ಧಾರಾಕಾರ ಮಳೆ ಹಾಗೂ ನದಿ ಹಳ್ಳಕೊಳ್ಳಗಳಲ್ಲಿ ಉಕ್ಕಿ ಬಂದ ಪ್ರವಾಹದಿಂದಾಗಿ ರಾಜ್ಯದಲ್ಲಿ ಈ ವರ್ಷ 4.59 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಈ ಪ್ರಮಾಣ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ಅವರು ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ವಿಧಾನ ಪರಿಷತ್‌ನಲ್ಲಿ ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ‘23 ಜಿಲ್ಲೆಗಳ 130 ತಾಲ್ಲೂಕುಗಳು ಪ್ರವಾಹ ಎದುರಿಸಿವೆ. ಆಗಸ್ಟ್ 4ರಿಂದ ಈಚೆಗೆ ರಾಜ್ಯದಲ್ಲಿ ವಾಡಿಕೆಯ ಶೇ 400ರಷ್ಟು ಮಳೆ ಬಿದ್ದಿದೆ’ ಎಂದರು.
ಇದುವರೆಗೆ 125 ಜನ ಮೃತಪಟ್ಟಿದ್ದಾರೆ. 344 ಜಾನುವಾರು ಸತ್ತಿವೆ. 13573 ಮನೆಗಳು ಹಾನಿಯಾಗಿವೆ. 3 ಲಕ್ಷ ಹೆಕ್ಟೆರ್ ಕೃಷಿ ಭೂಮಿ ಹಾಗೂ 57 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ ಎಂದರು.
ಕಳೆದ ವರ್ಷವೂ ಸಹ ಅತಿವೃಷ್ಟಿಯುಂಟಾಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಈ ವರ್ಷ ಮತ್ತೆ ಅತೀವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ. ರಾಜ್ಯವು ಸತತವಾಗಿ ಎರಡನೇ ವರ್ಷ ಪ್ರವಾಹ ಸ್ಥಿತಿ ಎದುರಿಸುತ್ತಿದೆ. ಈ ಹಿಂದಿನ ಅಂದಾಜಿನಲ್ಲಿ₹ 9,445 ಕೋಟಿ ನೆರವು ಕೋರಿ ಪ್ರಧಾನಿಗೆ ಮನವಿ ಸಲ್ಲಿಸಲಾಗಿತ್ತು. ಮತ್ತೆ ಪ್ರವಾಹ ಉಂಟಾಗಿರುವುದರಿಂದ ಮತ್ತೊಮ್ಮೆ ಅಂದಾಜು ಮಾಡಿ, ವರದಿ ಸಲ್ಲಿಸಲಾಗುವುದು. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್)ಯಿಂದ ತುರ್ತಾಗಿ 390 ಕೋಟಿ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದರು.
ಪ್ರವಾಹ ಮತ್ತು ಅತಿವೃಷ್ಟಿ ಎದುರಿ ಸಲು ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗಳಲ್ಲಿ 831 ಕೋಟಿ ಲಭ್ಯವಿದೆ. ಹೆಚ್ಚುವರಿ 50 ಕೋಟಿ ಬಿಡುಗಡೆ ಮಾಡಲಾಗಿದೆ. 92 ಕಾಳಜಿ ಕೇಂದ್ರ ಗಳನ್ನು ತೆರೆದಿದ್ದು, 6,716 ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಹೇಳಿದರು.
ನೆರೆ ಪರಿಹಾರ ಕೇಂದ್ರದಲ್ಲಿ ವಿಶೇಷ ಊಟದ ವ್ಯವಸ್ಥೆಯೊಂದಿಗೆ ನಿರಾಶ್ರಿತರಿಗೆ ಎಲ್ಲಾ ಸೌಲಭ್ಯ ಒದಗಿಸಲಾಗಿದೆ. ಪರಿಹಾರ ಕೇಂದ್ರಗಳಲ್ಲಿಯೇ ಮಾಸ್ಕ್, ಸ್ಯಾನಿಟೈಸರ್, ಕೊರೋನಾ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ.