1.16 ಸಾವಿರ ಜನರ ಜೀವ ಉಳಿಸಿದ ವೈದ್ಯನಿಗೆ ಹೃದಯಾಘಾತ!
2. ಕೇರಳದ 20 ಲಕ್ಷ ಕುಟುಂಬಗಳಿಗೆ ಉಚಿತ ಇಂಟರ್‌ನೆಟ್ ಸೇವೆ
3. ಬಿಪೊರ್‌ಜಾಯ್ ಚಂಡಮಾರುತ; ರಾಜ್ಯದಲ್ಲಿ ಐದು ದಿನ ಭಾರೀ ಮಳೆ! 4. ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ
5. ರಾಜ್ಯದ ಏಳು ಜಿಲ್ಲೆಗಳಲ್ಲಿ ಮಳೆ: ಯೆಲ್ಲೋ ಅಲರ್ಟ್ ಘೋಷಣೆ
1. 16,000ಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಶಸ್ತ್ರಚಿಕಿತ್ಸೆ ಜೀವ ಉಳಿಸಿದ್ದ ಹೆಸರಾಂತ ಹೃದ್ರೋಗ ತಜ್ಞರಾದ ಡಾ. ಗೌರವ್ ಗಾಂಧಿ ಅವರು
ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗುಜರಾತ್ ಜಾಮ್‌ನಗರದ ಡಾ. ಗೌರವ್ ಹೆಸರಾಂತ ಹೃದ್ರೋಗ ತಜ್ಞರಾಗಿದ್ದರು.
ಸಾವಿರಾರು ಹೃದಯಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದ ಡಾ. ಗೌರವ್ ಅವರು ಹೃದಯಾಘಾತದಿಂದ ಮೃತಪಟ್ಟಿರುವುದು ವಿಪರ್ಯಾಸವೇ ಸರಿ.
------------
2. ದೇಶದಲ್ಲೇ ಮೊದಲ ಸ್ವಂತ ಇಂಟರ್‌ನೆಟ್ ಸೇವೆ ಹೊಂದಿರುವ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.
ಅಲ್ಲದೇ ಕೇರಳದಲ್ಲಿ 20 ಲಕ್ಷ ಕುಟುಂಬಗಳಿಗೆ ಉಚಿತ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಇಂಟರ್‌ನೆಟ್ ಸಹ
ಮೂಲಭೂತ ಹಕ್ಕು ಎಂದು ಘೋಷಿಸಿದ ಮೊದಲ ರಾಜ್ಯವೂ ಕೇರಳವೇ ಆಗಿದೆ. ಕೇರಳ ಸರ್ಕಾರವು kfon ಯೋಜನೆ ಅಂದರೆ,
ಕೇರಳ ಫೈಬರ್ ಆಫ್ಟಿಕಲ್ ನೆಟ್‌ವರ್ಕ್ ಯೋಜನೆಯ ಮೂಲಕ ಭಾರತದ ಮೊದಲ ಸರ್ಕಾರಿ ಸ್ವಾಮ್ಯದ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಿದೆ.
ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಮತ್ತು ಕೇರಳ ರಾಜ್ಯ ಐಟಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಈ ಯೋಜನೆಯ ಮೂಲಕ ಕೇರಳದ 75 ಲಕ್ಷ ಕುಟುಂಬಗಳಿಗೆ ಇಂಟರ್‌ನೆಟ್ ಸೇವೆ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಆರ್ಥಿಕವಾಗಿ ಹಿಂದುಳಿದಿರುವ 20 ಲಕ್ಷ ಕುಟುಂಬಗಳು ಈ ಯೋಜನೆಯ ಮೂಲಕ ಉಚಿತ ಇಂಟರ್ನೆಟ್ ಮತ್ತು ಇತರರಿಗೆ
ನಿರ್ದಿಷ್ಟ ವೆಚ್ಚದಲ್ಲಿ ಇಂಟರ್‌ನೆಟ್ ಸೇವೆ ಸಿಗಲಿದೆ. ಎಲ್ಲರಿಗೂ ಇಂಟರ್‌ನೆಟ್ ಸೇವೆ ನೀಡುವ ಉದ್ದೇಶದಿಂದ
ಅನುಷ್ಠಾನ ಮಾಡಲಾಗುತ್ತಿರುವ ಕೆಎಫ್‌ಒಎನ್ ಯೋಜನೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ
ವಿಜಯನ್ ಅವರು ಈಚೆಗೆ ಉದ್ಘಾಟಿಸಿದ್ದಾರೆ.
------------
3. ಬಿಪೊರ್‌ಜಾಯ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ
ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಕರಾವಳಿಯ ಭಾಗದಲ್ಲಿ ಬಿರುಗಾಳಿಯ
ವೇಗವು ಗಂಟೆಗೆ 40ರಿಂದ 45 ಕಿ.ಮೀ ವೇಗದಲ್ಲಿ ಇರಲಿದೆ. ಹೀಗಾಗಿ, ಮೀನುಗಾರರಿಗೆ ಸಮುದ್ರಕ್ಕೆ
ಇಳಿಯದಂತೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
------------
4. ಮುಂಗಾರು ಬಿತ್ತನೆಗೆ ಕಾಯುತ್ತಿರುವ ರೈತರಿಗೆ ಸಿಹಿಸುದ್ದಿ ಸಿಕ್ಕಿದೆ. ಗುರುವಾರ ನೈರುತು ಮುಂಗಾರು ಕೇರಳವನ್ನು ಪ್ರವೇಶಿಸಿದೆ
ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ. ಮುಂಗಾರು ಸಾಮಾನ್ಯವಾಗಿ ಜೂನ್ ಪ್ರಾರಂಭದಲ್ಲಿಯೇ
ಕೇರಳವನ್ನು ಪ್ರವೇಶಿಸಿ ನಂತರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ತೀವ್ರವಾಗುತ್ತಿತ್ತು.
ಹವಾಮಾನ ಇಲಾಖೆ ಸಹ ಜೂನ್ 4ಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಿತ್ತು.
ಆದರೆ, ಈ ಬಾರಿ ನೈರುತ್ಯ ಮುಂಗಾರು ಒಂದುವಾರ ತಡವಾಗಿದೆ. ಇನ್ನು ಕಳೆದ ಬಾರಿ ನೈರುತ್ಯ ಮುಂಗಾರು
ಮೇ29ಕ್ಕೆ ಕೇರಳವನ್ನು ಪ್ರವೇಶಿಸಿದ್ದು ವರದಿ ಆಗಿತ್ತು.
------------
5. ಕೇರಳಕ್ಕೆ ಮಾನ್ಸೂನ್ ಪ್ರವೇಶ ಹಾಗೂ ಬಿಪೊರ್‌ಜಾಯ್ ಚಂಡಮಾರುತ ಪ್ರಭಾವದಿಂದಾಗಿ ರಾಜ್ಯದ ಏಳು
ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ತುಮಕೂರು ಜಿಲ್ಲೆಗಳಲ್ಲಿ
ಶನಿವಾರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಜೂನ್ 12ರ ವರೆಗೆ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
------------