News

ಕೈಗಾರಿಕಾ ಕ್ಷೇತ್ರದಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಪ್ರಾಶಸ್ತ್ಯ : ಸಿಎಂ ಬೊಮ್ಮಾಯಿ

07 January, 2023 4:29 PM IST By: Kalmesh T
ಕೈಗಾರಿಕಾ ಕ್ಷೇತ್ರದಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಪ್ರಾಶಸ್ತ್ಯ : ಸಿಎಂ ಬೊಮ್ಮಾಯಿ

1-

ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನಿನ ಸ್ವರೂಪ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಕೈಗಾರಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಪ್ರಾಶಸ್ತ್ಯ ನೀಡಲಾಗುವುದು‌. ಗಡಿ ಭಾಗದ ಹಾಗೂ ಗಡಿ ಆಚೆಗಿನ ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಗಡಿ ಅಭಿವೃದ್ಧಿಗೆ ವಿಶೇಷ ಅನುದಾನ  ಒದಗಿಸಲಾಗುವುದು ಎಂದು ಅವರು ಹೇಳಿದರು.

86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡಿಗರ ಬದುಕು ಪುರಾತನ, ಪ್ರಾಚೀನ, ಶ್ರೇಷ್ಠವಾದದ್ದು. ಇಡೀ ಜಗತ್ತಿನಲ್ಲಿ ಕನ್ನಡದ ಸಂಸ್ಕೃತಿ ಅತ್ಯಂತ ಶ್ರೇಷ್ಠ ಚರಿತ್ರೆ ಇರುವಂಥದ್ದು. ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದಿದ್ದು, ಇದನ್ನು ಗುರುತಿಸಿ ಬೆಳೆಸಿಕೊಂಡು ಹೋಗಬೇಕಾದ್ದು ಈ ಸಮ್ಮೇಳನಗಳ ಉದ್ದೇಶ.

ಕನ್ನಡದ ಕಿಚ್ಚನ್ನು ಮತ್ತೊಮ್ಮೆ ಹಚ್ಚಿ, ಕನ್ನಡ ಕಂಪನ್ನು ಎಲ್ಲೆಡೆ ಪಸರಿಸಬೇಕು. ಕನ್ನಡವನ್ನು ಆಳವಾಗಿ  ಭಾರತದಲ್ಲಿ ಬಿತ್ತಬೇಕು. ಅದು ಬೆಳೆದು ಹೆಮ್ಮರವಾಗಿ ಬೆಳೆಯಬೇಕು. ಈ ಉದ್ದೇಶಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದರು.

ಕೈಗಾರಿಕೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವ ಸಲುವಾಗಿ ನೂತನ ಉದ್ಯೋಗ ನೀತಿಯನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ. ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.

ಶೇ.80 ರಷ್ಟು ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆಂಬುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಕನ್ನಡ ನಾಡಿನ ಸಮಗ್ರ ಅಭಿವೃದ್ಧಿ ಜೊತೆಗೆ ಗಡಿನಾಡಿನ ಅಭಿವೃದ್ಧಿ ಹಾಗೂ ಸಂರಕ್ಷಣೆಗೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಂತಾದವರು ಉಪಸ್ಥಿತರಿದ್ದರು.

2-

ಇಂದಿನಿಂದ ಬೀದರ್‌ ಉತ್ಸವಕ್ಕೆ ಚಾಲನೆ ಸಿಗಲಿದೆ. ಕಳೆದ 9 ವರ್ಷಗಳಿಂದ ಈ ಉತ್ಸವಕ್ಕಾಗಿ ಜನ ಕಾಯುತ್ತಿದ್ದರು. ಉತ್ಸವವು ಜನವರಿ 7, 8 ಮತ್ತು 9ರಂದು ಮೂರು ದಿನಗಳ ಕಾಲ ನಡೆಯಲಿದೆ. ಜನವರಿ 7ರಂದು ಸಂಜೆ 5.30ರಿಂದ ಬೀದರ್‌ ಕೋಟೆಯ ಆವರಣದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ.

