ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಹೆಸರಿನಲ್ಲಿ ಯೋಜನೆಯನ್ನು ಆರಂಭಿಸಿದೆ. ವರ್ಷಕ್ಕೆ 6 ಸಾವಿರ ರೂ. ಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದ್ದು ಈ ಯೋಜನೆಗೆ ಯಾವೆಲ್ಲ ರೈತರು ಅರ್ಹರಾಗುತ್ತಾರೆ? ಕೊನೆಯ ದಿನ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಅರ್ಹತೆಗಳು ಏನು?
2 ಹೆಕ್ಟೇರ್(4.94 ಎಕ್ರೆ) ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತ ಕುಟುಂಬ ಈ ಯೋಜನೆಯ ಲಾಭವನ್ನು ಪಡೆಯಬಹುದು. 2019 ಫೆ.1ರ ಒಳಗಡೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಭೂ ದಾಖಲೆಗಳಲ್ಲಿ ನೊಂದಣಿಯಾದ ರೈತರು ಈ ಯೋಜನೆಗೆ ಅರ್ಹರಾಗುತ್ತಾರೆ. ಸರ್ಕಾರಿ ಉದ್ಯೋಗಿಗಳ ಪೈಕಿ ಗ್ರೂಪ್ ಡಿ/ ಬಹು ಕಾರ್ಯ ನಿರ್ವಹಿಸುವ ಸರ್ಕಾರಿ ನೌಕಕರು/ ನಾಲ್ಕನೇಯ ವರ್ಗದ ಸಿಬ್ಬಂದಿ ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಪಿಎಂ-ಕಿಸಾನ್ ಯೋಜನೆಗೆಂದು ಕೇಂದ್ರ ಸರ್ಕಾರ pmkisan.nic.in ವೆಬ್‍ಸೈಟ್ ತೆರೆದಿದೆ. ಈ ಯೋಜನೆಗೆ ಅರ್ಹತೆ ಪಡೆದ ರೈತರು ಈ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಪಿಎಂ-ಕಿಸಾನ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಬಹುದು. ಆನ್‍ಲೈನ್ ಮೂಲಕ ಈ ವೆಬ್‍ಸೈಟ್ ನಲ್ಲಿ ರೈತರು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ರೈತರು ತಮ್ಮ ಹೆಸರನ್ನು ಹಾಗೂ ವಿವರಗಳನ್ನು ನೊಂದಾಯಿಸಲು ಫೆ. 25 ಕೊನೆಯ ದಿನಾಂಕವಾಗಿದೆ.
ಯಾವ ದಾಖಲೆಗಳು ಬೇಕು?
ಸರ್ಕಾರದಿಂದ ಅನುಮೋದಿಸಿದ ಐಡಿ ಪುರಾವೆಗಳು, ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಮಾಹಿತಿ, ಕೃಷಿ ಭೂವಿಯ ದಾಖಲೆಗಳು ರೈತರ ಬಳಿ ಇರಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು.
ಈ ಯೋಜನೆಯಲ್ಲಿ ಗ್ರಾಮೀಣ ಕೃಷಿ ಭೂಮಿ ಅಥವಾ ನಗರ ಕೃಷಿ ಭೂಮಿಯೆಂದು ತಾರತಮ್ಯ ಮಾಡುವುದಿಲ್ಲ. ಗ್ರಾಮೀಣ ಹಾಗೂ ನಗರ ವ್ಯಾಪ್ತಿಗೆ ಬರುವ ಎರಡು ಕೃಷಿ ಭೂಮಿಗಳ ರೈತರು ಈ ಯೋಜನೆಗೆ ಅರ್ಹರು. ನಗರದಲ್ಲಿರುವ ಕೃಷಿ ಭೂಮಿಯನ್ನು ಪ್ರಸ್ತುತ ಈಗ ಕೃಷಿಗೆ ಚಟುವಟಿಕೆಗೆ ಬಳಸುತ್ತಿದ್ದರೆ ಮಾತ್ರ ಯೋಜನೆಯ ಫಲವನ್ನು ಪಡೆಯಬಹುದು.
