News

900 ಭ್ರೂಣ ಹತ್ಯೆ ಕೇಸ್‌; ಪ್ರಕರಣ CIDಗೆ ವಹಿಸಿದ ಸರ್ಕಾರ

01 December, 2023 3:35 PM IST By: KJ Staff

ಭ್ರೂಣ ಹತ್ಯೆ ಸದ್ಯ ರಾಜ್ಯದಲ್ಲಿ ಸದ್ದು ಗದ್ದಲವನ್ನ ಮಾಡುತ್ತಿರುವ ವಿಷಯ..ಸಕ್ಕರೆ ನಾಡು ಮಂಡ್ಯದ ಅಲೆ ಮನೆಯೊಂದರಲ್ಲಿ ಪಾಪಿಗಳು ಹೆಣ್ಣು ಜೀವಗಳು ಕಣ್ಣು ಬಿಟ್ಟು ದೀರ್ಘ ಉಸಿರೆಳೆಯುವ ಮುನ್ನವೇ ಅವುಗಳ ಉಸಿರನ್ನು ನಿಲ್ಲಿಸುವ ಅಮಾನವೀಯ ದಂಧೆಯೊಂದು ಬೆಳಕಿಗೆ ಬಂದಿದ್ದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

ಇಡೀ ರಾಜ್ಯವನ್ನ ತಲ್ಲಣಗೊಳಿಸಿದ ಭ್ರೂಣ ಹತ್ಯೆ ಪ್ರಕರಣದಿಂದ ದಿನದಿಂದ ದಿನಕ್ಕೆ ಸಾಕಷ್ಟು ಮಹತ್ವದ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಮೈಸೂರು ಹಾಗೂ ಮಂಡ್ಯ ಭಾಗದಲ್ಲಿ ಭ್ರೂಣ ಹತ್ಯೆ ಜಾಲದ ಕುರಿತಂತೆ ಇದೀಗ ಮತ್ತಷ್ಟು ಸಂಗತಿಗಳು ಹೊರಗಡೆ ಬರುತ್ತಿದ್ದು, ಜೀವ ಉಳಿಸಬೇಕಾದ ವೈದ್ಯರೇ ಜೀವ ತೆಗೆಯುವ ಈ ದಂಧೆಯಲ್ಲಿ ತೊಡಗಿಕೊಂಡಿದ್ದು ಇಡೀ ಸಮಾಜವೇ ತಲೆ ತಗ್ಗಿಸುವ ಘಟನೆ.

ಏನಿದು ಪ್ರಕರಣ?

ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿ ಆಲೆಮನೆಯೊಂದರಲ್ಲಿ ಲಿಂಗ ಪತ್ತೆ ಮಾಡಲಾಗುತ್ತಿದೆ ಎಂದು ತಿಳಿದ ಬೆಂಗಳೂರು ನಗರದ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ತಪಾಸಣೆಗೆಂದು ಅಲ್ಲಿಗೆ ತೆರಳಿದಾಗ, ಅಲ್ಲಿ ಹೆಣ್ಣು ಭ್ರೂಣ ಹತ್ಯೆ ಕೂಡ ಮಾಡಲಾಗುತ್ತಿತ್ತು ಎಂಬ ಅಸಲಿ ವಿಚಾರ ಬಯಲಿಗೆ ಬಂದಿದೆ. ಹೆಣ್ಣು ಶಿಶು ಬೇಡವಾದ ದುರುಳುರು ಆಲೆಮನೆ ದಂಧೆಯ ಮಧ್ಯವರ್ತಿಗಳನ್ನು ಸಂಪರ್ಕಿಸಿ ಇಲ್ಲಿಗೆ ಬಂದು ಭ್ರೂಣ ಲಿಂಗ ಸ್ಕ್ಯಾನಿಂಗ್‌ ಮಾಡಿಸುತ್ತಿದ್ದರು. ಈ ಸ್ಕ್ಯಾನಿಂಗ್‌ ವೇಳೆ ಗರ್ಭದಲ್ಲಿಯ ಶಿಶು ಹೆಣ್ಣು ಎಂಬುದು ಗೊತ್ತಾದ ತಕ್ಷಣವೇ ಆ ಹೆಣ್ಣು ಶಿಶುವಿನ ಉಸಿರು ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದರು ಈ ರಾಕ್ಷಸರು.

ಆಲೆಮನೆಯಲ್ಲಿ ಕಮರುತ್ತಿದ್ದ ಕರುಳಬಳ್ಳಿಗಳು!

ಇನ್ನು ಈ ಕರಾಳ ದಂಧೆಗೆ ಅಡ್ಡೆಯಾಗಿದ್ದೇ ಸಕ್ಕರೆ ನಾಡು ಮಂಡ್ಯ ಜಿಲ್ಲೆ. ಸುತ್ತಮುತ್ತಲಿನವರಿಗೆ ಯಾರೂ ಗೊತ್ತಾಗದಂತೆ ಹಾಗೂ ಯಾವುದೇ ಸಂಶಯ ಬಾರದಂತೆ ಪ್ಲಾನ್‌ ರೂಪಿಸಿದ್ದ ಆರೋಪಿಗಳು ಈ ಸಮಾಜಘಾತುಕ ಕೆಲಸಕ್ಕೆ ಆಲೆಮನೆಯನ್ನ ಬಳಿಸಿದ್ದಾರೆ. ಸಾಮಾನ್ಯವಾಗಿ ಸಕ್ಕರೆ ನಾಡು ಮಂಡ್ಯದಲ್ಲಿ ಜಮೀನಿನಲ್ಲಿ ಆಲೆಮನೆಗಳಿರುವುದು ಸಾಮಾನ್ಯ. ಇದನ್ನೆ ಎನ್‌ಕ್ಯಾಶ್‌ ಮಾಡಿಕೊಂಡ ರಾಕ್ಷಸರು ಸುತ್ತಲೂ ಕಬ್ಬಿನ ಗದ್ದೆಯಿಂದ ಕೂಡಿರುವ ಜಮೀನಿನಲ್ಲಿ ಶೆಡ್‌ ನಿರ್ಮಿಸಿ ಜಮೀನು ಮಧ್ಯೆದಲ್ಲಿ ಆಲೆಮನೆಯ ಹೆಸರಲ್ಲಿ 2 ವರ್ಷಗಳಿಂದ ಭ್ರೂಣ ಲಿಂಗ ಪತ್ತೆ ದಂಧೆ ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದಾರೆ ಎಂದು ಇದೀಗ ತಿಳಿದು ಬಂದಿದೆ.

ಆಲೆಮನೆಯಲ್ಲಿಯೇ ಎರಡು ವರ್ಷಗಳಲ್ಲಿ 900 ಭ್ರೂಣ ಲಿಂಗವನ್ನ ಪತ್ತೆ ಮಾಡಿ, ಕರಳುಬಳ್ಳಿಗಳನ್ನ ಕಮರಿಸಲು ಖಾಸಗಿ ಆಸ್ಪತ್ರೆಯೊಂದಕ್ಕೆ ಕಳುಹಿಸಿಕೊಡುತ್ತಿದ್ದರು ಎಂದು ಹೇಳಲಾಗಿದೆ. ಪ್ರತಿ ಭ್ರೂಣ ಪತ್ತೆಗೆ 20ರಿಂದ 30,000 ರೂ ಪಡೆಯುತ್ತಿದ್ದ ಆರೋಪಿಗಳು ಹತ್ಯೆಗೆ ಮತ್ತೆ  ಎಕ್ಸ್ಟ್ರಾ ಎಂದು 30,000 ರೂ. ಸೇರಿದಂತೆ ಒಟ್ಟು 60,000 ರೂ. ಪ್ಯಾಕೇಜ್ ರೀತಿಯಲ್ಲಿ ದಂಧೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 242 ಭ್ರೂಣ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ದಿನ ಕಳೆದಂತೆ ಬೆಚ್ಚಿ ಬೀಳಿಸುವ ಮಾಹಿತಿಗಳು ರಾಕ್ಷಸರಿಂದ ಹೊರ ಬರುತ್ತಿವೆ. ಇತ್ತ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಪ್ರಕರಣವನ್ನು CID ತನಿಖೆಗೆ ವಹಿಸಲು ಸೂಚಿಸಿದೆ.

ದೇಶದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ನಿಷೇಧ ನಿಯಮ ಜಾರಿಯಲ್ಲಿದ್ದರೂ ಸಹಿತ ನೂರಾರು ಹೆಣ್ಣು ಭ್ರೂಣಗಳು ಮಾನವನ ದರಿದ್ರ ಆಸೆಯಿಂದ ಭೂಮಿಗೆ ಕಾಲಿಡುವ ಮುನ್ನವೆ ಮಣ್ಣಾಗಿವೆ. ಹಣದ ಆಸೆಗಾಗಿ ದಂಧೆಗಿಳಿದ ಪಾಪಿಗಳು ಕಸ್ಟಡಿ ಸೇರಿದ್ದಾರೆ ಇನ್ನು ಈ ಜಾಲ ಎಲ್ಲೆಲ್ಲಿ ವ್ಯಾಪಿಸಿದೆ ಎಂಬುದು ಇನ್ನೇನು ತಿಳಿಯಬೇಕಿದೆ.