ಸುಮಾರು 20 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಉತ್ಸವದಲ್ಲಿ ರೈತ ಉತ್ಸವ, ಗಾಳಿಪಟ ಉತ್ಸವ, ಸ್ಥಳೀಯ ಸಂಗೀತ ನೃತ್ಯೋತ್ಸವ, ಉದ್ಯೋಗ ಮೇಳ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಉತ್ಸವದ ಮುಖ್ಯ ವೇದಿಕೆಯಲ್ಲಿ ಸ್ಥಳೀಯ ಕಲಾವಿದರ ಪ್ರದರ್ಶನ ಸಂಜೆ 5.30ರಿಂದ 7.15ರ ವರೆಗೆ ನಡೆಯಲಿವೆ. ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಬೀದರ್‌ನಲ್ಲಿ ಸಾರ್ವಜನಿಕರು ಉತ್ಸವಕ್ಕೆ ಬಂದು ಹೋಗಲು ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ.

ಉತ್ಸವಕ್ಕೆ ಬಂದು ಹೋಗುವ ಸಾರ್ವಜನಿಕರಿಗೆ 45 ರುಪಾಯಿಯಲ್ಲಿ ಊಟ ನೀಡಲು ಹೋಟೆಲ್‌ ಮಾಲೀಕರು ಒಪ್ಪಿಕೊಂಡಿರುತ್ತಾರೆ. ಬೀದರ್‌ ಉತ್ಸವವು ಜನರ ಉತ್ಸವವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಕರೆ ನೀಡಿದ್ದಾರೆ.

3-

ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್‌ ಮತ್ತು ಹಣ್ಣು ನೀಡಲು ಪಶ್ವಿಮ ಬಂಗಾಳದ ಸರ್ಕಾರ ಮುಂದಾಗಿದೆ. ಇದೇ ತಿಂಗಳ 23 ರಿಂದ ಮುಂದಿನ ನಾಲ್ಕು ತಿಂಗಳವರೆಗೂ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ಮತ್ತು ಹಣ್ಣಗಳನ್ನು ಪೂರೈಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

ಇದಕ್ಕಾಗಿ ಸರ್ಕಾರ 371 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿದೆ. ಪ್ರಧಾನ ಮಂತ್ರಿ ಪೋಷಣ್ ಅಭಿಯಾನದಡಿ ಮುಂದಿನ ನಾಲ್ಕು ತಿಂಗಳ ಕಾಲ ವಾರದಲ್ಲಿ ಒಂದು ದಿನದಂತೆ  ಹೆಚ್ಚುವರಿ ಪೌಷ್ಠಿಕಯುಕ್ತ ಆಹಾರವಾಗಿ ಚಿಕನ್ ಮತ್ತು ಆಯಾ ಋತುವಿನ ಹಣ್ಣುಗಳನ್ನು ಪೂರೈಸಲು ನಿರ್ಧರಿಸಲಾಗಿದೆ.

ಅಲ್ಲದೇ ಈ ಕುರಿತು ಅಧಿಕೃತ ನೋಟಿಫಿಕೇಷನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹೊಸ ಯೋಜನೆಯಲ್ಲಿ ಹೆಚ್ಚುವರಿ ಪೌಷ್ಠಿಕಾಂಶಯುಕ್ತ ಆಹಾರ ಪೂರೈಕೆಗೆ ಪ್ರತಿ ವಿದ್ಯಾರ್ಥಿಗಳಿಗೆ ವಾರಕ್ಕೆ 20 ರೂಪಾಯಿ ವೆಚ್ಚವಾಗಲಿದೆ. ಈ ಪ್ರಕ್ರಿಯೆ 16 ವಾರಗಳ ಕಾಲ ಮುಂದುವರಿಯಲಿದೆ ಎಂದು ಹೇಳಲಾಗಿದೆ.

4-

ವೈರಲ್‌ ಆಯ್ತು 36 ವರ್ಷ ಹಳೆಯ ಗೋಧಿ ಬಿಲ್‌! 1987 ರಲ್ಲಿ ಒಂದು ಕೆಜಿ ಗೋಧಿಯ ಬೆಲೆ ಎಷ್ಟಿತ್ತು ಗೊತ್ತಾ..?

