ಮಹಿಳೆಯರ ದೈಹಿಕ ವ್ಯತ್ಯಾಸಗಳನ್ನು ಆಧರಿಸಿ ಅವರ ಘನತೆಯನ್ನು ಉಲ್ಲಂಘಿಸುವ ಸಂಪ್ರದಾಯ ಅಥವಾ ಧರ್ಮಾಚರಣೆ ಅಸಾಂವಿಧಾನಿಕ. ಮಹಿಳೆಯರು 'ದೇವರ ಮಲತಾಯಿ ಮಕ್ಕಳು' (children of lesser god) ಎಂಬಂತೆ ನಡೆಸಿಕೊಳ್ಳುವುದು ಅಸಾಂವಿಧಾನಿಕ ಎಂದು ಜಸ್ಟಿಸ್ ಚಂದ್ರಚೂಡ್ ಹೇಳಿದರು. ತೀರ್ಪಿನ ಮುಖ್ಯಾಂಶಗಳು ಇಲ್ಲಿವೆ:
ಹೊಸದಿಲ್ಲಿ: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶದ ಅವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ತೀರ್ಪನ್ನು ಓದುತ್ತ, ಭಕ್ತಿಯ ವಿಚಾರದಲ್ಲಿ ಲಿಂಗ ತಾರತಮ್ಯ ಸಲ್ಲದು ಎಂದು ಹೇಳಿದರು. ತೀರ್ಪಿನ ಮುಖ್ಯಾಂಶಗಳು ಇಲ್ಲಿವೆ:
- ಪೂಜೆಯ ಹಕ್ಕು ಎಲ್ಲ ಭಕ್ತರಿಗೂ ಇದೆ. ಅದರಲ್ಲಿ ಲಿಂಗಾಧಾರಿತ ತಾರತಮ್ಯ ಸಲ್ಲದು.
- 10ರಿಂದ 50ರ ವಯೋಮಾನದ ಮಹಿಳೆಯರಿಗೆ ದೇವಳ ಪ್ರವೇಶ ನಿಷೇಧಿಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗುತ್ತದೆ.
- 0ರಿಂದ 50ರ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ ಶಬರಿಮಲೆ ದೇವಸ್ಥಾನದ ಸಂಪ್ರದಾಯಕ್ಕೆ ಸಂವಿಧಾನದ 26ನೇ ವಿಧಿಯ ಬೆಂಬಲವಿಲ್ಲ ಎಂದು ನ್ಯಾಯಮೂರ್ತಿ ನಾರಿಮನ್ ವಾದಿಸಿದರು.
- ಭಕ್ತಿ ಮತ್ತು ಆರಾಧನೆ ಎಂಬುದು ಲಿಂಗ ತಾರತಮ್ಯಕ್ಕೆ ಒಳಪಡುವಂಥದ್ದಲ್ಲ ಎಂದು ಸಿಜೆಐ ಮಿಶ್ರಾ ಮತ್ತು ಎ.ಎಂ ಖಾನ್ವಿಲ್ಕರ್ ಹೇಳಿದರು.
- ಭಕ್ತಿಯಲ್ಲಿ ಸಮಾನತೆ ವಿಚಾರದಲ್ಲಿ ಪಿತೃಪ್ರಧಾನ ಕಲ್ಪನೆಗೆ ಜಾಗವಿಲ್ಲ.
- ಧರ್ಮ ಎಂಬುದು ದೇವತ್ವದ ಜತೆಗೆ ಬದುಕುವ ಒಂದು ಮಾರ್ಗವಾಗಿದೆ ಎಂದು ಸಿಜೆಐ ಮಿಶ್ರಾ ನುಡಿದರು.
- ದೈಹಿಕ ನಿರ್ಬಂಧಗಳ ಮೂಲಕ ಮಹಿಳಾ ಹಕ್ಕುಗಳನ್ನು ಕಸಿಯಲು ಅವಕಾಶವಿಲ್ಲ.
- ಸ್ವಾಮಿ ಅಯ್ಯಪ್ಪನ ಭಕ್ತರು ಪ್ರತ್ಯೇಕ ಗುಂಪಾಗಿ ಪರಿಗಣಿತವಾಗುವುದಿಲ್ಲ. ಅವರೆಲ್ಲರೂ ಹಿಂದೂಗಳು.
- ಶಬರಿಮಲೆ ದೇವಸ್ಥಾನದಲ್ಲಿ ಹಾಕಲಾದ ನಿರ್ಬಂಧಗಳು ಧಾರ್ಮಿಕ ಆಚರಣೆಯಲ್ಲಿ ಇರಲೇಬೇಕಾದ್ದೇನೂ ಅಲ್ಲ.
