ಬೇಟೆಯಾಡುವುದು ಸೇರಿದಂತೆ ಅನೇಕ ಕಾರಣಗಳಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ 750 ಹುಲಿಗಳು ಸಾವನ್ನಪ್ಪಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಈ ಆಘಾತಕಾರಿ ಮಾಹಿತಿ ನೀಡಿದೆ.
ಒಟ್ಟು 750 ಹುಲಿಗಳ ಪೈಕಿ 369 ಹುಲಿಗಳು ನೈಸರ್ಗಿಕ ಕಾರಣಗಳಿಂದಾಗಿ ಸಾವನ್ನಪ್ಪಿದರೆ, ಬೇಟೆಯಾಡಿದ ಪರಿಣಾಮ 168 ಹುಲಿಗಳು ಸಾವನ್ನಪ್ಪಿವೆ. ಇದು ನಿಜಕ್ಕೂ ಆತಂಕಕಾಗಿ ಬೆಳವಣಿಯಾಗಿ ಪರಿಣಮಿಸಿದೆ. ಮಧ್ಯಪ್ರದೇಶದಲ್ಲಿ (173) ಗರಿಷ್ಠ ಹುಲಿಗಳು ಸಾವನ್ನಪ್ಪಿವೆ. ಉಳಿದ 42 ಹುಲಿಗಳು ಅಪಘಾತ ಅಥವಾ ಇನ್ನಿತರ ಅಸ್ವಾಭಾವಿಕ ಕಾರಣಗಳಿಂದಾಗಿ ಸಾವನ್ನಪ್ಪಿವೆ.
ಇದೇ ವೇಳೆ ಕರ್ನಾಟಕ ಕೂಡ 111 ಹುಲಿಗಳ ಸಾವಿಗೆ ಸಾಕ್ಷಿಯಾಗಿದ್ದು, ಈ ಪೈಕಿ 28 ಹುಲಿಗಳು ಬೇಟೆಗಾರರ ಗುಂಡಿಗೆ ಬಲಿಯಾಗಿವೆ.
ಇನ್ನು 2012ರಿಂದ 2019ರ ನಡುವೆ ವಿವಿಧ ರಾಜ್ಯಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ 101 ಹುಲಿಗಳನ್ನು ಗುರುತಿಸಲಾಗಿದೆ. 2012ರಿಂದ ಮೇವರೆಗೆ ಮಹಾರಾಷ್ಟ್ರದಲ್ಲಿ 125, ಕರ್ನಾಟಕದಲ್ಲಿ 111, ಉತ್ತರಾಖಂಡದಲ್ಲಿ 88, ತಮಿಳುನಾಡು ಮತ್ತು ಅಸ್ಸಾಂನಲ್ಲಿ ತಲಾ 54, ಕೇರಳ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 35, ರಾಜಸ್ಥಾನದಲ್ಲಿ 17, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 11 ಹಾಗೂ ಛತ್ತೀಸ್‌ಗಡದಲ್ಲಿ 10 ಹುಲಿಗಳು ಸಾವನ್ನಪ್ಪಿವೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.