ಹೌದು, 1980 ರಲ್ಲಿ ಒಂದು ಕೆಜಿ ಗೋಧಿಗೆ ನೀಡಲಾಗಿದ್ದ ಹಳೆ ಬಿಲ್‌ ವೈರಲ್‌ ಆಗಿದ್ದು ಇದೀಗ ಇಂಟರ್‌ನೆಟ್‌ ನಲ್ಲಿ ಸದ್ದು ಮಾಡುತ್ತಿದೆ. 1980 ರ ದಶಕದಲ್ಲಿ ಗೋಧಿಯ ಬೆಲೆ ಎಷ್ಟಿತ್ತೆಂದು ನೀವು ಊಹಿಸಬಲ್ಲಿರಾ?

ಇಲ್ಲಿದೆ ವೈರಲ್‌ ಆದ ಗೋಧಿಯ ಹಳೆ ಬಿಲ್‌. ಹೌದು, ನಿಖರವಾಗಿ ಹೇಳಬೇಕೆಂದರೆ 1987 ರ ಬಿಲ್ ಸಾಮಾಜಿಕ ಮಾಧ್ಯಮದಲ್ಲಿ ಫುಲ್‌ ವೈರಲ್‌ ಆಗಿದೆ. 

ಆ ಸಮಯದಲ್ಲಿ ಕೆಜಿ ಗೋಧಿಗೆ ಎಷ್ಟು ಬೆಲೆ ಇತ್ತು ಎಂಬುದು ಈ ಪೋಟೋದ ವಿಶೇಷತೆಯಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರನ್ನು ಅಚ್ಚರಿಗೊಳಪಡಿಸಿದೆ. 36 ವರ್ಷಗಳ ಹಿಂದೆ ಗೋಧಿ ಬೆಲೆಯನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

IFS ಅಧಿಕಾರಿ ಪರ್ವೀನ್ ಕಸ್ವಾನ್ ಅವರು 1987 ರ ಬಿಲ್‌ನ ಚಿತ್ರವನ್ನು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ 36 ವರ್ಷಗಳಷ್ಟು ಅಂದರೆ 1987ರ  ಬಿಲ್‌ ಇದ್ದು ಅದರಲ್ಲಿ ಒಂದು ಕೆಜಿ ಗೋಧಿಯ ಬೆಲೆ ಕೇವಲ 1 ರೂಪಾಯಿ 6 ಪೈಸೆ ಇದೆ.

ಭಾರತೀಯ ಆಹಾರ ನಿಗಮಕ್ಕೆ ಮಾರಾಟವಾದ ಉತ್ಪನ್ನಗಳ ಬಿಲ್ ಇದಾಗಿದ್ದು, "ಜೆ ಫಾರ್ಮ್"ನ್ನು IFS ಅಧಿಕಾರಿಯು ತನ್ನ ಅಜ್ಜನೊಂದಿಗೆ ಹಂಚಿಕೊಂಡಿದ್ದಾರೆ. ಧಾನ್ಯ ಮಾರುಕಟ್ಟೆಯಲ್ಲಿ ರೈತರ ಕೃಷಿ ಸರಕುಗಳ ಮಾರಾಟ ರಸೀದಿ ಜೆ ರೂಪದಲ್ಲಿರುತ್ತದೆ.

"ಈ ಹಿಂದೆ ಗೋಧಿ ಕೆಜಿಗೆ 1 ರೂಪಾಯಿ 6 ಪೈಸೆ ಇತ್ತು. ನನ್ನ ಅಜ್ಜ 1987 ರಲ್ಲಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮಾರಾಟ ಮಾಡಿದ ಗೋಧಿಯ ಬೆಳೆ ಬಿಲ್‌ ಇದು. "ನನ್ನ ಅಜ್ಜ ಎಲ್ಲಾ ದಾಖಲೆಗಳನ್ನು ಜಾಣತನದಿಂದ ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿದ್ದರು ಎಂದು ಅವರು ತಮ್ಮ  ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

