ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.
1. ಇಂದಿನಿಂದ ಸುವರ್ಣ ಕರ್ನಾಟಕ ಸಂಭ್ರಮ!
2. ಹೃದಯಾಘಾತ ಹೆಚ್ಚಳ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ!
3. ನಗರ, ಗ್ರಾಮೀಣ ಪ್ರದೇಶದಲ್ಲಿ ಸೂರು ಇಲ್ಲದವರಿಗೆ ಸೂರು: ಸಚಿವ ಜಮೀರ್ ಅಹಮದ್
4. ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ
5. ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ: ಡಿಕೆಶಿ ಆರೋಪ
ಸುದ್ದಿಗಳ ವಿವರ ಈ ರೀತಿ ಇದೆ.
1. 68ನೇ ಕನ್ನಡ ರಾಜ್ಯೋತ್ಸವ ಪ್ರಧಾನ ಕಾರ್ಯಕ್ರಮ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನೆರವೇರಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಇನ್ನು ಸುವರ್ಣ ಕರ್ನಾಟಕ ಸಂಭ್ರಮ ಇಂದಿನಿಂದ ರಾಜ್ಯಾದ್ಯಂತ ನಡೆಯಲಿದೆ.
ಕನ್ನಡನಾಡು, ನುಡಿ, ಪರಂಪರೆ, ಸಂಸ್ಕೃತಿಯ ಹಿರಿಮೆಯನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯಲಿವೆ.
ಅಲ್ಲದೇ ಸುವರ್ಣ ಮಹೋತ್ಸವದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ
ಸಂಜೆ ಹಂಪಿಯಲ್ಲಿ ರಾಜ್ಯಾದ್ಯಂತ ಸಂಚರಿಸಲಿರುವ ಜ್ಯೋತಿ ರಥಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.
----------------
2. ದೇಶದಲ್ಲಿನ ಕೊರೊನಾ ಸೋಂಕಿನ ನಂತರದಲ್ಲಿ ಹೃದಯಾಘಾತ, ಹೃದಯಸ್ತಂಭನ ಹಾಗೂ ಹಠಾತ್ ಸಾವಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.
ಇದೀಗ ಕೇಂದ್ರ ಆರೋಗ್ಯ ಸಚಿವಾಲಯವು ಕೊರೊನಾ ಸೋಂಕಿನಿಂದ ಬಳಲಿದವರಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಕೊರೊನಾದಿಂದ
ತೀವ್ರ ಹಾಗೂ ಆರೋಗ್ಯ ಏರುಪೇರು ಎದುರಿಸಿದವರು ಕನಿಷ್ಟ ಎರಡು ವರ್ಷಗಳ ಪರಿಶ್ರಮದ ಕೆಲಸಗಳನ್ನು ಮಾಡದಂತೆ ಸಲಹೆ ನೀಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಅಧ್ಯಯ ವರದಿಯನ್ನು ಆಧಾರದ ಮೇಲೆ ಸಲಹೆ ನೀಡಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಂಡಾವೀಯ ಮಾತನಾಡಿ, ಕೊರೊನಾ ಸಾಂಕ್ರಾಮಿಕ ರೋಗದಿಂದ ಐಸಿಯುನಲ್ಲಿ
ಚಿಕಿತ್ಸೆ ಪಡೆದಿದ್ದವರೂ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿರುವವರು ಪರಿಶ್ರಮದ ಹಾಗೂ ಭಾರವನ್ನು ಹೊರುವ ಕೆಲಸವನ್ನು ಮಾಡಬಾರದು.
ದೈಹಿಕ ವ್ಯಾಯಾಮ ಹಾಗೂ ಕಠಿಣ ಕಸರತ್ತುಗಳನ್ನು ನಡೆಸುವುದನ್ನು ಮುಂದಿನ ಎರಡು ವರ್ಷ ಕಾಲ ಮಾಡಬಾರದು ಎಂದಿದ್ದಾರೆ.
----------------
3. ರಾಜ್ಯದಲ್ಲಿ ವಸತಿ ರಹಿತರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ವಸತಿ ರಹಿತರಿಗೆ ಸೂರು ಕಲ್ಪಿಸುವ ಸಂಬಂಧ ಮಾತನಾಡಿರುವ
ಸಚಿವ ಜಮೀರ್ ಅಹಮದ್ ಅವರು, ಇಲಾಖೆಯನ್ನು ಸದೃಢಗೊಳಿಸಿ, ಅರ್ಹರಿಗೆ ಸೂರು ಒದಗಿಸಲಾಗುವುದು ಎಂದಿದ್ದಾರೆ.
ಅಲ್ಲದೇ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸೂರು ಇಲ್ಲದ ಬಡವರನ್ನು ಗುರುತಿಸಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
----------------
4. ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಮಗೆ ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ಮುಖ್ಯ. ಎಂಥದ್ದೇ ಪರಿಸ್ಥಿತಿ ಬಂದರೂ ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಹಲವು ಸಂಘಟನೆಗಳ ಒಕ್ಕೂಟ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಅವರು ಭೇಟಿ ನೀಡಿದರು.
ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯವು ಈ ವರ್ಷ ಬರಗಾಲ ಎದುರಿಸುತ್ತಿದ್ದು, ಮಳೆ ಸಂಪೂರ್ಣ ಕೈಕೊಟ್ಟಿದ್ದು,
ಜಲಾಶಯಗಳಲ್ಲಿ ನೀರಿಲ್ಲದೆ ಸಂಕಷ್ಟ ಸೃಷ್ಟಿಯಾಗಿದೆ. ರೈತರ ಹಿತ ಕಾಯಲು ಗಂಭೀರ ಹಾಗೂ ಪ್ರಾಯೋಗಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
----------------
5 ಕೇಂದ್ರ ಬರ ಅಧ್ಯಯನ ತಂಡ, ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಿದೆ. ಆದರೆ, ಇದುವರೆಗೂ ಯಾವುದೇ ನೆರವು ನೀಡಿಲ್ಲ ಎಂದು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ, ಕೇಂದ್ರ ಬರ ಪರಿಸ್ಥಿತಿ ನಿಯಮಗಳ ಅನುಸಾರ ರಾಜ್ಯದಲ್ಲಿ 200ಕ್ಕೂ ಹೆಚ್ಚು
ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಿದೆ. ಕೇಂದ್ರ ಸರ್ಕಾರ ಬರ ಪರಿಹಾರ ನೀಡುವಲ್ಲಿ ಉಪಕಾರ ಮನಸ್ಥಿತಿ ಪ್ರದರ್ಶಿಸಲಿ ಎಂದು ಆಗ್ರಹಿಸಿದರು.