬೆಳೆದ ನಟರಾಜ್ ಅವರಿಗೆ ಕೃಷಿ ಕೆಲಸ ಹೊಸತೇನಲ್ಲ. ಆರಂಭದಿAದಲೂ ಅವರು ಮಣ್ಣಿನೊಂದಿಗೆ ನಂಟು ಹೊಂದಿದ್ದಾರೆ. ಗದ್ದೆಯಲ್ಲಿ ಅವರು ಟಿಲ್ಲರ್ ಅನ್ನು ಲೀಲಾಜಾಲವಾಗಿ ಓಡಾಡಿಸುವುದನ್ನು ನೋಡಿದರೆ, ಅವರು ಟಿಲ್ಲರ್‌ನೊಂದಿಗೆ ಗದ್ದೆಗೆ ಇಳಿದಿರುವುದು ಇದೇ ಮೊದಲೇನಲ್ಲ ಎಂಬುದು ಅರ್ಥವಾಗುತ್ತದೆ. ಎಂತಹ ಆಯಕಟ್ಟಿನ, ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ಮೂಲವನ್ನು ಮರೆಯಬಾರದು ಎಂಬುದನ್ನು ನಟರಾಜ್ ಅವರು ತಮ್ಮ ಈ ಕೆಲಸದ ಮೂಲಕ ತಿಳಿಸಿಕೊಟ್ಟಿದ್ದಾರೆ.
ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಪದವಿ ಪಡೆದ ಕೆ.ಎಂ.ನಟರಾಜ್ ಅವರು, 1992ರಲ್ಲಿ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರ ಮಾರ್ಗದರ್ಶನದಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ನಟರಾಜ್ ಅವರು, 2009ರಿಂದ 2013ರವರೆಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದು, 2012ರಲ್ಲಿ ಹೈಕೋರ್ಟ್ನ ಹಿರಿಯ ವಕೀಲರಾಗಿ ನಿಯುಕ್ತಿಗೊಂಡರು. ಬಳಿಕ 2016ರ ಏಪ್ರಿಲ್ 8ರಂದು ದಕ್ಷಿಣ ವಲಯದ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡು ಕಾರ್ಯನಿರ್ವಹಿಸಿದ ಅನುಭವ ಕೂಡ ಇವರಿಗಿದೆ. ಹೈಕೋರ್ಟ್ನ ಹಿರಿಯ ವಕೀಲರಾಗಿದ್ದ ಇವರನ್ನು, ಸುಪ್ರೀಂಕೋರ್ಟ್ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ನೇಮಿಸಿ ಕೇಂದ್ರ ಕಾನೂನು ಹಾಗೂ ನ್ಯಾಯಾಂಗ ಇಲಾಖೆಯು 2019ರ ಜನವರಿ 14ರಂದು ಆದೇಶ ಹೊರಡಿಸಿತ್ತು. ಈ ಮೂಲಕ ಬರೋಬ್ಬರಿ 28 ವರ್ಷಗಳ ಬಳಿಕ ಕರ್ನಾಟಕದ ಅಡ್ವೊಕೇಟ್ ಒಬ್ಬರು ಆ ಹುದ್ದೆಗೆ ಏರಿದಂತಾಗಿತ್ತು. ನಟರಾಜ್ ಅವರಿಗೂ ಮೊದಲು, 1989-90ರ ಅವಧಿಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಶ್ ಹೆಗ್ಡೆ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು.
ಭರಪೂರ ಮೆಚ್ಚುಗೆ
ಕೆ.ಎಂ.ನಟರಾಜ್ ಅವರು ಟಿಲ್ಲರ್ ಹಿಡಿದು ಗದ್ದೆ ಹಸನು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳು, ಯೂಟೂಬ್ ಹಾಗೂ ಸುದ್ದಿ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ವಿಡಿಯೋ ಅಪ್‌ಲೋಡ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಮಂದಿ ಅದನ್ನು ವೀಕ್ಷಿಸಿದ್ದು, ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಕೃಷಿ ಬಗ್ಗೆ ಹೊಂದಿರುವ ಆಸಕ್ತಿ ಹಾಗೂ ಪ್ರೀತಿಯನ್ನು ಕೊಂಡಾಡಿದ್ದಾರೆ. ‘ನಿಮ್ಮ ಸರಳತೆ ಹಾಗೂ ನೀವು ಕೃಷಿ ಮೇಲೆ ಇಟ್ಟಿರುವ ಪ್ರೀತಿ ನಿಜಕ್ಕೂ ಶ್ಲಾಘನೀಯ. ನಿಮ್ಮ ಈ ಕೆಲಸ ನಿಮ್ಮ ಸರಳತೆಯನ್ನು ತೋರಿಸುತ್ತದೆ’ ಎಂದು ಶಿವಪ್ರಾದ್ ಎಂಬವರು ಕಮೆಂಟ್ ಮಾಡಿದ್ದಾರೆ. ಇನ್ನು ‘ನಿಮ್ಮಂಥವರು ರೈತ ಮುಖಂಡರಾಗಬೇಕು ಸರ್. ಆಗ ಮಾತ್ರ ರೈತರ ಸಮಸ್ಯೆಗಳು ಸರ್ಕಾರವನ್ನು ತಲುಪುತ್ತವೆ’, ‘ನೀವು ಕರ್ನಾಟಕದವರು ಎಂಬುದೇ ನಮಗೆ ಹೆಮ್ಮೆ’, ನಿಮ್ಮ ಈ ಕೆಲಸ ಎಲ್ಲರಿಗೂ ಮಾದರಿ’, ‘ನಿಜವಾದ ಮಣ್ಣಿನ ಮಗ ನೀವೇ’ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಒಂದು ಪದವಿ ಓದು ಮುಗಿಸಿ, ಬೆಂಗಳೂರಲ್ಲಿ ಸಂಬಳ ಬರುವ ಕೆಲಸಕ್ಕೆ ಸೇರುವ ಈಗಿನ ಯುವಕರು, ತಮ್ಮ ಹುಟ್ಟೂರಿಗೆ ಬಂದರೆ ಒಂದು ಹುಲ್ಲುಕಡ್ಡಿಯನ್ನೂ ಅತ್ತಿಂದಿತ್ತ ತೆಗೆದು ಹಾಕುವುದಿಲ್ಲ. ತಾವು ಓದಿ, ಹೊರಗೆ ಹೋಗಿ ದುಡಿಯುತ್ತಿದ್ದೇವೆ ಎಂಬ ಬಿಗುಮಾನ ಇಂದು ಬಹಳಷ್ಟು ಮಂದಿಯಲ್ಲಿದೆ. ಆದರೆ ಸುಪ್ರೀಂಕೋರ್ಟ್ನ ಹೆಚ್ಚುವರಿ ಸಾಲಿಸಿಟರ್ ಜನರಲ್ ರೀತಿಯ ಮಹತ್ವದ, ಉನ್ನತ ಹುದ್ದೆಯಲ್ಲಿದ್ದರೂ ಮುಜುಗರ ಪಟ್ಟುಕೊಳ್ಳದೆ ಗದ್ದೆಗೆ ಇಳಿದು ಕೆಲಸ ಮಾಡುತ್ತಿರುವ ಕೆ.ಎಂ.ನಟರಾಜ್ ಅವರ ಕಾರ್ಯ ನಿಜಕ್ಕೂ ಮಾದರಿ ಎಂಬುದು ಹಲವರ ಅಭಿಪ್ರಾಯ.