5-

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಶಾವತಿಯಲ್ಲಿ ಪರಿಶಿಷ್ಟ ಪಂಗಡದ ಮೀನುಗಾರರ ಸಹಕಾರ ಸಂಘ ಮತ್ತು ಮತ್ಸ್ಯ ತುಂಗಾ ಮೀನುಗಾರಿಕೆ ರೈತ ಉತ್ಪಾದಕ ಸಂಸ್ಥೆಯ ಕಛೇರಿಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು ಹಾಗೂ ವರಾಹಿ ಜಲಾಶಯಕ್ಕೆ ಬಲಿತ ಮೀನು ಮರಿಗಳನ್ನು ಬಿತ್ತನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೀನುಗಾರಿಕೆಗೆ ಜಂಟಿ ನಿರ್ದೇಶಕ ಉಮೇಶ್ .ಜೆ, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಸಹನಾ,  ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

6-

ರೈತರ ಸಮಸ್ಯೆಯನ್ನು ಬಗೆಹರಿಸಲು ಕಿಸಾನ್‌ ಕಾಲ್‌ ಸೆಂಟರ ಮೂಲಕ ಕೇಂದ್ರ ಸರಕಾರ ಶ್ರಮಿಸುತ್ತಿದೆ. ಈ ಕಿಸಾನ್‌ ಕಾಲ್‌ ಸೆಂಟರ್‌ ಮೂಲಕ ರೈತರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲಾಗುತ್ತದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ರೈತರಿಗಾಗಿ ಕಿಸಾನ್ ಕಾಲ್ ಸೆಂಟರ್‌ನ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. 

ರೈತರು 1800 1801 551ಕ್ಕೆ ಕರೆ ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಅಷ್ಟೆ ಅಲ್ಲದೆ ಒಟ್ಟು 22 ಭಾಷೆಗಳಲ್ಲಿ ಮಾಹಿತಿ ಪಡೆಯಬಹುದು.

7-

ಇದೀಗ ದೆಹಲಿ ಸೇರಿದಂತೆ ಸುತ್ತ ಮುತ್ತಲಿನ ರಾಜ್ಯಗಳಲ್ಲಿ ವಿಪರೀತ ಚಳಿ ಹೆಚ್ಚಿದೆ. ಈ ನಡುವೆಯೂ ಕುಗ್ಗದೆ ಪಂಜಾಬ್‌ನಲ್ಲಿ ರೈತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸಲಾಗುವುದು

ಎಂದು ಪಂಜಾಬ್‌ನ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ತಿಂಗಳಿನಿಂದ ರೈತರು ತಮ್ಮ ಬೇಡಿಕೆಗಳಿಗಾಗಿ ಧರಣಿ ಕುಳಿತಿದ್ದಾರೆ. ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ವತಿಯಿಂದ ರೈತರು ಡಿಸಿ ಕಚೇರಿ ಮತ್ತು ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

8 –

ಉತ್ತರ ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲೊಂದಾದ ಬಾದಾಮಿ ಬನಶಂಕರಿ ಜಾತ್ರೆ ಆರಂಭವಾಗಿದೆ. ಲಕ್ಷಾಂತರ ಭಕ್ತರ ಮಧ್ಯೆ ವೈಭವದಿಂದ ದೇವಿ ರಥೋತ್ಸವ ಜರುಗಿತು. ಕರ್ನಾಟಕ  ಮಹಾರಾಷ್ಟ್ರ, ಆಂಧ್ರ ತೆಲಂಗಾಣದಿಂದ ಬಂದಿದ್ದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ದೇವಾಲಯದಿಂದ ಪಾದಗಟ್ಟಿಯವರೆಗೆ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು. ಸುಮಾರು ಒಂದು ತಿಂಗಳು ಈ ಜಾತ್ರೆ ನಡೆಯಲಿದ್ದು ಜಾತ್ರೆ ಪ್ರಾರಂಭವಾಗುವ ಒಂದು ದಿನ ಮೊದಲು ಪಲ್ಲೇದ ಹಬ್ಬ ಎಂದು ಮಾಡುತ್ತಾರೆ. ಈ ವೇಳೆ ವಿವಿಧ ಬಗೆ ಸುಮಾರು 50ಕ್ಕೂ ಹೆಚ್ಚು ತರಕಾರಿಗಳಿಂದ ದೇವಿಯ ಅಲಂಕಾರ ಮಾಡಲಾಗುತ್ತದೆ.

