News

ರಾಜಸ್ಥಾನದಲ್ಲಿ 29 ಝಿಕಾ ವೈರಸ್‌ ಪ್ರಕರಣ ಪತ್ತೆ

10 October, 2018 8:33 PM IST By:

ಹೊಸದಿಲ್ಲಿ/ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮೂವರು ಗರ್ಭಿಣಿಯರು ಸೇರಿ 29 ಜನರಲ್ಲಿ ಝಿಕಾ ವೈರಾಣು ಸೋಂಕು ಪತ್ತೆಯಾಗಿದ್ದು, ರಾಜ್ಯದಾದ್ಯಂತ ಭೀತಿ ಹೆಚ್ಚಿದೆ. ಇದರ ಮಧ್ಯೆ ಪ್ರಧಾನಿ ಕಾರ್ಯಾಲಯ ಪರಿಸ್ಥಿತಿ ನಿಯಂತ್ರಣ ಕುರಿತು ಸಮಗ್ರ ವರದಿ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ. ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಮಾರ್ಗದರ್ಶನ ನೀಡಲು ಕೇಂದ್ರ ಸರಕಾರ ಏಳು ತಜ್ಞರ ಉನ್ನತ ನಿಯೋಗವನ್ನು ಜೈಪುರಕ್ಕೆ ಕಳುಹಿಸಿಕೊಟ್ಟಿದೆ.

ಸೋಂಕು ಹರಡಿರುವ ಶಂಕೆಯ ಮೇರೆಗೆ ತಜ್ಞರ ತಂಡಗಳು ಜೈಪುರದ ಸುಮಾರು 6 ಸಾವಿರ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ನಡೆಸಿದ್ದವು. ಈ ವೇಳೆ ಜ್ವರದ ಪ್ರಕರಣಗಳನ್ನು ಪಟ್ಟಿ ಮಾಡಿಕೊಂಡು 160 ಗರ್ಭಿಣಿಯರೂ ಸೇರಿ 450 ಜನರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಇದರಲ್ಲಿ 29 ಜನರಲ್ಲಿ ಝಿಕಾ ವೈರಸ್‌ ಇರುವುದು ಪತ್ತೆಯಾಗಿದೆ ಎಂದು ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ‍್ಯದರ್ಶಿ (ಆರೋಗ್ಯ) ವೀಣಾ ಗುಪ್ತಾ ಹೇಳಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಪರಿಸ್ಥಿತಿಯನ್ನು ವಲೋಕಿಸಲಾಗುತ್ತಿದ್ದು ನಿಯಂತ್ರಣದಲ್ಲಿದೆ. ವದಂತಿಗಳಿಗೆ ಕಿವಿಗೊಟ್ಟು ಆತಂಕಪಡಬೇಡಿ ಎಂದು ಜನತೆಗೆ ಅಭಯ ನೀಡಿದ್ದಾರೆ.

Zika Virus

ಮೇಲ್ವಿಚಾರಣೆ: ''ಝಿಕಾ ಸೋಂಕು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು ಇವುಗಳ ನಿಯಂತ್ರಣಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ ಹಾಗೂ ಆರೋಗ್ಯ ಸೇವೆಗಳ ಮಹಾನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡಗಳು ರಾಜಸ್ಥಾನದಾದ್ಯಂತ ಮೇಲ್ವಿಚಾರಣೆ ನಡೆಸುತ್ತಿದೆ. ರೋಗ ತಪಾಸಣೆ ಹೆಚ್ಚುವರಿ ಕಿಟ್‌ಗಳನ್ನು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ರೋಗ ತಡೆಗೆ ಮುನ್ನೆಚ್ಚರಿಕಾ ಪರಿಕರಗಳನ್ನು ರಾಜ್ಯ ಆರೋಗ್ಯ ಸಚಿವಾಲಯಕ್ಕೆ ವಿತರಿಸಲಾಗಿದೆ,'' ಎಂದು ನಡ್ಡಾ ಹೇಳಿದ್ದಾರೆ

ಬಿಹಾರದಲ್ಲೂ ನಿಗಾ: ಜೈಪುರದಲ್ಲಿ ವ್ಯಾಸಂಗ ಮಾಡುತ್ತಿದ್ದ ಬಿಹಾರ ಮೂಲದ ವಿದ್ಯಾರ್ಥಿ 22 ವರ್ಷದ ಪಂಕಜ್ಚೌರಾಸಿಯಾಗೆ ಝಿಕಾ ವೈರಸ್ತಗುಲಿದೆ. ಈತ ಆ. 28ರಿಂದ ಸೆ.12ರವರೆಗೆ ತಮ್ಮ ಊರಾದ ಸಿವಾನ್ನಲ್ಲಿ ತಂಗಿದ್ದರು. ಈ ಹಿನ್ನೆಲೆಯಲ್ಲಿ ಬಿಹಾರದಲ್ಲೂ ಝಿಕಾ ವೈರಸ್ಬಗ್ಗೆ ನಿಗಾ ವಹಿಸಲಾಗಿದೆ.