ಎಷ್ಟು ಹಣ ಬರುತ್ತದೆ?
2 ಹೆಕ್ಟೇರ್ ಜಮೀನು ಹೊಂದಿರುವ ಸಣ್ಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷಕ್ಕೆ 6 ಸಾವಿರ ರೂ. ಮೊತ್ತವನ್ನು 2 ಸಾವಿರ ರೂ. ನಂತೆ ಮೂರು ಕಂತುಗಳಲ್ಲಿ ಜಮೆ ಮಾಡುವ `ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಎಂದು ಕರೆಯಲಾಗುವ ಯೋಜನೆಯನ್ನು ಹಣಕಾಸು ಸಚಿವ ಪಿಯೂಶ್ ಗೋಯಲ್ ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದರು.
ಈ ಯೋಜನೆಯಿಂದ 12 ಕೋಟಿಯಷ್ಟು ಸಣ್ಣ ಮತ್ತು ಬಡರೈತರಿಗೆ ಪ್ರಯೋಜನವಾಗಲಿದ್ದು, 2019-20ರ ಸಾಲಿನಲ್ಲಿ ಸರ್ಕಾರಕ್ಕೆ 75 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಕೃಷಿ ಸಂಬಂಧಿ ಇತರ ಚಟುವಟಿಕೆಗಳಿಗೆ ಈ ಹಣ ನೆರವಾಗಲಿದೆ. ರೈತರು ಗೌರವಯುತ ಜೀವನ ಸಾಗಿಸಲು ಇದರಿಂದ ಸಾಧ್ಯವಾಗುತ್ತದೆ. 2018-19ರ ಸಾಲಿನಲ್ಲಿ ಪರಿಷ್ಕೃತ ಅಂದಾಜು ವಿಭಾಗದಲ್ಲಿ 20 ಸಾವಿರ ಕೋಟಿ ರೂ. ನೀಡಲಾಗಿದೆ. 2018ರ ಡಿಸೆಂಬರ್ ಪೂರ್ವಾನ್ವಯದಂತೆ ಈ ಯೋಜನೆ ಜಾರಿಯಾಗಲಿದೆ ಎಂದು ಗೋಯಲ್ ತಿಳಿಸಿದ್ದರು.
ಚುನಾವಣೆಗೆ ಮೊದಲು ಬೀಳುತ್ತೆ ಹಣ:
ಲೋಕಸಭಾ ಚುನಾವಣೆಯ ಒಳಗಡೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗಳಿಗೆ 4 ಸಾವಿರ ರೂ. ಜಮೆಯಾಗುವ ಸಾಧ್ಯತೆಯಿದೆ. ಈ ಯೋಜನೆ ಅನ್ವಯ ಮೊದಲ ಕಂತನ್ನು ಮಾರ್ಚ್ 31ರ ಒಳಗಡೆ ಹಾಕಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಇದರ ಜೊತೆಯಲ್ಲೇ ಎರಡನೇ ಕಂತಿನ ಹಣವನ್ನು ಲೋಕಸಭಾ ಚುನಾವಣೆಯ ಒಳಗಡೆ ಜಮೆ ಮಾಡಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಕೃಷಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಶೀಘ್ರವೇ ರೈತರ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದೆ.
ಯಾವೆಲ್ಲ ರೈತರಿಗೆ 6 ಸಾವಿರ ರೂ. ಸಿಗುತ್ತೆ? ಅರ್ಹತೆ ಏನು? ಯಾವಾಗ ಕೊನೆಯ ದಿನ? ಇಲ್ಲಿದೆ ಪೂರ್ಣ ಮಾಹಿತಿ
26 February, 2019 10:23 PM IST