News

ಬಿತ್ತನೆ ಬೀಜ ಸಬ್ಸಿಡಿಗಾಗಿ 80 ಕೋಟಿ ರೂ. ಬಿಡುಗಡೆ: ಸಚಿವ ಬಿ.ಸಿ. ಪಾಟೀಲ್

09 June, 2021 1:33 PM IST By: KJ Staff
ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಭಾಗವಹಿಸಿದ್ದರು.

ರೈತರಿಗೆ ನೀಡಲಾಗುವ ಬಿತ್ತನೆ ಬೀಜದ ಸಬ್ಸಿಡಿಗಾಗಿ ಪ್ರಸಕ್ತ ವರ್ಷ ರಾಜ್ಯ ಸರ್ಕಾರ ಒಟ್ಟು 80 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

 ಪ್ರಸಕ್ತ ವರ್ಷದ ಮುಂಗಾರು ಹಂಗಾಮು ಸಿದ್ಧತೆ ಕುರಿತಂತೆ ದಾವಣಗೆರೆಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ವರ್ಷದ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಲು ವಿವಿಧ ಬೆಳೆಗಳ ಸುಮಾರು 1.63 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜದ ದಾಸ್ತಾನು ಇದೆ. ಬೀಜ ಹಾಗೂ ರಸಗೊಬ್ಬರದ ಯಾವುದೇ ಕೊರತೆಯ್ಲಿದ ಕಾರಣ ರೈತರು ಚಿಂತಿಡುವ ಅಗತ್ಯವಿಲ್ಲ ಎಂದರು.

87,629 ಕ್ವಿಂಟಾಲ್ ಬೀಜ ವಿತರಣೆ

ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಹಂಗಾಮಿಗಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ಗೊಬ್ಬರ ಲಭ್ಯವಿದೆ. ಹೀಗಾಗಿ ರೈತರು ಮುಗಿಬಿದ್ದು ಬೀಜ ಹಾಗೂ ಗೊಬ್ಬರ ಖರೀದಿಸುವ ಅಗತ್ಯವಿಲ್ಲ. ಈಗಾಗಲೆ ರಾಜ್ಯದಲ್ಲಿ 87,629 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ವಿತರಿಸಲಾಗಿದ್ದು, ಇನ್ನೂ 1.63 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. ಸರ್ಕಾರದಿಂದ 14 ಬಗೆಯ ಬೆಳೆಗಳ ಬೀಜಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ ಬಿತ್ತನೆ ಬೀಜದ ಸಬ್ಸಿಡಿಗಾಗಿ 50 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಕಳೆದ ಭಾನುವಾರವಷ್ಟೇ ಹೆಚ್ಚುವರಿಯಾಗಿ 30 ಕೋಟಿ ರೂ. ಬಿಡುಗಡೆ ಮಾಡಿದ್ದು, ಒಟ್ಟಾರೆ 80 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದಂತಾಗಿದೆ. ಸೆಣಬು, ಹಸಿರೆಲೆ ಗೊಬ್ಬರಕ್ಕೆ ಪ್ರೋತ್ಸಾಹ ನೀಡಲು 5 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಈ ವರ್ಷ ರೈತರಿಗೆ ಯಾವುದೇ ಕೊರತೆಯಾಗದ ರೀತಿ ಬೀಜ ಹಾಗೂ ಗೊಬ್ಬರ ಪೂರೈಕೆಗೆ ಸರ್ಕಾರ ಬದ್ಧವಾಗಿದೆ. ಕಳಪೆ ಬಿತ್ತನೆ ಬೀಜ ಪೂರೈಸುವವರು, ಹೆಚ್ಚಿನ ದರಕ್ಕೆ ಬೀಜ ಹಾಗೂ ಗೊಬ್ಬರ ಮಾರಾಟ ಮಾಡುವವರು ಹಾಗೂ ಕೃತಕ ಅಭಾವ ಸೃಷ್ಟಿಸುವ ಕಾಳಸಂತೆಕೋರÀರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಕೃಷಿ ಇಲಾಖೆಯ ಜಾಗೃತ ದಳ ನಿರತವಾಗಿದೆ. ಇಂತಹ ಯಾವುದೇ ಪ್ರಕರಣ ಕಂಡುಬAದಲ್ಲಿ ತಪ್ಪಿತಸ್ಥರ ವಿರುದ್ಧ ಐಪಿಸಿ 420 ರನ್ವಯ ಪ್ರಕರಣ ದಾಖಲಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು, ಹಾಗೂ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಸಚಿವರು, ದಾವಣಗೆರೆ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಜೈವಿಕ ಕೀಟನಾಶಕ ಪೂರೈಸಿದ 59 ಪ್ರಕರಣಗಳನ್ನು ಪತ್ತೆಹಚ್ಚಿ, ಮೊಕದ್ದಮೆ ಹೂಡಲಾಗಿದ್ದು, ಈ ಸಂಬAಧ ಕೃಷಿ ಪರಿಕರ ಮಾರಾಟ ಮಾಡುವ 10 ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗಿದೆ ಎಂದರು.

46,922 ಕ್ವಿಂಟಾಲ್ ಬೀಜ ದಾಸ್ತಾನು

ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ (120 ಮಿ.ಮೀ.)  ಗಿಂತಲೂ ಹೆಚ್ಚು (203 ಮಿ.ಮೀ.) ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 2.43 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಇದ್ದು, ಈವರೆಗೆ 8002 ಹೆಕ್ಟೇರ್ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಭತ್ತ ಹಾಗೂ ಮುಸುಕಿನ ಜೋಳ ಅಲ್ಲದೆ ಶೇಂಗಾ ಬೆಳೆಯನ್ನು ಪ್ರಮುಖವಾಗಿ ಬೆಳೆಯುತ್ತಿದ್ದು, 16750 ಕ್ವಿಂಟಾಲ್ ಭತ್ತ, 19288 ಕ್ವಿಂಟಾಲ್ ಮುಸುಕಿನಜೋಳ, 5100 ಕ್ವಿಂಟಾಲ್ ಶೇಂಗಾದ ಬಿತ್ತನೆ ಬೀಜ ದಾಸ್ತಾನಿದೆ, ಜೊತೆಗೆ ರಾಗಿ, ಜೋಳ, ತೊಗರಿ, ಹೆಸರು, ಅಲಸಂದೆ, ಸೂರ್ಯಕಾಂತಿ, ಹತ್ತಿ ಬೀಜ ಕೂಡ ಸಾಕಷ್ಟು ಲಭ್ಯವಿದ್ದು, ಒಟ್ಟು 46,922 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 29345 ಮೆ.ಟನ್ ರಸಗೊಬ್ಬರ ವಿತರಿಸಲಾಗಿದ್ದು, ಯೂರಿಯಾ-19558 ಮೆ.ಟನ್, ಡಿಎಪಿ-1604, ಎನ್‌ಪಿಕೆ ಕಾಂಪ್ಲೆಕ್ಸ್-17162, ಎಂಒಪಿ-2474 ಸೇರಿದಂತೆ ಒಟ್ಟು 40798 ಮೆ.ಟನ್ ರಸಗೊಬ್ಬರ ದಾಸ್ತಾನು ಇದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ಬಗೆಯ ಬೀಜ, ಹಾಗೂ ಗೊಬ್ಬರದ ಕೊರತೆಯಾಗದಂತೆ, ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಕೃಷಿ ಸಾಮಗ್ರಿ ಪೂರೈಕೆಗೆ ಸರ್ಕಾರ ಬದ್ಧವಿದೆ ಎಂದರು.