News

ಅಜ್ಜನ ಕಾಲದ ಮಳೆ ಸಿದ್ಧಾಂತ; ಮಿಂಚಪ್ಪ, ಗುಡುಗಪ್ಪ, ಸಿಡಿಲಪ್ಪ ಮಳೆರಾಯನ ಮೂವರು ಮಕ್ಕಳಂತಪ್ಪಾ..!

07 August, 2021 1:59 PM IST By:

ಮಳೆ ಎಂದರೆ ಸಂತೋಷ. ಮಳೆ ಎಂದರೆ ಸಂಭಮ್ರ. ಮಳೆ ಎಂದರೆ ಸಮೃದ್ಧಿ. ಮಳೆ ಎಂದರೆ ಭೂರಮೆಯ ಬಂಜೆತನವ ಕೊಚ್ಚಿ ತೊಲಗಿಸಿ, ಹಸಿರು ಸೀರೆಯನುಡಿಸುವ ಅಮೃತ ಸಿಂಚನ. ಮಳೆಯ ಬಗ್ಗೆ ಹೇಳುತ್ತಾ ಹೋದರೆ ವರ್ಣಿಸಲು ಪದಗಳೇ ಸಾಲುವುದಿಲ್ಲ. ಮಕ್ಕಳನ್ನು ಬಿಟ್ಟರೆ ಮಳೆಯನ್ನು ಹೆಚ್ಚು ಇಷ್ಟಪಡುವ ಜೀವವೆಂದರೆ ಅದು ನಮ್ಮ ರೈತ. ಅನ್ನದಾತ ತನ್ನ ಅನ್ನ ಹುಟ್ಟಿಸುವ ಕಾಯಕ ನಡೆಸಲು ಮಳೆರಾಯನ ಕೃಪೆ ಬೇಕೇ ಬೇಕು.

ಹೀಗಿರುವ ಮಳೆ ಬಗ್ಗೆ ಎಲ್ಲರಿಗೂ ಒಂದೇ ವಿಧವಾದ ಪರಿಕಲ್ಪನೆ ಇಲ್ಲ. ಮಳೆ ಹೇಗೆ ಬರುತ್ತದೆ ಎಂದು ಕೇಳಿದರೆ ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ರೀತಿ ಉತ್ತರಿಸುತ್ತಾರೆ. ಆ ಉತ್ತರಗಳು ಅವರವರ ಕಲ್ಪನೆಯ ಪ್ರತಿಬಿಂಬವಾಗಿರುತ್ತವೆ. ಜೊತೆಗೆ ಚಿಕ್ಕಂದಿನಲ್ಲಿ ಅಜ್ಜಿಯೋ, ಅಜ್ಜನೋ, ಅವ್ವ-ಅಮ್ಮನೋ ಹೇಳಿದ ಮಳೆಯ ಕಥೆಗಳ ಆಧಾರದಲ್ಲಿ ಮಳೆ ಹೇಗೆ ಆಗುತ್ತದೆ ಎಂದು ಕೆಲವರು ವಿವರಿಸುತ್ತಾರೆ.

ಈಗ ಹೀಗೆ ಮಳೆಯ ಬಗ್ಗೆ ಚರ್ಚಿಸಲು ಕಾರಣವೇನು ಅಂತೀರಾ..? ಮೊನ್ನೆ ಫೇಸ್ಬುಕ್ಕಿನಲ್ಲಿ ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಮಳೆಯನ್ನು ನೆನಪಿಸಿಕೊಂಡು ನಾಲ್ಕಾರು ಸಾಲುಗಳನ್ನು ಬರೆದಿದ್ದರು. ಆ ಸಾಲುಗಳು ಈ ಕೆಳಗಿನಂತಿವೆ:

‘ಮಳೆ ಬಂದಾಗ ನಾವು ನಮ್ಮ ಬಾಲ್ಯ ಕಾಲದಲ್ಲಿ, ದೇವತೆಯರು ಉಂಡು ಕೈತೊಳೆಯುತ್ತಿರುವರೆಂದು, ಜೋರು ಮಳೆ ಬಂದಾಗ ದೇವತೆಯರು ಜಳಕ ಮಾಡುತ್ತಿರುವರೆಂದು, ಮುಗಿಲಲ್ಲಿ ಮಿಂಚು ಹೊಳೆದಾಗ ದೇವತೆಯರು ಕಂಚುಮುಟ್ಟು ಹಿತ್ತಾಳೆ ಪಾತ್ರೆಗಳನ್ನು ಬೆಳಗುತ್ತಿರುವರೆಂದು, ಗುಡುಗು ಕೇಳಿಸಿದಾಗ ದೇವತೆಯರು ಪಾತ್ರೆಗಳನ್ನು ತೆಗೆದಿರಿಸುತ್ತಿದ್ದಾರೆಂದು, ಸಿಡಿಲು ಹೊಡೆದಾಗ ದೇವತೆಯರು ಕಂಚಿನ ಗಂಗಾಳವನ್ನು ಎತ್ತಿಹಾಕಿದರು ಅಥವಾ ಕೆಡವಿದರೆಂದು, ಮಳೆ ನಿಂತು ಆಕಾಶ ಬೆಳ್ಳಗಾದಾಗ ದೇವತೆಯರು ಗಂಗಾಳ ಬೆಳಗಿಟ್ಟರೆಂದು ಮಾತಾಡಿಕೊಳ್ಳುತ್ತಿದ್ದೆವು”

ಅವರು ಹೀಗೆ ಬರೆದದ್ದು ತಾವು ಚಿಕ್ಕಂದಿನಲ್ಲಿ ತಮ್ಮ ಹಿರಿಯರಿಂದ ಕೇಳಿ ಪಡೆದ ‘ಮಳೆ ಜ್ಞಾನ’ದ ಆಧಾರದಲ್ಲಿ. ಆದರೆ, ಈ ಪರಿಕಲ್ಪನೆಯೇ ಎಷ್ಟೊಂದು ಚಂದ ಅಲ್ಲವೇ. ಸಾಮಾನ್ಯವಾಗಿ ನಾವೆಲ್ಲರೂ ನಂಬಿರುವAತೆ ದೇವಾನು ದೇವತೆಗಳೆಲ್ಲರೂ ಆಕಾಶದಾಚೆ ಎಲ್ಲೋ ಇರುವ, ಕಣ್ಣಿಗೆ ಕಾಣದ ಮತ್ತೊಂದು ಲೋಕದಲ್ಲಿ ವಾಸವಿದ್ದಾರೆ. ಮಳೆ ಹನಿಗಳು ಆಕಾಶದಿಂದಲೇ ಧರಗಿಳಿಯುವುದರಿಂದ ಇದು ಆ ದೇವತೆಗಳದ್ದೇ ಏನೋ ಕಿತಾಪತಿ ಇರಬೇಕು ಅಂದುಕೊಳ್ಳುವುದು ಸಹಜ. ಆದರೆ, ಅವರು ಉಂಡು ಕೈ ತೊಳೆದ, ಜಳಕಮಾಡಿದ ನೀರೇ ಮಳೆಯಾಗಿ ಸುರಿಯುತ್ತಿದೆ, ಕಂಚು-ಹಿತ್ತಾಳೆ ಪಾತ್ರೆ ಬೆಳಗುವಾಗ ಅದರ ಹೊಳಪು ಭೂಮಿಗೆ ಮಿಂಚಾಗಿ ಬಂದಪ್ಪಳಿಸುತ್ತದೆ, ಪಾತ್ರೆಗಳನ್ನು ಎತ್ತಿಡುವಾಗ ಆಗುವ ಸದ್ದೇ ನಮಗೆ  ಕೇಳಿಸುವ ದಢಲ್ ಬಢಲ್ ಗುಡುಗು ಎನ್ನುವ ನಮ್ಮ ಹಿರಿಯರ ಕಲ್ಪನೆಯಂತೂ ಅತ್ಯದ್ಭುತ.

