ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
1. ಗ್ರಾಮ ನ್ಯಾಯಾಲಯ ಸ್ಥಾಪನೆಗೆ ಸಿದ್ಧತೆ: ಸಿ.ಎಂ
2. ಆಸ್ತಿ ನೋಂದಣಿ, ಮುದ್ರಾಂಕ ಶುಲ್ಕ ಇಂದಿನಿಂದ ಹೆಚ್ಚಳ
3. ರಾಜ್ಯದಾದ್ಯಂತ 600 ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭ
4. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ
5. ನಟಿ ಶ್ರೀದೇವಿಯದ್ದು ಸಹಜ ಸಾವಲ್ಲ, ಸಾವಿನ ಕಾರಣ ತಿಳಿಸಿದ ಪತಿ ಬೋನಿ ಕಪೂರ್
ಸುದ್ದಿಗಳ ವಿವರ ಈ ರೀತಿ ಇದೆ.
1. ಕರ್ನಾಟಕದ ಗ್ರಾಮಗಳಲ್ಲಿ ಸೃಷ್ಟಿಯಾಗುವ ವ್ಯಾಜ್ಯಗಳನ್ನು ಗ್ರಾಮಗಳ ಹಂತದಲ್ಲೇ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ನ್ಯಾಯಾಲಯಗಳನ್ನು
ಸ್ಥಾಪಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ
ಮತ್ತು ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಾತ್ಮಗಾಂಧಿ ಅವರ ಗ್ರಾಮ ಸ್ವರಾಜ್ಯ ಮತ್ತು ಅಧಿಕಾರ ವಿಕೇಂದ್ರೀಕರಣ ಆಶಯದಂತೆ ಗ್ರಾಮ
ನ್ಯಾಯಾಲಯಗಳ ಸ್ಥಾಪನೆಯಾದರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
-----------------
2. ರಾಜ್ಯಾದ್ಯಂತ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಇಂದಿನಿಂದ ನೋಂದಣಿಯಾಗುವ ಆಸ್ತಿಗಳಿಗೆ
ಪರಿಷ್ಕೃತ ಮಾರ್ಗಸೂಚಿ ದರ ಅನ್ವಯ ಆಗಲಿದೆ. ಹೀಗಾಗಿ ಶೇಕಡ 20 ರಿಂದ 30ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಹೊರೆ ಹೆಚ್ಚಾಗಲಿದೆ.
-----------------
3. ಕರ್ನಾಟಕದಲ್ಲಿ ಒಂದರಿಂದ 12ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವುದಕ್ಕೆ
ಅವಕಾಶ ಕಲ್ಪಿಸುವುದು ಹಾಗೂ ಅಗತ್ಯ ಮೂಲಸೌಲಭ್ಯ ಇರುವ 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು
ಮುಂದಿನ ವರ್ಷದ ಒಳಗಾಗಿ ರಾಜ್ಯದಾದ್ಯಂತ ಪ್ರಾರಂಭಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
-----------------
4. ರಾಜ್ಯದ ವಿವಿಧ ಭಾಗದಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಮಂಗಳವಾರ ಕರಾವಳಿಯ ಕೆಲವು ಕಡೆಗಳಲ್ಲಿ
ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಇನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಕೆಲವು ಕಡೆಗಳಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ.
ಗರಿಷ್ಠ ಉಷ್ಣಾಂಶವು 30 ಮತ್ತು ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್ ಇರಲಿದೆ
ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
-----------------
5. ಭಾರತ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ಅವರ ಸಾವಿನ ಕುರಿತು ಇದೇ ಮೊದಲ ಬಾರಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಮಾತನಾಡಿದ್ದಾರೆ.
ಶ್ರೀದೇವಿ ಮಿತಿಮೀರಿ ಡಯಟ್ ಮಾಡುತ್ತಿದ್ದರು. ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ ವೇಳೆ ಬರೋಬ್ಬರಿ 45 ಕೆ.ಜಿಗಿಂತಲೂ ಹೆಚ್ಚು ತೂಕ ಇಳಿಸಿಕೊಂಡಿದ್ದರು.
ಅಲ್ಲದೇ ಆಹಾರದಲ್ಲಿ ಉಪ್ಪು ಬಳಸುತ್ತಿರಲಿಲ್ಲ. ಇದರಿಂದ ಅವರ ಬಿಪಿ ತುಂಬಾ ಕಡಿಮೆ ಆಗಿತ್ತು ಎಂದಿದ್ದಾರೆ.
ಶ್ರೀದೇವಿ ಅವರದ್ದು ಸಹಜ ಸಾವಲ್ಲ ಅದೊಂದು ಆಕಸ್ಮಿಕ ಸಾವು ಎಂದು ಬೋನಿ ಕಪೂರ್ ಹೇಳಿದ್ದಾರೆ.
ಇನ್ನು 2018ರ ಫೆಬ್ರುವರಿ 24 ರಂದು ದುಬೈನ ಐಷಾರಾಮಿ ಹೋಟೆಲ್ವೊಂದರ ಸ್ನಾನಗೃಹದ ಬಾತ್‌ಟಬ್ ನೀರಿನಲ್ಲಿ
ಮುಳುಗಿ ಶ್ರೀದೇವಿ ಮೃತಪಟ್ಟಿದ್ದರು. ದುಬೈ ಪೊಲೀಸರು ವಿಚಾರಣೆ ನಡೆಸಿ ಶ್ರೀದೇವಿ ಸಾವು ಕೊಲೆಯಲ್ಲ ಎಂದು ಸ್ಪಷ್ಟಪಡಿಸಿದ್ದರು.