News

40 ಲಕ್ಷ ಟ್ರ್ಯಾಕ್ಟರ್‌ಗಳೊಂದಿಗೆ ಸಂಸತ್‌ಗೆ ಮುತ್ತಿಗೆ ಹಾಕುತ್ತೇವೆ: ಕೇಂದ್ರ ಸರ್ಕಾರಕ್ಕೆ ಟಿಕಾಯತ್‌ ಎಚ್ಚರಿಕೆ

24 February, 2021 10:24 AM IST By:
Farmer leader Rakesh Tikait

ಕೃಷಿ ಕಾಯ್ದೆಯನ್ನು ಹಿಂಪಡೆಯದೇ ಹೋದರೇ ಮುಂದಿನ ದಿನಗಳಲ್ಲಿ 40 ಲಕ್ಷ ಟ್ರ್ಯಾಕ್ಟರ್‌ಗಳೊಂದಿಗೆ ಸಂಸತ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ನಾಯಕ ರಾಕೇಶ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.

ರಾಜಸ್ಥಾನದ ಶಿಖರ್‌ನಲ್ಲಿ ನಡೆದ ಕಿಸಾನ್‌ ಮಹಾಪಂಚಾಯತ್‌ ಬೃಹತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯ ತಂದರೂ ಸಹ ಸರ್ಕಾರ ಸ್ಪಂದಿಸುತ್ತಿಲ್ಲ. ಕಳೆದ ಮೂರು ತಿಂಗಳಿಂದ ದೆಹಲಿಯಷ್ಟೇ ಅಲ್ಲ, ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಆದರೂ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜನ ಬೀದಿಗೆ ಬಂದಾಗೆಲ್ಲಾ ಸರ್ಕಾರಗಳು ಪತನವಾಗಿದೆ ಎಂದು ಹರ್ಯಾಣದ ಹೇಳಿದ ಮರುದಿನವೇ ರಾಕೇಶ್‌ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಆ ಮೂಲಕ ರೈತರ ಹೋರಾಟ ಮತ್ತಷ್ಟು ತೀವ್ರವಾಗಲಿದೆ ಎನ್ನುವ ಸಂದೇಶ ರವಾನಿಸಿದ್ದಾರೆ.

ಕೇಂದ್ರ ಸರ್ಕಾರ ಸ್ಪಂದಿಸದೆ ನಿರ್ಲಕ್ಷ ಮಾಡುತ್ತಿರುವುದರಿಂದ  ಇದು ಸಂಸತ್‌ಗೆ ಘೇರಾವ್‌ ಹಾಕಲು ಕರೆ ಕೊಡುವ ಸಮಯ. ಸಂಸತ್‌ ಮಾರ್ಚ್‌ ಬಗ್ಗೆ ಸದ್ಯದಲ್ಲೇ ಘೋಷಣೆ ಮಾಡುತ್ತೇವೆ. ಆದರೆ ಈ ಬಾರಿ ನಾಲ್ಕು ಲಕ್ಷ ಅಲ್ಲ ನಲ್ವತ್ತು ಲಕ್ಷ ಟ್ರ್ಯಾಕ್ಟರ್‌ಗಳೊಂದಿಗೆ ಸಂಸತ್‌ಗೆ ಮುತ್ತಿಗೆ ಹಾಕುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

 ಇಂಡಿಯಾ ಗೇಟ್‌ ಬಳಿ ಇರುವ ಉದ್ಯಾನವನಗಳಲ್ಲಿ ಉಳುಮೆ ಮಾಡಿ, ಅಲ್ಲಿ ಗಿಡ ನೆಡುತ್ತೇವೆ ಎಂದು ಹೇಳಿದ್ದಾರೆ. ಸಂಯುಕ್ತ ರೈತ ಸಂಘಟನೆಯ ನಾಯಕರು ಇಷ್ಟರಲ್ಲೇ ದಿನಾಂಕ ಅಂತಿಮಗೊಳಿಸಲಿದ್ದಾರೆ ಎಂದು ಟಿಕಾಯತ್‌ ಹೇಳಿದ್ದಾರೆ.

ಒಂದು ವೇಳೆ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆದು, ಕನಿಷ್ಠ ಬೆಂಬಲ ಬೆಲೆ ಘೋಷಿಸದೇ ಹೋದರೇ ದೇಶದಲ್ಲಿರುವ ದೊಡ್ಡ ದೊಡ್ಡ ಕಂಪನಿಗಳ ಗೋದಾಮನ್ನು ನಾಶ ಮಾಡುತ್ತೇವೆ ಎಂದು ಹೇಳಿದ್ದಾರೆ.