ಗುಡ್ಗಜ್ಜಿ ಕತೆ

ಇನ್ನು ಡಾ.ನಾಗರಾಜಯ್ಯ ಅವರ ಪೋಸ್ಟಿಗೆ ಪ್ರತಿಕ್ರಿಯೆಯಾಗಿ ಕಾಂತರಾಜು ಗುಪ್ಪಟ್ಣ ಎಂಬುವರು ‘ಗುಡ್ಗಜ್ಜಿ ಕತೆ’ ಹೇಳುತ್ತಾರೆ. ಈ ಕಥೆ ಮೂರು ರೀತಿಯ ಕಲ್ಪನೆಗಳ ಮುಲಕ ಹುಟ್ಟಿದೆ. ಅದರಲ್ಲಿ ಮೊದಲನೆಯ ಕಲ್ಪನೆ ಹೀಗಿದೆ;

ಕಲ್ಪನೆ-1

20-30 ವರ್ಷಗಳ ಹಿಂದೆ ಮಳೆ ಬರುತ್ತಿರುವಾಗ...

ಮಗು: ಅಜ್ಜಿ ಗುಡ್ಗು-ಸಿಡ್ಲು-ಮಿಂಚುಯಾಕೆ ಬತ್ತತೆ?

ಅಜ್ಜಿ: ‘ಮಳೆ ಉಯ್ವಾಗ ಪಾಂಡವರ ಭೀಮ ಗದೆಯಿಂದ ಕುಟ್ದಾಗ ಮತ್ತೆ ಅರ್ಜುನ ಬಿಲ್ಲಿನಿಂದ ಬಾಣ ಬಿಟ್ಟಾಗ ಹಿಂಗೆ ಗುಡ್ಗು-ಸಿಡ್ಲು-ಮಿಂಚು ಬತ್ತತೆ’

ಕಲ್ಪನೆ-2

ಮಗು: ನಿಜನಾ ಅಜ್ಜಿ.

ಅಜ್ಜಿ: ‘ಹೂಂ ಪುಟ್ಟ, ಇನ್ನೊಂದ್ ತರಾನು ಹೇಳ್ತಾರೆ; ಮಳೆರಾಯಂಗೆ ಮೂರ್ಜನ ಮಕ್ಳು. ಮೊದಲನೇವ್ನು ಮಿಂಚಪ್ಪ, ಎರಡ್ನೇವ್ನು ಗುಡ್ಗಪ್ಪ, ಮೂರ್ನೇವ್ನು ಸಿಡ್ಲಪ್ಪ ಅಂತ. ಈ ಮೂವರು ಮಳೆರಾಯನ ತ್ರಿವಳಿ ಮಕ್ಕಳು. ಮಳೆರಾಯ ಭೂಮಿಗೆ ಬರುವಾಗ ಮಕ್ಕಳು ಜೊತೆ ಬರ್ತಾರೆ’

ಕಲ್ಪನೆ-3

ಇತ್ತೀಚಿನ 4ಜಿ ಯುಗದಲ್ಲಿ ಪುಟ್ಟ ಮಗುವೊಂದು ಮಳೆ ಬರುತ್ತಿರುವಾಗ;

ಮಗು:- ಮಮ್ಮಿ ಮಳೆ ಬರೋವಾಗ ಯಾಕೀತರ ಡಂಡA ಅಂತ ಸೌಂಡ್ ಬರುತ್ತೆ? ಅದ್ಯಾಕೆ ಒಂದೊAದ್ ಸಾರಿ ಬೆಳಕ್ ಬರ್ತಿದೆ?

ಅಮ್ಮ: ‘ಅದಾ.... ಮೇಲೆ ಆಕಾಶದಲ್ಲಿ ಮಳೆರಾಯ ಡಿಜಿಟಲ್ ವೀಡಿಯೊ ಅಂಡ್ ಸ್ಟುಡಿಯೋ ಅಂತ ಇದೆ. ಅದರ ಓನರ್ ದೇವೇಂದ್ರ. ಅವನು ಆಗ್ಗಾಗ್ಗೆ ಈ ಭೂಮಿಯ ಕಲರ್ ಕಲರ್ ಪೋಟೋ ತೆಗಿತನೆ. ಅವನು ತನ್ನ ಕೆಲಸಕ್ಕೆ ಕ್ಯಾಮರಾಮೆನ್ ಆಗಿ ಮಿಸ್ಪರ್ ಮಿಂಚುವನ್ನು ಇಟ್ಟುಕೊಂಡಿದ್ದಾನೆ. ಇವನು ಡಿಫರೆಂಟ್ ಡಿಫರೆಂಟ್ ಆಗಿ ಭೂಮಿಯ ಪೋಟೋ ತಗಿತಾನೆ. ಹಾಗೂ ಈ ಕ್ಯಾಮರಾಮೆನ್ನಿಗೆ ಅಸಿಸ್ಟಂಟ್ಸ್ ಆಗಿ ಗುಡುಗು ಮತ್ತು ಸಿಡಿಲು ಕೆಲಸ ಮಾಡ್ತ್ತಾರೆ’ ಚಿಂಟು.

ಮಗು:- ಅದು ಸರಿ ಮಮ್ಮಿ ಈ ಅಸಿಸ್ಟಂಟುಗಳು ಯಾಕೆ ಈ ತರ ಸೌಂಡ್ ಮಾಡಿ ನಮ್ಮುನೆಲ್ಲಾ ಹೆದರಿಸಬೇಕು.

ಅಮ್ಮ : ಮಿಸ್ ವಸುಂಧರೆ ಇದ್ದಾಳಲ್ಲಾ... ಸಾರಿ ಕಂದಾ... ವಸುಂಧರೆ ಅಂದ್ರೆ ಭೂಮಿಯ ಇನ್ನೊಂದು ಹೆಸರು. ಈ ಭೂಮಿ ಪೋಟೋ ತೆಗಿಸಿಕೊಳ್ಳುವಾಗ ಒಂದಾದ ಮೇಲೆ ಒಂದು ಪೋಸ್ ಕೊಡಲ್ಲ, ಆಗ ಜೂನಿಯರ್ ಗುಡುಗು ದಢದಢ... ಗುಡಗುಡ ಅಂತ ಅವಳನ್ನ ಎಚ್ಚರ ಮಾಡ್ತಾನೆ. ಅವಳು ಅಂಗೂ ಮೈಮರೆತು ಹೋಗಿದ್ರೆ ಸೀನಿಯರ್ ಸಿಡಿಲು, ದಢಾರ್. ದಢೀರ್ ಅಂತಾನೆ. ಹೀಗೆ ಪೋಸ್ ಚೇಂಜ್ ಆದಾಂಗೆಲ್ಲಾ ಮಿಸ್ಟರ್ ಮಿಂಚು ಪೋಟೋ ತೆಗಿತಾರೆ. ಮಳೆರಾಯ ಅವುಗಳನ್ನಾ ತೊಳೆದು ಪ್ರಿಂಟ್ ಹಾಕ್ತಾನೆ.

ಇದು ಮಳೆಯ ಬಗ್ಗೆ ಇರುವ ಮಗದೊಂದು ಕಲ್ಪನೆ. ಮಕ್ಕಳ ತಲೆಯಲ್ಲೋ ಸಾವಿರಾರು ಪ್ರಶ್ನೆಗಳು, ಆ ಪ್ರಶ್ನೆಗಳನ್ನು ಕೇಳಿಸಿಕೊಳ್ಳಲು ಮತ್ತು ಅವುಗಳಿಗೆ ಉತ್ತರಿಸಲು ಸಿಗುವುದು ಅವಳೆಬ್ಬಳೇ ಅಮ್ಮ... ಆ ಅಮ್ಮನ ಉತ್ತರಗಳಂತೂ ಸೃಷ್ಟಿಯೇ ಒಮ್ಮೆ ಮುಟ್ಟಿ ನೋಡಿಕೊಳ್ಳುವಷ್ಟು, ವಿಜ್ಞಾನ ಲೋಕವೇ ಬೆರಗಾಗುವಷ್ಟು ಅದ್ಭುತವಾಗಿರುತ್ತವೆ. ಅದರಲ್ಲೂ ಮಳೆಯನ್ನು ಆಧುನಿಕ ಯುಗದ ತಂತ್ರಜ್ಞಾನಕ್ಕೆ ಹೋಲಿಕೆ ಮಾಡಿ ಹೇಳುವ ಅಮ್ಮಂದಿರ ಚಾಕಚಕ್ಯತೆಗೆ ಸಾಷ್ಟಾಂಗ ನಮಸ್ಕಾರ ಹಾಕಲೇಬೇಕು.

ಗುಳ್ಳೆ ನರಿ ಮದುವೆ

ಇನ್ನು ಬಿಸಿಲು-ಮಳೆ ಒಟ್ಟೊಟ್ಟಿಗೆ ಬಂದರೆ ಗುಳ್ಳೆ ನರಿ ಮದುವೆ ಅನ್ನುತ್ತಿದ್ದರು. ಇನ್ನೂ ಕೆಲವರು ಕರಡಿಗೂ-ನರಿಗೂ, ಕಾಗೆಗೂ-ನರಿಗೂ ಮದುವೆ ಆಗ್ತಿದೆ ಅನ್ನೋರು. ಮಿಂಚು ಬಂದರೆ ಶಿವ ಅಥವಾ ಕೃಷ್ಣನ ಚಾವಟಿ ಬೀಸಿದ ಬೆಳಕು ಎಂದೂ, ಗುಡುಗಿದರೆ ಅವರ ರಥದ ಗಾಲಿಯ ಸದ್ದೆಂದೂ ಹೇಳುತ್ತಿದ್ದ ನೆನಪು. ಹಾಗೇ ಹೆಚ್ಚು ಹೊತ್ತು ಗುಡುಗುತ್ತಿದ್ದರೆ, ಆಗ ಪರಮೇಶ್ವರ ತನ್ನ ರಥವೇರಿ ಹೊರಟಿದ್ದಾನೆ ಎಂದು ಹೇಳಲಾಗುತ್ತಿತ್ತು.

ಹೀಗೆ ಮಳೆಯ ಕುರಿತು ತಾವೆಲ್ಲಾ ಬಾಲ್ಯದಲ್ಲಿ ಕೇಳಿದ ಜನಪದರ ‘ಕಾಲ್ಪನಿಕ ವಿಜ್ಞಾನದ ಸಿದ್ಧಾಂತ’ಗಳನ್ನು ನೂರಾರು ಮಂದಿ ಹಂಚಿಕೊAಡು, ಮಳೆಯ ಚರ್ಚೆಯೂ ಕಾವೇರುವಂತೆ ಮಡಿದರು. ಈ ನಡುವೆ ಮಳೆ ಕುರಿತು ಹತ್ತಾರು ಗಾದೆಗಳೂ ನುಸುಳಿ, ನೆನೆದು ಹೋದದ್ದೂ ಆಯಯಿತು. ಒಟ್ಟಾರೆ ಮಳೆಯ ಮಾತಿನ ಜೊತೆಗೆ ನೆನಪುಗಳ ಸಿಂಚನಕ್ಕೂ ಡಾ.ವಡ್ಡಗೆರೆ ನಾಗರಾಜಯ್ಯ ಅವರ ಆ ಒಂದು ಪೋಸ್ಟ್ ಕಾರಣವಾಯ್ತು.