News

ಎಸ್.ಸಿ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ-ಕೋಟಾ ಶ್ರೀನಿವಾಸ ಪೂಜಾರಿ

11 August, 2021 9:54 PM IST By:

ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೀಡಲಾಗುವ ಸಹಾಯಧನ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಇಲಾಖೆಯ ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ಮುಂಚೆ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ 1.70 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತಿತ್ತು. ಈ ಮೊತ್ತದಲ್ಲಿ ಈಗಿನ ಕಾಲದಲ್ಲಿ ಮನೆ ನಿರ್ಮಾಣ ಮಾಡುವುದು ಅಸಾಧ್ಯದ ಮಾತು. ಹಾಗಾಗಿ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಒಂದು ವರ್ಷ ಕಾಲ ಇಲಾಖೆಯಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಅನಿವಾರ್ಯ ಅಲ್ಲದ ಯೋಜನೆಗಳನ್ನು ತಡೆ ಹಿಡಿಯಲಾಗುವುದು. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಉತ್ತಮವಾದ ಮನೆ, ಶೌಚಾಲಯ, ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗುಣಮಟ್ಟದ ಆರೋಗ್ಯ ಸೌಲಭ್ಯ ಮತ್ತು ಅವರ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಪರಿಶಿಷ್ಟ ಜಾತಿ‌ಯ ಕುಟುಂಬಗಳಿಗೆ ಉತ್ತಮ ಮನೆ, ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಒದಗಿಸುವುದು, ವಿದ್ಯುತ್ ವ್ಯವಸ್ಥೆ, ಗುಣಮಟ್ಟದ ಆರೋಗ್ಯ ಸೌಕರ್ಯ ಒದಗಿಸುವುದು, ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ. ಪಾರದರ್ಶಕ‌ವಾಗಿ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಕೆಲಸಗಳು ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ತರಲಾಗುವುದು‌. ಪಾರದರ್ಶಕತೆ ಇಲ್ಲದೆ ಯಾವುದೇ ಅನುದಾನ ಬಳಕೆಗೂ ಅವಕಾಶ ನೀಡುವುದಿಲ್ಲ. ಪರಿಶಿಷ್ಟ ಜಾತಿಯವರಿಗೆ ಶೌಚಗೃಹ ಕಟ್ಟಿಸಿಕೊಳ್ಳಳು ಗ್ರಾಪಂನಿಂದ ತಲಾ 15 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಇದರೊಂದಿಗೆ ಇಲಾಖೆಯಿಂದಲೂ 10 ಸಾವಿರ ರೂಪಾಯಿ ನೆರವು ನೀಡಲು ನಿರ್ಧರಿಸಲಾಗಿದೆ ಎಂದರು.

ಬಹುಕಾಲದಿಂದಲೂ ಖಾಸಗಿ ಜಮೀನಿನಲ್ಲಿ ವಾಸವಿರುವ ಮನೆ, ನಿವೇಶನರಹಿತ ಸಾವಿರಾರು ಎಸ್ಸಿ ಕುಟುಂಬಗಳು ಹಕ್ಕುಪತ್ರಗಳಿಂದ ವಂಚಿತವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಆಯಾ ಜಿಲ್ಲಾಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ವಾಸಿಸುವವರಿಗೆ ಹಕ್ಕುಪತ್ರ ನೀಡುವುದಕ್ಕೆ ಅನುಕೂಲವಾಗಲಿದೆ. ಇದಕ್ಕಾಗಿ ಸಮೀಕ್ಷೆ ನಡಸಲು ಸೂಚಿಸಲಾಗಿದೆ ಎಂದು ಹೇಳಿದರು.