ಕಳೆದೆರಡು ದಿನಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಮಳೆಯ ತಗ್ಗಿದರೂ ಸಹ ಪ್ರವಾಹ ಇನ್ನೂ ತಗ್ಗಿಲ್ಲ. ಮಹಾರಾಷ್ಟ್ರದ ಉಜನಿ ಹಾಗೂ ವೀರ ಜಲಾಶಯದಿಂದ ಭೀಮಾ ನದಿಗೆ ಮತ್ತೆ ನೀರು ಬಿಡಲಾಗಿದ್ದು, ಪ್ರವಾಹ ಮಟ್ಟ ಹೆಚ್ಚುತ್ತಿದೆ. ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್ ನಿಂದ ಶನಿವಾರ ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಮುಂದೆ ಇನ್ನೂ ಹೆಚ್ಚಿನ ನೀರು ಹರಿಬಿಡುವ ಸಾಧ್ಯತೆವಿದ್ದು, ಇದು ಭೀಕರ ಪ್ರವಾಹದ ಮುನ್ಸೂಚನೆಯಾಗಿರುತ್ತದೆ.
ಜೇವರ್ಗಿ ಬಳಿಯ ಕಟ್ಟಿಸಂಗಾವಿ ಸೇತುವೆ ಮೇಲೆ ವಾಹನ ಸಂಚಾರವನ್ನು ಮತ್ತೆ ನಿರ್ಬಂಧಿಸಲಾಗಿದೆ. ಇದರಿಂದಾಗಿ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ನೇರ ಸಂಚಾರ ಸ್ಥಗಿತಗೊಂಡಿದೆ. ಅಫಜಲ್ಪುರ ಮಾರ್ಗವಾಗಿ ದೇವಣಗಾಂವ ಸೇತುವೆ ಮೂಲಕ ಸಂಚರಿಸಬೇಕಾಗಿದೆ. ಕಟ್ಟಿ ಸಂಗಾವಿಯ ಹೊಸ ಸೇತುವೆ ಮುಳುಗದಿದ್ದರೂ ಸುರಕ್ಷತಾ ಕ್ರಮವಾಗಿ ಬಂದ್ ಮಾಡಲಾಗಿದೆ. ಪ್ರವಾಹ ಹಿನ್ನೆಲೆಯಲ್ಲಿ ಜಿಲ್ಲೆಯ ಭೀಮಾ ಹಾಗೂ ಕಾಗಿಣಾ ನದಿ ದಂಡೆಯ ಗ್ರಾಮಸ್ಥರು ಕೂಡಲೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಮನವಿ ಮಾಡಿದ್ದಾರೆ.
ಪ್ರವಾಹದಲ್ಲಿ ಸಿಲುಕಿರುವವರ ಸಂರಕ್ಷಣೆಗೆ ಈಗಾಗಲೆ 2 ಎನ್ ಡಿಆರ್ ಎಫ್ ತಂಡಗಳು ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾರ್ಯೋನ್ಮುಖವಾಗಿದೆ. ಇದಲ್ಲದೆ ಎಸ್ ಡಿಅರ್ಎಫ್, ಪೊಲೀಸ್ ಹಾಗೂ ಅಗ್ನಿಶಾಮಕ ದಳ ತಂಡಗಳು ಕ್ಷೇತ್ರದಲ್ಲಿ 24 ಗಂಟೆ ಕಾಲ ಜನರ ಸಂರಕ್ಷಣೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಅದೇ ರೀತಿ ಸೇನೆ ಮತ್ತು ವಾಯುಪಡೆ ತಂಡಗಳು ಜಿಲ್ಲೆಗೆ ಬರಲಿವೆ. ಹೀಗಾಗಿ ಸಾರ್ವಜನಿಕರು ಯಾವುದೇ ಭಯಕ್ಕೆ ಮತ್ತು ಅತಂಕಕ್ಕೆ ಒಳಗಾಗಬಾರದು. ರಕ್ಷಣಾ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವಂತೆ ವಿ.ವಿ.ಜ್ಯೋತ್ಸ್ನಾ ಅವರು ಮನವಿ ಮಾಡಿದ್ದಾರೆ.
ಎರಡು ದಿನಗಳ ಹಿಂದೆ 3.50 ಲಕ್ಷಕ್ಕೂ ಹೆಚ್ಚು ನೀರು ಬಿಟ್ಟಾಗ 6 ರಿಂದ 8 ಅಡಿ ನೀರು ಗ್ರಾಮಗಳ ಒಳಗೆ ಹೊಕ್ಕ ಹಿನ್ನೆಲೆಯಲ್ಲಿ ಜನರು ಅಪಾರ ಸಂಕಷ್ಟಕ್ಕೆ ತುತ್ತಾಗಿದ್ದರು. ಆದರೆ ಈಗ ಸುಮಾರು ಎರಡುಪಟ್ಟು ನೀರು ಬಿಡಲಾಗುತ್ತಿದ್ದರಿಂದ ಇನ್ನೂ ಆಂತಕ ಹೆಚ್ಚಾಗಿದೆ.