- ಮಹಿಳೆಯರ ದೈಹಿಕ ವ್ಯತ್ಯಾಸಗಳನ್ನು ಆಧರಿಸಿ ಅವರ ಘನತೆಯನ್ನು ಉಲ್ಲಂಘಿಸುವ ಸಂಪ್ರದಾಯ ಅಥವಾ ಧರ್ಮಾಚರಣೆ ಅಸಾಂವಿಧಾನಿಕ. ಮಹಿಳೆಯರು 'ದೇವರ ಮಲತಾಯಿ ಮಕ್ಕಳು' (children of lesser god) ಎಂಬಂತೆ ನಡೆಸಿಕೊಳ್ಳುವುದು ಅಸಾಂವಿಧಾನಿಕ ಎಂದು ಜಸ್ಟಿಸ್ ಚಂದ್ರಚೂಡ್ ಹೇಳಿದರು.
- ಮಹಿಳೆ ಮುಟ್ಟಾಗುತ್ತಾಳೆ ಎಂಬ ಕಾರಣಕ್ಕೆ ಹೊರಗಿಡುವುದು ಸಂಪೂರ್ಣ ಅಸಾಂವಿಧಾನಿಕ ಎಂದು ಚಂದ್ರಚೂಡ್ ನುಡಿದರು.
- ಮಹಿಳೆಯರನ್ನು ಕೀಳಾಗಿ ಕಾಣುವ ಯಾವುದೇ ಧಾರ್ಮಿಕ ಸಂಪ್ರದಾಯಗಳಿಗೆ ಕೋರ್ಟ್ ಮಾನ್ಯತೆ ನೀಡಬಾರದು ಎಂದು ಚಂದ್ರಚೂಡ್ ಪ್ರತಿಪಾದಿಸಿದರು.
- ಸಿಜೆಐ ದೀಪಕ್ ಮಿಶ್ರಾ, ಜಸ್ಟಿಸ್ ಆರ್.ಎಫ್ ನಾರಿಮನ್, ಎ.ಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಏಕರೂಪದ ತೀರ್ಪು ನೀಡಿದರೆ, ಜಸ್ಟಿಸ್ ಇಂದೂ ಮಲ್ಹೋತ್ರಾ ಅವರು ಶಬರಿಮಲೆ ವಿಚಾರದಲ್ಲಿ ಭಿನ್ನ ನಿಲುವು ತಳೆದರು.
- ಪ್ರಸ್ತುತ ತೀರ್ಪು ಶಬರಿಮಲೆಗಷ್ಟೇ ಸೀಮಿತವಲ್ಲ, ಅದಕ್ಕೂ ಮೀರಿದ ವ್ಯಾಪಕ ಪರಿಣಾಮಗಳನ್ನು ಉಂಟುಮಾಡಲಿದೆ ಎಂದು ಜಸ್ಟಿಸ್ ಇಂದೂ ಮಲ್ಹೋತ್ರಾ ನುಡಿದರು.
- ಈ ವಿವಾದ ಧಾರ್ಮಿಕತೆಯ ಆಳವನ್ನೇ ಪ್ರಶ್ನಿಸಿದೆ. ದೇಶದ ಜಾತ್ಯತೀತ ವಾತಾವರಣದ ಪಾಲನೆಗಾಗಿ ಆಳವಾಗಿ ಬೇರೂರಿದ ಧಾರ್ಮಿಕ ಆಚರಣೆಗಳನ್ನು ಹಾಳುಗೆಡವಬಾರದು ಎಂದು ಜಸ್ಟಿಸ್ ಮಲ್ಹೋತ್ರಾ ತಿಳಿಸಿದರು.
- ಕೆಲವರು ಹೇಳುವ ಪ್ರಕಾರ ಸಮಾನತೆಯ ಹಕ್ಕು ಧಾರ್ಮಿಕ ಆಚರಣೆ ಹಾಗೂ ಮೂಲಭೂತ ಹಕ್ಕಿನ ಜತೆಗೂ ಸಂಘರ್ಷಕ್ಕಿಳಿಯುತ್ತದೆ.
- ಶಬರಿಮಲೆ ದೇವಸ್ಥಾನದ ಭಕ್ತರು ಪ್ರತ್ಯೇಕ ಧಾರ್ಮಿಕ ಪಂಥ ಅನುಸರಿಸುವ ಗುಂಪಾಗಿ ಪರಿಗಣಿಸಲ್ಪಡುತ್ತಾರೆ. ಕೆಲವು ನಿರ್ದಿಷ್ಟ ವ್ರತಾಚರಣೆಗಳೊಂದಿಗೆ ಅವರು ದೇವಳ ಪ್ರವೇಶಿಸುತ್ತಾರೆ. ಎಂದು ಜಸ್ಟಿಸ್ ಮಲ್ಹೋತ್ರಾ ನುಡಿದರು.