9-

ರೈತರು ತಮ್ಮ ಉತ್ಪನ್ನಗಳನ್ನು ರಾಷ್ಟ್ರೀಯವಾಗಿ ಮಾರಾಟ ಮಾಡಲು ಇ-ನಾಮ್ ಮಾರುಕಟ್ಟೆಯನ್ನು ಬಳಸಲು ಸೂಚಿಸಿದೆ. ರೈತರು ತಮ್ಮ ಹತ್ತಿರದ ಕೃಷಿ ಮಾರುಕಟ್ಟೆ ಮತ್ತು ಕೃಷಿ ವ್ಯಾಪಾರ ಇಲಾಖೆ ನಿಯಂತ್ರಿತ

ಮಾರಾಟ ಸಭಾಂಗಣಗಳ ಮೂಲಕ ಉತ್ತಮ ಬೆಲೆ ಪಡೆಯಲು ಇದನ್ನು ಬಳಸಬಹುದು. ಇ-ನಾಮ್ ಮೂಲಕ ರೈತರು ಪಾರದರ್ಶಕ ಬೆಲೆ, ಗುಣಮಟ್ಟದ ಬೆಲೆ, ರಾಷ್ಟ್ರ ಮಟ್ಟದ ಮಾರುಕಟ್ಟೆ ಸೌಲಭ್ಯ ಪಡೆದುಕೊಳ್ಳಬಹುದು.

ಇಲ್ಲಿ ಮಾರಾಟವಾದ ನಂತರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ಕ್ರೆಡಿಟ್ ಆಗಲಿದೆ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಸ್ಥಳೀಯ ಕೃಷಿ ಮಾರಾಟ ಮತ್ತು ಕೃಷಿ ವ್ಯಾಪಾರ ಇಲಾಖೆ ಕಚೇರಿಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.

10-

ಬೆಂಗಳೂರಿನಲ್ಲಿ ಜನವರಿ 8ರಿಂದ ಜನ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 10ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬಾನು ಮುಷ್ತಾಕ್‌ ವಹಿಸುವರು.

ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮ್ಮೇಳನದ ಸಮಾರೋಪ ಸಂಜೆ 5ಕ್ಕೆ ನಡೆಯಲಿದ್ದು, ಕೆ.ಮರುಳಸಿದ್ದಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ. 9.30ಕ್ಕೆ ಬಂಡಾಯದ ಗೆರೆಗಳು: ವ್ಯಂಗ್ಯಚಿತ್ರ ಮತ್ತು ಪೋಸ್ಟರ್‌ಗಳ ಪ್ರದರ್ಶನಕ್ಕೆ ರಘುನಂದನ ಚಾಲನೆ ನೀಡುವರು.

ಮಧ್ಯಾಹ್ನ 12.30ರಿಂದ ವಿಚಾರಗೋಷ್ಠಿ ಆರಂಭವಾಗಲಿದೆ. ಡಾ.ಮಹಮದ್‌ ಮುಸ್ತಾಫಾ ಅವರು ‘ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವ’ ಕುರಿತು ಮಾತನಾಡಲಿದ್ದಾರೆ. ಟಿ.ಗುರುರಾಜ್‌ ಅವರು ‘ಕನ್ನಡ ನಾಡು ನುಡಿಗೆ ಟಿಪ್ಪು ಕೊಡುಗೆಗಳು’ ಕುರಿತು ವಿಷಯ ಮಂಡಿಸಲಿದ್ದಾರೆ.

ನಾ. ದಿವಾಕರ್ ಅಧ್ಯಕ್ಷತೆ ವಹಿಸುವರು. ಲಿಂಗದೇವರು ಹಳೆಮನೆ ಸಂಪಾದಕತ್ವದ ‘ಧೀರ ಟಿಪ್ಪು ಲಾವಣಿಗಳು’ ಹಾಗೂ ಗುರುರಾಜ್‌ ಅವರ ‘ನಮ್ಮ ಟಿಪ್ಪು– ವಂದತಿ ಮತ್ತು ಸತ್ಯ ಸಂಗತಿ’ ಪುಸ್ತಕಗಳ ಬಿಡುಗಡೆ ಮಾಡಲಾಗುವುದು.

ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು

ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.  

ನಮಸ್ಕಾರ…